ಕನ್ನಡಪ್ರಭ ವಾರ್ತೆ ಕೋಲಾರಮಾಲೂರು ತಾಲೂಕಿನ ಅಗಲಕೋಟೆ ಜಮೀನು ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಈ ವಿಚಾರದಲ್ಲಿ ಮಾಜಿ ಶಾಸಕ ಮಂಜುನಾಥಗೌಡರು ನನ್ನನ್ನು ಪರೋಕ್ಷವಾಗಿ ತಳಕು ಹಾಕಲು ಪ್ರಯತ್ನಿಸಿರುವುದು ಖಂಡನೀಯ ಎಂದು ಕೋಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಹೇಳಿದರು.
ಅಗಲಕೋಟೆ ೫೧ ಎಕರೆ ಜಮೀನು ಸರ್ಕಾರಿ ಶಾಲೆಗೆ ಸೇರಿದ ವಿಷಯ ನನ್ನ ಗಮನಕ್ಕೆ ಬಂದಾಗ ಕೂಡಲೇ ತಹಸೀಲ್ದಾರ್, ಬಿ.ಇ.ಓರನ್ನು ಕರೆಸಿ ಜಮೀನಿಗೆ ಸಂಬಂಧಿಸಿದಂತೆ ಡಿಸಿಗೆ ಪತ್ರಮುಖೇನ ವರದಿ ಸಲ್ಲಿಸಲು ಫೆ.೨೨ರಂದು ಸೂಚಿಸಿದೆ. ಜಮೀನು ಶಾಲೆಗೆ ವಾಪಸು ಪಡೆಯುವಂತೆ ಒತ್ತಡ ಹಾಕಿದೆ ಎಂದು ತಿಳಿಸಿದರು.
ನಾನು ಅಕ್ರಮ ಪರವಾಗಿಲ್ಲ ಶಾಲೆಯ ಪರವಾಗಿ ಇದ್ದೇನೆ. ಅಕ್ರಮ ಯಾರೇ ಎಸಗಿದ್ದರೂ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇನೆ. ಜಮೀನು ಸರ್ಕಾರಿ ಶಾಲೆಗೆ ಬಂದಲ್ಲಿ ಉತ್ತಮ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದರು.ಹಗರಣ ನಡೆದಿಲ್ಲ:
ಕೋಲಾರ ತಾಲೂಕು ಗೊಳಿಗಾನಹಳ್ಳಿ ನಾಗರಾಜ್ ಮಾಡಿದ ಆರೋಪ, ಮಾಜಿ ಶಾಸಕ ಮಂಜುನಾಥಗೌಡರು ಪತ್ರಿಕಾ ಹೇಳಿಕೆಯಲ್ಲಿ ಮಾಡಿದ ಆರೋಪಗಳನ್ನು ಯಾವುದಾದರೂ ದಾಖಲೆಗಳ ಸಮೇತ ರುಜುವಾತು ಮಾಡಲಿ. ಅದು ಬಿಟ್ಟು ವಿನಾಕಾರಣ ಹಿಂದಿನಿಂದ ಅವರಿವರ ಕೈಯಲ್ಲಿ ಕೇಸುಗಳು ಹಾಕಿಸುವುದು. ವಿನಾಕಾರಣ ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಸುಳ್ಳು ಆರೋಪ ಹೊರಿಸಿ ದಿಕ್ಕುತಪ್ಪಿಸುವಂತ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದರು.ಹೊಸಕೋಟೆಯಿಂದ ಕರೆತಂದು ಜೆ.ಡಿ.ಎಸ್‌ನಿಂದ ಟಿಕೆಟ್ ಕೊಡಿಸಿ ಶಾಸಕನಾಗಿ ಮಾಡಿದ್ದು ನಾನೇ, ನಂತರದಲ್ಲಿ ನನ್ನ ವಿರುದ್ಧವೇ ಎರಡು ಬಾರಿ ಚುನಾವಣೆಯಲ್ಲಿ ನಿಂತು ಸೋತರು. ನನ್ನನ್ನು ಎರಡು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಹೊಸಕೋಟೆಯಿಂದ ಕರೆತಂದು ಶಾಸಕನಾಗಿ ಮಾಡಿದ್ದು ಹೊರತುಪಡಿಸಿದರೆ ಅವರಿಗೆ ಮತ್ತೇ ಶಾಸಕರಾಗಲು ಜನತೆ ಅವಕಾಶ ನೀಡಲಿಲ್ಲ ಎಂದರು.ಮಸಾಜ್‌ಗೆ ₹ ೩ ಲಕ್ಷ ಖರ್ಚು!:ಪ್ರತಿದಿನ ೫ ರಿಂದ ೧೦ ಲಕ್ಷ ರು. ಡ್ರಾ ಮಾಡುವುದಾಗಿ ಮಾಡಿರುವ ಆರೋಪ ಹಾಸ್ಯಾಸ್ಪದ, ಇದೊಂದು ಸಹಕಾರಿ ಸಂಸ್ಥೆ, ನಿಯಮಗಳ ಅನ್ವಯ ವ್ಯವಹಾರ ಮಾಡಿದೆ, ಪ್ರತಿ ಮಾಹೆ ಆಂತರಿಕ ಲೆಕ್ಕಪರಿಶೋಧಕರಿಂದ ಪರಿಶೀಲಿಸಲಾಗುತ್ತದೆ. ಏಕಾಏಕಿ ಪಾವತಿಗೆ ಅವಕಾಶವೇ ಇಲ್ಲ. ಮಸಾಜ್ ಮಾಡಿಸಲು ೩ ಲಕ್ಷ ರು. ಖರ್ಚು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಾವು ರೈತರ ಮಕ್ಕಳು ನಮಗೆ ಮಸಾಜ್, ಮೋಜು, ಮಸ್ತಿ ತಿಳಿದಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಕೆ.ಕೆ. ಮಂಜುನಾಥ್ ರೆಡ್ಡಿ, ಚಂಜಿಮಲೆ ರಮೇಶ್, ಶ್ರೀನಿವಾಸ್ ಇದ್ದರು.