ಕನ್ನಡಪ್ರಭ ವಾರ್ತೆ ಆಲಮಟ್ಟಿ ವಿಜಯಪುರ ಜಿಲ್ಲೆಯ ವಂದಾಲ ಗ್ರಾಮದ ಶಾಕಾಂಬರಿ ಪ್ರೌಢಶಾಲೆ ವಿದ್ಯಾರ್ಥಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅಂಕ ತಪ್ಪಾಗಿ ನಮೂದಾಗಿದ್ದು, ವಿದ್ಯಾರ್ಥಿಗೆ ಅನ್ಯಾಯವಾಗಿರುವುದು ಬೆಳಕಿಗೆ ಬಂದಿದೆ. ಗ್ರಾಮದ ವಿದ್ಯಾರ್ಥಿ ಸಂತೋಷ ರಾಘವೇಂದ್ರ ಖೇಡದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ 80ಕ್ಕೆ 66 ಅಂಕ ಪಡೆದಿದ್ದಾನೆ.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ವಿಜಯಪುರ ಜಿಲ್ಲೆಯ ವಂದಾಲ ಗ್ರಾಮದ ಶಾಕಾಂಬರಿ ಪ್ರೌಢಶಾಲೆ ವಿದ್ಯಾರ್ಥಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅಂಕ ತಪ್ಪಾಗಿ ನಮೂದಾಗಿದ್ದು, ವಿದ್ಯಾರ್ಥಿಗೆ ಅನ್ಯಾಯವಾಗಿರುವುದು ಬೆಳಕಿಗೆ ಬಂದಿದೆ. ಗ್ರಾಮದ ವಿದ್ಯಾರ್ಥಿ ಸಂತೋಷ ರಾಘವೇಂದ್ರ ಖೇಡದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ 80ಕ್ಕೆ 66 ಅಂಕ ಪಡೆದಿದ್ದಾನೆ. ಇದು ಉತ್ತರ ಪತ್ರಿಕೆಯ ಝೆರಾಕ್ಸ್ ಪ್ರತಿ ಪಡೆದಾಗ ತಿಳಿದು ಬಂದಿದೆ. ಆದರೆ, ಏ.23ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಂಕಪಟ್ಟಿಯಲ್ಲಿ ಸಂತೋಷಗೆ ವಿಜ್ಞಾನ ವಿಷಯದಲ್ಲಿ ಕೇವಲ 25 ಅಂಕ ಮಾತ್ರ ನಮೂದಾಗಿದೆ. ಇದರಿಂದ ನೊಂದ ವಿದ್ಯಾರ್ಥಿ, ಉತ್ತರ ಪತ್ರಿಕೆಯ ಪ್ರತಿ ಕೋರಿ ಪರೀಕ್ಷಾ ಮಂಡಳಿಗೆ ಅರ್ಜಿ ಸಲ್ಲಿಸಿದ್ದ. ಪ್ರತಿ ಕೈಸೇರಿದಾಗ ಅಸಲಿಯತ್ತು ಬಯಲಾಗಿದೆ.ಉತ್ತರ ಪತ್ರಿಕೆಯ ಮುಖಪುಟದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಎಂದು ಮೂರು ವಿಭಾಗಗಳಿಗೆ ಪ್ರತ್ಯೇಕ ಅಂಕ ನಮೂದಿಸಿ ಒಟ್ಟು ಮೊತ್ತ ಹಾಕಬೇಕು. ಇಲ್ಲಿ ಮೌಲ್ಯಮಾಪಕರು ಅಕ್ಷರದಲ್ಲಿ 66 ಅಂಕ ಎಂದು ಬರೆದಿದ್ದಾರೆ. ಆದರೆ, ಗಣಕಯಂತ್ರದಲ್ಲಿ ದಾಖಲಿಸುವಾಗ ಜೀವಶಾಸ್ತ್ರ ವಿಭಾಗದ 25 ಅಂಕವನ್ನು ಮಾತ್ರ ನಮೂದಿಸಿದ್ದಾರೆ ಎಂದು ಶಾಲೆ ಮುಖ್ಯಶಿಕ್ಷಕ ಆನಂದ ಕಂಠಿ ತಿಳಿಸಿದರು.
ವಾಸ್ತವವಾಗಿ 66 ಅಂಕದ ಜತೆಗೆ ಆಂತರಿಕ ಮೌಲ್ಯಮಾಪನದ 20 ಅಂಕ ಸೇರಿದರೆ ವಿಜ್ಞಾನಕ್ಕೆ ವಿದ್ಯಾರ್ಥಿ ಪಡೆಯಬೇಕಾದ ಒಟ್ಟು ಅಂಕ 100ಕ್ಕೆ 86. ಆದರೆ, ಈಗ ಆಂತರಿಕ ಅಂಕ ಸೇರಿ ಕೇವಲ 45 ಅಂಕ ಬಂದಿದೆ. ಇದರಿಂದ ವಿದ್ಯಾರ್ಥಿಗೆ 41 ಅಂಕ ಕಡಿಮೆಯಾಗಿದ್ದು, ಒಟ್ಟಾರೆ ಫಲಿತಾಂಶದಲ್ಲಿ ಶೇ.6.56 ಅಂಕಗಳ ವ್ಯತ್ಯಾಸವಾಗಿದೆ. ಮೌಲ್ಯಮಾಪಕರು ಮಾಡಿದ ಎಡವಟ್ಟಿನಿಂದ ನಾನು ಹೆಚ್ಚು ಅಂಕ ಪಡೆದರೂ ಕಡಿಮೆ ಅಂಕ ಬಂದಿದೆ. ಪರೀಕ್ಷಾ ಮಂಡಳಿ ತಕ್ಷಣ ನನಗೆ ನ್ಯಾಯ ಒದಗಿಸಬೇಕು ಎಂದು ವಿದ್ಯಾರ್ಥಿ ಸಂತೋಷ ಖೇಡದ ಮನವಿ ಮಾಡಿದ್ದಾನೆ. ಜಾಣ ವಿದ್ಯಾರ್ಥಿ ಸಂತೋಷನ ಸಮಸ್ಯೆ ಬಗೆಹರಿಸಲು ಸದ್ಯ ವಿದ್ಯಾರ್ಥಿಯಿಂದಲೇ ಮರು ಎಣಿಕೆಗೆ ಅರ್ಜಿ ಸಲ್ಲಿಸಲಾಗಿದೆ.
-ಆನಂದ ಕಂಠಿ, ಮುಖ್ಯ ಶಿಕ್ಷಕರು, ಶಾಕಾಂಬರಿ ಪ್ರೌಢಶಾಲೆ, ವಂದಾಲ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.