ಕಬಿನಿಗೆ ಮುಖ್ಯಮಂತ್ರಿಗಳಿಂದ ಬಾಗಿನ

KannadaprabhaNewsNetwork | Published : Jul 30, 2024 12:39 AM

ಸಾರಾಂಶ

1.30 ಸಾವಿರ ಹೆಕ್ಟರ್ ಪ್ರದೇಶದ ನೀರಾವರಿ ಕಲ್ಪಿಸಲಾಗಿದ್ದು, ಇದರಿಂದ ರೈತರ ಮೊಗದಲ್ಲಿ ಮಂದಹಾಸ ಕಾಣಬಹುದಾಗಿದೆ.

--------

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಗಿನ ಅರ್ಪಿಸಿದರು.

ನಂತರ ಸಿದ್ದರಾಮಯ್ಯ ಮಾತನಾಡಿ, ಕಪಿಲಾ ಮಾತೆಗೆ ನಾವು ಬಾಗಿನ ಅರ್ಪಿಸಲು ಬಂದಿದ್ದೇವೆ. ಜಲಾಶಯ ಭರ್ತಿಯಾಗಿದೆ, ವಾಡಿಕೆಗಿಂತಲೂ ಶೇ. 50 ಅಧಿಕ ಮಳೆಯಾಗಿದೆ. ಕಬಿನಿ ಜಲಾಶಯಕ್ಕೆ ನಾನು ಮೂರನೇ ಬಾರಿಗೆ ಬಾಗಿನ ಅರ್ಪಿಸಲು ಬಂದಿದ್ದೇನೆ ಎಂದರು.

1.30 ಸಾವಿರ ಹೆಕ್ಟರ್ ಪ್ರದೇಶದ ನೀರಾವರಿ ಕಲ್ಪಿಸಲಾಗಿದ್ದು, ಇದರಿಂದ ರೈತರ ಮೊಗದಲ್ಲಿ ಮಂದಹಾಸ ಕಾಣಬಹುದಾಗಿದೆ. ವ್ಯವಸಾಯಕ್ಕೆ ಈ ಬಾರಿ ಯಾವುದೇ ತೊಂದರೆಯೂ ಇರುವುದಿಲ್ಲ. ರಾಜ್ಯದ ಜನತೆಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ ಎಂದರು.

ತಮಿಳುನಾಡಿಗೆ 177.25 ಟಿ.ಎಂ.ಸಿ. ನೀವು ಹರಿಸಬೇಕಾಗಿದ್ದು, ರಾಜ್ಯದ ಕಾವೇರಿ, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳು ಭರ್ತಿಯಾಗಿರುವುದರಿಂದ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ. ತಮಿಳುನಾಡಿಗೆ ಜೂನ್ ಮತ್ತು ಜುಲೈ ಯಲ್ಲಿ 40 ಟಿಎಂಸಿ ನೀರನ್ನು ನೀಡಬೇಕಾಗಿದ್ದು, ಈಗ ನೀರನ್ನು ಹರಿಸಲಾಗಿದೆ ಎಂದರು.

ಕಬಿನಿ ಜಲಾಶಯದ ಕೆಳಭಾಗದಲ್ಲಿ ಕೆ.ಆರ್.ಎಸ್. ಮಾದರಿಯಲ್ಲಿ ಉದ್ಯಾನವನವನ್ನು ನಿರ್ಮಿಸಬೇಕೆಂದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಶೀಘ್ರ ತೀರ್ಮಾನಿಸಲಾಗುವುದು. ನನ್ನ ಅವಧಿಯಲ್ಲಿ ಸರಗೂರು ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸಿದ್ದು, ಅಲ್ಲಿಗೆ ಸಮಗ್ರ ವಾಗಿ ಅವಶ್ಯವಿರುವ ಎಲ್ಲ ಇಲಾಖೆಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಕಪಿಲಾ ನದಿಯ ತುಂಬಿ ಹರಿಯುತ್ತಿದ್ದು, ಕಪಿಲಾ ಮಾತೆಗೆ ನಮನ ಸಲ್ಲಿಸುತ್ತಿದ್ದೇನೆ. ಜಲಾಶಯ ಭರ್ತಿಯಾಗಿ ರಾಜ್ಯದ ಗೌರವ ಉಳಿಸಿದೆ, ಕಷ್ಟದ ಕಾಲದಲ್ಲಿ ಕಪಿಲಾ ನದಿಯು ನೀರನ್ನು ನೀಡಿ ರಾಜ್ಯದ ಮಾನ ಕಾಪಾಡಿದೆ, ಕಷ್ಟ ಕಾಲದಲ್ಲಿ ನೀರು ಹರಿಸಲು ಸಾಧ್ಯವಾಗಿರುವುದರಿಂದ ಕಪಿಲಾ ಮಾತೆಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ತಿಳಿಸಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಮಾಜಿ ಸಚಿವ ಎಂ. ಶಿವಣ್ಣ, ಶಾಸಕರಾದ ಅನಿಲ್‌ ಚಿಕ್ಕಮಾದು, ಪಿ.ಎಂ. ನರೇಂದ್ರಸ್ವಾಮಿ, ದರ್ಶನ್ ಧ್ರುವನಾರಾಯಣ್, ಸಿ. ಪುಟ್ಟರಂಗ ಶೆಟ್ಟಿ, ಎಚ್.ಎಂ. ಗಣೇಶ್ ಪ್ರಸಾದ್, ಎ.ಆರ್. ಕೃಷ್ಣಮೂರ್ತಿ, ಡಿ. ರವಿಶಂಕರ್, ಎಂಡಿಎ ಅಧ್ಯಕ್ಷ ಕೆ. ಮರಿಗೌಡ, ಎಚ್.ಡಿ. ಕೋಟೆ ಮತ್ತು ಸರಗೂರು ಬ್ಲಾಕ್ ಅಧ್ಯಕ್ಷರಾದ ಏಜಾಜ್ ಪಾಷ, ಮಾದಪ್ಪ, ಪುರಸಭಾ ಸದಸ್ಯರಾದ ಎಚ್.ಸಿ. ನರಸಿಂಹಮೂರ್ತಿ, ಮಧು, ತಹಸೀಲ್ದಾರ್ ಶ್ರೀನಿವಾಸ್, ನೀರಾವರಿ ಇಲಾಖೆ ಅಧಿಕಾರಿಗಳು, ಎಂ.ಡಿ. ಮಹೇಶ್, ಸಿ.ಇ. ವೆಂಕಟೇಶ್, ಎಸ್.ಸಿ. ಮಹೇಶ್, ಈ.ಇ. ಚಂದ್ರಶೇಖರ್, ಎಂಇಇ ಗಣೇಶ್, ಎಂ.ಇ. ರಮೇಶ್ ಬಾಬು, ವಿಶ್ವನಾಥ್, ತಾಲೂಕು ಮಟ್ಟದ ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

Share this article