ನಾನೆಂದೂ ಭೂಮಿ ಕೊಳ್ಳೆ ಹೊಡೆದಿಲ್ಲ । ಜಿಲ್ಲೆ ಸಂಪೂರ್ಣವಾಗಿ ಅಭಿವೃದ್ಧಿಯಾಗುವವರೆಗೂ ನಾನು ವಿರಮಿಸಲ್ಲ: ಸಂಸದ ಡಾ.ಕೆ.ಸುಧಾಕರ್ ಶಪಥ
ನಾನು ಶಾಸಕನಾಗಿದ್ದಾಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ಮಗುವಿನಂತೆ ನೋಡಿಕೊಂಡಿದ್ದೆ. ಆದರೆ ಈಗ ಈ ಕ್ಷೇತ್ರ ಅಭಿವೃದ್ಧಿ ವಂಚಿತವಾಗಿರುವುದನ್ನು ನೋಡಿ ಮನಸ್ಸಿಗೆ ತೀವ್ರ ಬೇಸರ ಉಂಟಾಗಿದೆ. ನಾನು ಸೋತಿಲ್ಲ, ಬದಲಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿ ಸೋತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದ ಭಾಗವಾಗಿ ನಗರ ಹೊರವಲಯದ ಸೊಲಾಲಪ್ಪನ ದಿನ್ನೆಯಲ್ಲಿ ಭಾನುವಾರ ಸಂಜೆ ನಡೆದ, 5,000 ವಿದ್ಯಾರ್ಥಿಗಳಿಗೆ ಜ್ಞಾನಸುಧಾ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನಾನು ಚಿಕ್ಕಬಳ್ಳಾಪುರಕ್ಕಾಗಿ ಭವಿಷ್ಯದ ಕನಸು ಕಂಡಿದ್ದೇನೆ. ನಮ್ಮ ಜಿಲ್ಲೆ ಸಂಪೂರ್ಣವಾಗಿ ಅಭಿವೃದ್ಧಿಯಾಗುವವರೆಗೂ ನಾನು ವಿರಮಿಸುವುದಿಲ್ಲ ಎಂದರು.
ಟೀಕೆಗಳು ಸಾಯುತ್ತವೆ, ಆದರೆ ಅಭಿವೃದ್ಧಿಯ ಸಾಕ್ಷಿಗುಡ್ಡೆಗಳು ಚಿರಾಯುವಾಗಿ ಉಳಿಯಲಿದೆ. ನನ್ನನ್ನು ಟೀಕೆ ಮಾಡುವವರು ಬಹಳ ಕಡೆ ಉದ್ಭವವಾಗಿದ್ದಾರೆ. ರೈತರನ್ನು ಯಾಮಾರಿಸಿ ನಾನೆಂದೂ ಬದುಕಿಲ್ಲ. ರೈತರು ಇಂದು ಸಂತೋಷವಾಗಿದ್ದಾರೆ ಎಂದರೆ, ನಾನು ಮಾಡಿದ ನೀರಾವರಿಯ ಕೆಲಸಗಳೇ ಕಾರಣ. ವರ್ಷಕ್ಕೆ ಒಬ್ಬರು ಇಲ್ಲಿ ನಾಲ್ಕೈದು ಬಾರಿ ಬೋರ್‌ವೆಲ್ ಕೊರೆಸುತ್ತಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಅನೇಕರು ಬೋರ್‌ವೆಲ್ ಕೊರೆಸಿಲ್ಲ. ನಮ್ಮ ರೈತರು ಹೂ, ಹಣ್ಣು, ತರಕಾರಿಗಳನ್ನು ಬಂಗಾರದಂತೆ ಬೆಳೆದು ಇಡೀ ರಾಜ್ಯಕ್ಕೆ ಪೂರೈಕೆ ಮಾಡುತ್ತಿದ್ದಾರೆ. ರೈತರನ್ನು ಯಾಮಾರಿಸಿ ಜಮೀನು ಕೊಳ್ಳೆ ಹೊಡೆಯುವ ಕೆಲಸ ಮಾಡಿಲ್ಲ ಎಂದರು.ನಾನು ಶಾಸಕನಾಗಿದ್ದಾಗ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರಿಗೆ 2,500 ಎಕರೆ ಜಮೀನು ಮಂಜೂರು ಮಾಡಿಸಿದ್ದೇನೆ. ನಾನು ಫಲಾನುಭವಿಗಳು ಯಾವ ಜಾತಿಗೆ ಸೇರಿದ್ದಾರೆ ಎಂದು ತಿಳಿಯಲು ಮುಂದಾಗುವುದಿಲ್ಲ. ಚೀಟಿ ಕೊಟ್ಟರೆ ಸಾಲ ವಿತರಣೆಯಾಗುವ ಸ್ಥಿತಿ ಹಿಂದೆ ಇತ್ತು. ಪಿಎಲ್‌ಡಿ ಬ್ಯಾಂಕ್, ಕೋಮುಲ್, ಮೊದಲಾದ ಸಹಕಾರಿ ಸಂಸ್ಥೆಗಳಲ್ಲಿ ಜನಸ್ನೇಹಿ ಆಡಳಿತ, ಅಭಿವೃದ್ಧಿಪರ ಆಡಳಿತ ನೀಡಲಾಗಿದೆ. ಒಂದೇ ಕ್ಷೇತ್ರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳು ನಿರ್ಮಾಣವಾಗಿದೆ. ನಾನು ಮನವಿ ಮಾಡಿದ ಬಳಿಕ ಸದ್ಗುರು ಶ್ರೀ ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ಎರಡನೇ ಆದಿಯೋಗಿ ಧಾರ್ಮಿಕ ಕೇಂದ್ರ ನಿರ್ಮಾಣವಾಗಿದೆ ಎಂದರು.
ಕೆಲವರು ನನ್ನನ್ನು ಸೋಲಿಸುವ ಆಟವಾಡಲು ಮುಂದೆ ಬಂದರು. ಆದರೆ ಇದರಿಂದಾಗಿ ಈಗ ಚಿಕ್ಕಬಳ್ಳಾಪುರದ ಅಭಿವೃದ್ಧಿ ಸೋತಿದೆ. ಆದರೆ ಈ ಆಟಗಳು ಇನ್ನು ನಡೆಯುವುದಿಲ್ಲ. ನನ್ನ ಅಪ್ಪ ನನ್ನನ್ನು ರೈತರ ಕಣ್ಣೀರು ಒರೆಸಲು ಕಲಿಸಿದಾರೆಯೇ ಹೊರತು, ರೈತರ ಹೊಟ್ಟೆ ಮೇಲೆ ಹೊಡೆಯಲು ಕಲಿಸಿಲ್ಲ. ಕೆಲವರು ನಾಲಿಗೆ ಬಿಗಿಹಿಡಿದು ಮಾತಾಡಬೇಕು ಎಂದರು.
5,000 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಅವರ ತಂದೆ ತಾಯಂದಿರು ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದಾರೆ. ಇದು ಕೇವಲ 5,000 ರು. ಮೊತ್ತದ ವಿಚಾರವಲ್ಲ. ಇದರಲ್ಲಿ ಹತ್ತು ಸಾವಿರ ಜನ ಕನಸುಗಳಿವೆ. ತಾಯಂದಿರ ಪ್ರಾರ್ಥನೆ, ತಂದೆಯ ತ್ಯಾಗವಿದೆ. ಈಗ ಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಜಾಲತಾಣಗಳಿವೆ. ಆದರೆ ವಿದ್ಯಾರ್ಥಿಗಳು ರೀಲ್ಸ್ ನೋಡಿ ವೈರಲ್ ಮಾಡುವುದು ಮುಖ್ಯವಲ್ಲ. ವಿದ್ಯಾರ್ಥಿಗಳು ವೈರಲ್ ಆಗುವುದನ್ನು ನಾನು ಬಯಸುವುದಿಲ್ಲ. ಆದರೆ ಸಮಾಜಕ್ಕೆ ಏನಾದರೂ ಮಾಡಬೇಕೆಂದು ಬಯಸುತ್ತೇನೆ. ಅದಕ್ಕಾಗಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ ಎಂದರು.
ಬೈಕ್ ರ‍್ಯಾಲಿ:
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡುಗಳ ಮೂಲಕ ಜನರ ಮನ ರಂಜಿಸಿದರು. ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.