- ಹರ ಪೀಠದಿಂದ ಶ್ವಾಸಯೋಗ ಕೇಂದ್ರಕ್ಕೆ ಒಂದು ರು. ಬಳಸಿಲ್ಲ: ವಚನಾನಂದ ಶ್ರೀ - - -
ಶ್ವಾಸಯೋಗ ಕೇಂದ್ರವು ಇಂದಿಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಆ ಪೀಠದ ಹೆಸರಿನಲ್ಲಾಗಲೀ, ನಮ್ಮ ಹೆಸರಿನಲ್ಲಾಗಲೀ ಒಂದೇ ಒಂದು ಇಂಚು ಭೂಮಿಯೂ ಇಲ್ಲ. ಹರ ಪೀಠದಿಂದ ಯಾವುದೇ ಹಣಕಾಸಿನ ವ್ಯವಹಾರ ಮಾಡಿಲ್ಲ. ಒಂದೇ ಒಂದು ರುಪಾಯಿಯನ್ನೂ ನಮ್ಮ ಸ್ವಂತ ಖರ್ಚಿಗೆ ಪಡೆದಿಲ್ಲ. ಯಾವುದೇ ಚೆಕ್‌ಗಳಿಗೆ ನಾವು ಸಹಿ ಮಾಡಿಲ್ಲ. ಚೆಕ್‌ಗೆ ಸಹಿ ಮಾಡುವ ಅಧಿಕಾರವನ್ನೂ ತಾವು ಪಡೆದಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹರ ಪೀಠವೇ ನನ್ನ ಅರಸಿ ಬಂದಿದೆ:ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ, ನಮ್ಮ ಸಮಾಜದ ಸಂಸ್ಕೃತಿ ಪರಂಪರೆಯ ವಾರಸುದಾರನಾಗಿ ಸಮಾಜ ಸೇವೆಗೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ. ನಾನು ಪೀಠವನ್ನು ಅರಸಿಕೊಂಡು ಬರಲಿಲ್ಲ. ಪೀಠವೇ ನನ್ನನ್ನು ಅರಸಿಕೊಂಡು ಬಂದಿದೆ. ಈ ಸಮಾಜದ ನೊಗವನ್ನು ಹೊರಲು ಯಾರೂ ಇಲ್ಲದಿದ್ದಾಗ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅನಾಥಪ್ರಜ್ಞೆಯು ಕಾಡುತ್ತಿದ್ದಾಗ, ಈ ಸಮಾಜದ ಜವಾಬ್ದಾರಿಯ ನೊಗವನ್ನು ಹೊತ್ತಿದ್ದೇನೆ. ನನ್ನೆಲ್ಲ ಶಕ್ತಿ ಸಾಮರ್ಥ್ಯವನ್ನು ಸಮರ್ಪಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಈ ಕ್ಷಣದಿಂದಲೇ ಸಮಾಜದ ಅತ್ಯಂತ ಕಡು ಬಡವನ ಮನೆಗೂ ಪಾದಾರ್ಪಣೆ ಮಾಡುತ್ತೇನೆ. ನನ್ನ ಶ್ವಾಸವಿರುವವರೆಗೂ ಕಡು ಬಡವರ ಗುಡಿಸಲಿರಲಿ, ಮನೆ ಇರಲಿ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ, ಯೋಗಿಕವಾಗಿ ಈ ಸಮಾಜವನ್ನು ಉದ್ಧಾರದ ಹೆದ್ದಾರಿಗೆ ತೆಗೆದುಕೊಂಡು ಹೋಗಲು ಸನ್ನದ್ಧನಾಗಿದ್ದೇನೆ. ಈ ಹಿನ್ನೆಲೆ ನಾವು ಯಾವುದೇ ಹಣಕಾಸಿನ ಅವ್ಯವಹಾರದಲ್ಲೂ ಇಲ್ಲ. ನಾವು ಬಹಳ ಸ್ವಚ್ಛವಾಗಿದ್ದೇವೆ ಮತ್ತು ಸ್ಪಷ್ಟವಾಗಿದ್ದೇವೆ. ನಮ್ಮ ಹೆಸರಿನಲ್ಲಿ ಒಂದೇ ಒಂದು ಇಂಚು ಭೂಮಿ ಸಹ ಇಲ್ಲ. ನಾನು ಪೀಠಕ್ಕೆ ಬಂದಿರುವುದು ಹಣ ಮಾಡಲಿಕ್ಕಲ್ಲ. ಜಗವನ್ನೇ ಸುತ್ತಿದವನು ನಾನು, ಆದರೆ, ಜನರನ್ನ ಮಾಡಿದ್ದೇನೆ. ಬಡವ ಇರಲಿ, ಬಲ್ಲಿದನಿರಲಿ ಎಲ್ಲರಿಗೂ ಬೇಕಾದವನಾಗಿ ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
- - -(ಬಾಕ್ಸ್) * ಸಮಾಜವೇ ನನ್ನ ಶ್ವಾಸ, ನನ್ನ ಸರ್ವಸ್ವ ನಾನು ಬಡತನದಿಂದ ಬಂದವನು. ತಾಯಿ ಗರ್ಭದಲ್ಲಿದ್ದಾಗಲೇ ಗುರುಗಳಿಂದ ದೀಕ್ಷೆ ಪಡೆದುಕೊಂಡು ಅನೇಕ ಮಠಗಳಲ್ಲಿ ಗುರುಗಳ ಪದತಳದಲ್ಲಿ ಅಧ್ಯಯನ ಮಾಡಿದ್ದೇನೆ. ನಾನು ಏನೆಂಬುದನ್ನು ಇಳಕಲ್ ಶ್ರೀ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಅವರನ್ನು, ನನ್ನೊಂದಿಗೆ ಕಲಿತ ಸಹಪಾಠಿಗಳನ್ನು ಕೇಳಬಹುದು. ನಾಡಿನ ಅನೇಕ ಮಠಾಧೀಶರೊಂದಿಗೆ, ಸುತ್ತಮುತ್ತಲಿನ ಅನೇಕ ಪೀಠಾಧೀಶರೊಂದಿಗೆ ಎರಡು ದಶಕಗಳ ಸ್ನೇಹ ಸಂಬಂಧವಿದೆ. ನಮ್ಮ ಉದ್ದೇಶ ಸಮಾಜವನ್ನು ಸರ್ವತೋಮುಖವಾಗಿ ಬೆಳೆಸುವುದಾಗಿದೆ ಎಂದು ವಚನಾನಂದ ಶ್ರೀ ಪುನರುಚ್ಛರಿಸಿದ್ದಾರೆ.
ಶ್ರೀ ಮಠದ ಉಳಿದ ವಿಚಾರಗಳಾದ ಹಣಕಾಸಿನ ಅವ್ಯವಹಾರ ಕುರಿತು ಸಂಘ, ಟ್ರಸ್ಟಿಗಳು ಹಾಗೂ ಆಡಳಿತಾಧಿಕಾರಿಗಳಾದ ಡಾ. ರಾಜಕುಮಾರರು ಉತ್ತರ ನೀಡುತ್ತಾರೆ. ನನ್ನದೊಂದೇ ಉದ್ದೇಶ, ಗುರಿಯಾಗಿದೆ. “ಪಂಚಮಸಾಲಿ ಸಮಾಜವೇ ನನ್ನ ಶ್ವಾಸ, ಪಂಚಮಸಾಲಿ ಸಮಾಜವೇ ನನ್ನ ಸರ್ವಸ್ವ”ವಾಗಿದೆ ಎಂದು ಶ್ರೀ ವಚನಾನಂದ ಮಹಾಸ್ವಾಮಿಗಳು ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಮನದ ಮಾತುಗಳನ್ನಾಡಿದ್ದಾರೆ.- - -
(-ಫೋಟೋ: ಶ್ರೀ ವಚನಾನಂದ ಸ್ವಾಮೀಜಿ)