ಕನ್ನಡಪ್ರಭ ವಾರ್ತೆ ತುಮಕೂರು
ಈ ವೇಳೆ ಮಾತನಾಡಿದ ಅಭ್ಯರ್ಥಿ ವಿ.ಸೋಮಣ್ಣ, ಜನತಾ ಪರಿವಾರದಿಂದ ಬಂದ ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು, ಪ್ರಧಾನಿ ನರೇಂದ್ರ ಮೋದಿ, ನಾಯಕ ಅಮಿತ್ ಷಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತೀರ್ಮಾನ ತೆಗೆದುಕೊಂಡು ನನ್ನನ್ನು ತುಮಕೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರು ಎಂದರು.
ತುಮಕೂರಿನಲ್ಲಿ ಜೆಡಿಎಸ್ ಪಕ್ಷದ ಯಾವೊಬ್ಬ ಕಾರ್ಯಕರ್ತನಿಗೂ ಅಪಚಾರವಾಗದಂತೆ ನಡೆದುಕೊಳ್ಳುವಂತೆ ದೇವೇಗೌಡ ರು ನನಗೆ ಸೂಚನೆ ನೀಡಿದರು. ಅವರ ಸೂಚನೆಯನ್ನು ಕಾಯಾ ವಾಚಾ ಅನುಸರಿಸುತ್ತೇನೆ ಎಂದು ಹೇಳಿದರು.ಈ ಚುನಾವಣೆದೇಶದ ಭವಿಷ್ಯ ನಿರ್ಧಾರ ಮಾಡುವ ಮಹತ್ವದ ಚುನಾವಣೆ. ದೇಶದ ಆಡಳಿತ ಚುಕ್ಕಾಣಿ ಹಿಡಿದು, ಸಮರ್ಥವಾಗಿ ಮುನ್ನಡೆಸುವವರನ್ನು ಆಯ್ಕೆ ಮಾಡುವ ಚುನಾವಣೆ. ಇಂತಹ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರೇ ಮೊತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ದೇವೇಗೌಡರು, ಕುಮಾರಸ್ವಾಮಿಯವರು ತೀರ್ಮಾನ ಮಾಡಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮೋದಿಯವರ ಕೈ ಬಲಪಡಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಕಳೆದ ಬಾರಿ ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್‌ನವರು ಮೋಸ ಮಾಡಿ ಸೋಲಿಸಿದರು. ಆದರೆ ಜೆಡಿಎಸ್‌ನವರು ಮಾತಿಗೆ ತಪ್ಪುವುದಿಲ್ಲ, ಸೋಮಣ್ಣ ಅವರನ್ನು ಗೆಲ್ಲಿಸಲು ಒಟ್ಟಾಗಿ ಶ್ರಮಿಸುತ್ತೇವೆ ಎಂದರು. ಬೂತ್ ಮಟ್ಟದವರೆಗೆ ಎರಡೂ ಪಕ್ಷದ ಕಾರ್ಯಕರ್ತರು ಒಂದಾಗಿ ಕೆಲಸ ಮಾಡೋಣ ಎಂದು ಹೇಳಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ನಿರಂತರವಾಗಿ ಕಾರ್ಯರೂಪಿಸುತ್ತಿದೆ. ಈಗ ಜೆಡಿಎಸ್ ಜೊತೆಯಾಗಿರುವುದು ನಮಗೆ ಆನೆಬಲ ಬಂದಂತಾಗಿದೆ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಒಕ್ಕಲಿಗರ ಸಮುದಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸಿ, ಕಳೆದು ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್ ಮುಖಂಡರ ಜೊತೆ ಸೇರಿ ದೇವೇಗೌಡರನ್ನು ಸೋಲಿಸಲು ಇದೇ ಮುದ್ದಹನುಮೇಗೌಡ ತಂತ್ರ ಮಾಡಿದ್ದರು ಎಂದು ಆಪಾದಿಸಿದರು
ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಶಾಸಕರಾದ ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಸಿ.ಬಿ.ಸುರೇಶ್‌ಬಾಬು, ಮಾಜಿ ಶಾಸಕರಾದ ಸುಧಾಕರಲಾಲ್, ತಿಮ್ಮರಾಯಪ್ಪ, ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿದರು.