ತಿಪಟೂರು ಬಂದ್‌ ಸಂಪೂರ್ಣ ಯಶಸ್ವಿ

KannadaprabhaNewsNetwork |  
Published : Mar 25, 2026, 01:30 AM IST
ತಿಪಟೂರುಬಂದ್‌ಶಾಂತಿಯುತವಾಗಿಸಂಪೂರ್ಣಯಶಸ್ವಿ | Kannada Prabha

ಸಾರಾಂಶ

ಅಕ್ರಮ ಗೋ ಸಾಗಣೆ ತಡೆದ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ನಡೆಸಿದ್ದ ಹಲ್ಲೆ ಖಂಡಿಸಿ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಮತ್ತು ಜೆಡಿಎಸ್ ಕರೆ ನೀಡಿದ್ದ ತಿಪಟೂರು ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಕನ್ನಡಪ್ರಭವಾರ್ತೆ ತಿಪಟೂರು

ಅಕ್ರಮ ಗೋ ಸಾಗಣೆ ತೆಡೆದ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ನಡೆಸಿದ್ದ ಹಲ್ಲೆ ಖಂಡಿಸಿ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಮತ್ತು ಜೆಡಿಎಸ್ ಕರೆ ನೀಡಿದ್ದ ತಿಪಟೂರು ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬೆಳಿಗ್ಗೆಯಿಂದಲೇ ನಗರದ ಎಲ್ಲ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳೂ, ಉದ್ಯಮಗಳೂ, ಸಣ್ಣ-ಪುಟ್ಟ ಅಂಗಡಿಗಳೂ ಸಹ ಸ್ವಯಂಪ್ರೇರಿತರಾಗಿ ಬಂದ್ ಮಾಡಿದರು. ವಾಹನಸಂಚಾರ ವಿರಳವಾಗಿತ್ತು. ೧೧ಗಂಟೆಗೆ ಗ್ರಾಮದೇವತೆ ಕೆಂಪಮ್ಮದೇವಿ ದೇವಸ್ಥಾನದ ಬಳಿ ಸೇರಿದ ಹಿಂದೂ ಕಾರ್ಯಕರ್ತರು ಅಲ್ಲಿಂದ ಬೈಕ್ ರ‍್ಯಾಲಿ ಹಾಗೂ ಮೆರವಣಿಗೆಯಲ್ಲಿ ದೊಡ್ಡಪೇಟೆ, ಬಿ.ಎಚ್.ರಸ್ತೆ ಮೂಲಕ ೩ಕಿಮೀ ದೂರದ ಹಾಸನವೃತ್ತಕ್ಕೆ ತಲುಪಿ, ಮತ್ತೆ ನಗರಸಭೆ ವೃತ್ತದ ಬಳಿಬಂದು ಸಭೆ ಸೇರಿದರು. ಬಿಸಿಲನ್ನೂ ಲೆಕ್ಕಿಸದೇ ನಿರೀಕ್ಷೆಗೂ ಮೀರಿ ೨-೩ ಸಾವಿರ ಜನರು ಭಾಗವಹಿಸಿ ಬಂದ್ ಹಾಗೂ ಪ್ರತಿಭಟನೆ ಯಶಸ್ವಿಗೊಳಿಸಿದರು.

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಕಾರ್ಯದರ್ಶಿ ಸುನೀಲ್‌ಕುಮಾರ್, ಇಂದು ಸಾವಿರಾರು ಜನರು ಸೇರಿ ಪ್ರತಿಭಟಿಸಿ ಸಾಂಕೇತಿಕ ಹೋರಾಟ ನಡೆಸಿದ್ದೇವೆ. ಇದೇ ರೀತಿಯಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ ಮುಂದುವರೆದರೆ ತಿಪಟೂರಿನಲ್ಲಿರುವ ಮೂರು ಲಕ್ಷ ಹಿಂದೂ ಸಮಾಜ ಒಗ್ಗೂಡಿ ನಿಮ್ಮನ್ನು ಓಡಿಸುವ ದಿನ ಬರುತ್ತದೆ ಎಂದು ಎಚ್ಚರಿಸಿದರು. ಇಂದು ಗೋಹತ್ಯೆ ನಿಲ್ಲಿಸಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಜಿಹಾದಿಗಳ ಆಕ್ರಮಣ, ಹಲ್ಲೆ ನಡೆದಿದೆ. ನಾಗಮಂಗಲದಲ್ಲಿ ಶಿವಾಜಿ ಜಯಂತಿ ಪ್ರತಿಭಟನೆಯ ಮೇಲೆ ಚಪ್ಪಲಿ ಎಸೆಯಲಾಯಿತು. ಅಲ್ಲಿ ಯಾವ ರೀತಿ ಹಿಂದೂಗಳು ಪ್ರತಿಕ್ರಿಯೆ ನೀಡಿದರು ಎಲ್ಲರಿಗೂ ಗೊತ್ತು. ಅದೇ ರೀತಿ ತಿಪಟೂರಿನಲ್ಲಿ ಇಂದು ಹಿಂದೂಗಳು ನಾವಿದ್ದೇವೆ ಎಂದು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ನಾವು ನಮ್ಮತನವನ್ನು ರಕ್ಷಣೆ ಮಾಡುತ್ತೇವೆ ಎಂಬುದನ್ನು ಇಡೀ ಕರ್ನಾಟಕಕ್ಕೆ ಇಂದು ತಿಪಟೂರಿನ ಹಿಂದೂಗಳು ತೋರಿಸಿಕೊಟ್ಟಿದ್ದಾರೆ ಎಂದರು.ಕೆಲವು ಮುಸ್ಲಿಂ ಮುಖಂಡರು ನಿನ್ನೆ ಸುದ್ದಿಗೋಷ್ಠಿ ನಡೆಸಿ, ಹಲ್ಲೆ ಮಾಡಿದ್ದು ಕೆಲವು ವ್ಯಾಪಾರಸ್ಥರು. ನಾವು ಕೋಮುಸೌಹಾರ್ದತೆಯಿಂದ ಇದ್ದೇವೆ ಎಂದಿದ್ದಾರೆ. ಯಾವುದು ಕೋಮು ಸೌಹಾರ್ದತೆ, ಯಾವುದು ವ್ಯಾಪಾರ? ಗೋವನ್ನು ವಧೆ ಮಾಡುತ್ತೀರಿ ನಾವು ತಡೆದರೆ ಅದು ವ್ಯಾಪಾರವೇ? ನಿಮ್ಮ ಹಬ್ಬಗಳಲ್ಲಿ ನಮ್ಮ ಶ್ರದ್ದೆಗೆ ಪೆಟ್ಟುಕೊಟ್ಟು ಆನಂದಪಡುತ್ತೀರಾ?. ಹಿಂದೂಗಳ ಮೇಲೆ ಎಲ್ಲ ಕಾನೂನು ಕ್ರಮಗಳನ್ನೂ ಜಾರಿಗೊಳಿಸುವ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಅವರಿಗೆ ಕಾನೂನು ರಿಯಾಯಿತಿ ನೀಡುತ್ತದೆ. ತಿಪಟೂರಿನ ಎಲ್ಲರೂ ಬಂದ್ ಮಾಡಿ ಹಿಂದೂಗಳ ಶಕ್ತಿಯನ್ನು ತೋರಿಸಿದ್ದಾರೆ ಎಂದರು.

ಮುಖಂಡ ಶ್ರೀಕಂಠ ಮಾತನಾಡಿ ನಮಗೆ ನಮ್ಮ ಹೆತ್ತ ತಾಯಿ ಹೇಗೊ ಅದೇರೀತಿ ಗೋಮಾತೆ ಕೂಡ. ಗೋಮಾತೆಯನ್ನು ಕಾಪಾಡದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಆದ್ದರಿಂದ ತಿಪಟೂರಿನಲ್ಲಿ ಎಲ್ಲರೂ ಸೇರಿ ರಾಜಕೀಯೇತರವಾಗಿ ಒಂದು ಗೋಶಾಲೆಯನ್ನು ಪ್ರಾರಂಭಿಸಬೇಕು. ನಗರಸಭೆ ಆಯುಕ್ತರು ಕಸಾಯಿಖಾನೆಗೆ ನೀಡಿರುವ ಎಲ್ಲ ಲೈಸೆನ್ಸ್‌ಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡ ಲೋಕೇಶ್ವರ, ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್.ಚಂದ್ರಶೇಖರ್ ಮಾತನಾಡಿದರು.

ಶ್ರೀರಾಮಸೇನೆಯ ಕಲ್ಲೇಶ್, ವಿಶ್ವಹಿಂದೂ ಪರಿಷತ್‌ನ ಬಾಳೇಕಾಯಿ ನಟರಾಜು, ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಬಿಜೆಪಿ ಮುಖಂಡರಾದ ವಿಶ್ವದೀಪು, ಮಾಜಿ ನಗರಸಭಾ ಸದಸ್ಯರಾದ ಪ್ರಸನ್ನಕುಮಾರ್, ರಾಮಮೋಹನ್, ಶಶಿಕಿರಣ್, ತರಕಾರಿ ಗಂಗಾಧರ್, ಬಿಸಲೇಹಳ್ಳಿ ಜಗದೀಶ್ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಗಿ ಬಂದೋಬಸ್ತ್ : ಬಂದ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರ ನೇತೃತ್ವದಲ್ಲಿ ಭದ್ರತೆಗಾಗಿ ೧ ಅಡಿ?ನಲ್ ಎಸ್‌ಪಿ, ೨ ಡಿವೈಎಸ್‌ಪಿ, ೩ ಸರ್ಕಲ್ ಇನ್ಸ್‌ಪೆಕ್ಟರ್, ೧೧ ಸಬ್ ಇನ್ಸ್‌ಪೆಕ್ಟರ್, ೩೬ ಎಎಸೈ, ೪೪ ಹೆಡ್ ಕಾನ್ಸ್‌ಟೇಬಲ್ ಸೇರಿ ಒಟ್ಟು ೩ಒಒಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಕೆರೆಹಳ್ಳಿ ವಾಪಸ್ : ಹಿಂದೂ ಗೋರಕ್ಷಕ ಪುನೀತ್ ಕೆರೆಹಳ್ಳಿ ತಿಪಟೂರಿನ ತಮ್ಮ ಹೋರಾಟದ ಕಾರ್ಯಕರ್ತರನ್ನು ಭೇಟಿ ಮಾಡಲು ತಾಲೂಕಿನ ಗಡಿಯಾಚೆ ನುಗ್ಗೆಹಳ್ಳಿ ಬಳಿ ಹಿಂದಿನ ದಿನ ಆಗಮಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಪಡೆದ ಪೊಲೀಸರು ಜಿಲ್ಲಾಧಿಕಾರಿಗಳ ಆದೇಶದಂತೆ ೨ದಿನಗಳ ಕಾಲ ನೀವು ಜಿಲ್ಲೆಗೆ ಆಗಮಿಸಬಾರದು ಎಂದು ತಿಳಿಸಿ ವಾಪಾಸ್ ಕಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಡೆದ ಮನಸ್ಸನ್ನು ಬೆಸೆಯುವುದೇ ನಿಜವಾದ ಧರ್ಮ: ರಂಭಾಪುರಿ ಜಗದ್ಗುರು ಶ್ರೀಗಳು
ಪಂಚಮಸಾಲಿ ನೊಗ ಹೊತ್ತಿದ್ದೇನೆ, ಮುಂದೆಯೂ ಹೊರುತ್ತೇನೆ