ರೇಣುಕಾಚಾರ್ಯ ಕಾಂಗ್ರೆಸ್‌ಗೆ ದುಡಿದ ದಾಖಲೆಗಳು ನನ್ನಲ್ಲಿವೆ

KannadaprabhaNewsNetwork |  
Published : Jun 27, 2025, 12:49 AM ISTUpdated : Jun 27, 2025, 12:50 AM IST
26ಕೆಡಿವಿಜಿ1, 2, 3-ದಾವಣಗೆರೆಯಲ್ಲಿ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ.ಶಿವಗಂಗಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಲೋಕಸಭಾ ಚುನಾವಣೆಯಲ್ಲಿ ಹಣ ಪಡೆದು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿರುವ ಬಗ್ಗೆ ದಾಖಲೆಗಳ ಸಮೇತ ಸತ್ಯ ಬಹಿರಂಗಪಡಿಸಲು ನಾನು ಸಿದ್ಧ. ಸಮಯ ಬಂದಾಗ ಅದನ್ನೆಲ್ಲಾ ಬಹಿರಂಗಪಡಿಸುತ್ತೇನೆ ಎಂದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಗುಡುಗಿದ್ದಾರೆ.

- ಟಿಕೆಟ್ ಸಿಗದ್ದಕ್ಕೆ ಬಿಜೆಪಿ ಅಭ್ಯರ್ಥಿ ವಿರುದ್ಧವೇ ಕೆಲಸ ಮಾಡಿದ್ದಾರೆ: ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ಶಿವಗಂಗಾ ವಾಗ್ದಾಳಿ - - -

- ಚುನಾವಣೆ ವೇಳೆ ಕೋಟಿಗಟ್ಟಲೇ ಹಣ ಪಡೆದು ಮನೆ ಸೇರಿದ್ದು ಹೇಳಬೇಕಾ ಎಂದು ಗುಟುರು

- ಕಾಂಗ್ರೆಸ್ ಪಕ್ಷ ಸೇರಲು ಡಿಕೆಶಿ- ಎಸ್ಸೆಸ್ಸೆಂ ಮನೆಗಳಿಗೆ ಎಡತಾಕಿದ್ದು ಯಾರು ಎಂದು ಪ್ರಶ್ನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಲೋಕಸಭಾ ಚುನಾವಣೆಯಲ್ಲಿ ಹಣ ಪಡೆದು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿರುವ ಬಗ್ಗೆ ದಾಖಲೆಗಳ ಸಮೇತ ಸತ್ಯ ಬಹಿರಂಗಪಡಿಸಲು ನಾನು ಸಿದ್ಧ. ಸಮಯ ಬಂದಾಗ ಅದನ್ನೆಲ್ಲಾ ಬಹಿರಂಗಪಡಿಸುತ್ತೇನೆ ಎಂದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಗುಡುಗಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ನಂತರ ರೇಣುಕಾಚಾರ್ಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ನಿರ್ಧರಿಸಿದ್ದರು. ಅಲ್ಲದೇ, ತನಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮಾತೃಪಕ್ಷದ ಮೇಲಿನ ನಿಷ್ಠೆಯನ್ನೇ ಮರೆತು, ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದನ್ನೇ ಮರೆತಿರಾ ಎಂದು ಪ್ರಶ್ನಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ಸೇರ್ಪಡೆಗೆ ರೇಣುಕಾಚಾರ್ಯ ಮುಂದಾಗಿದ್ದರು. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರರನ್ನೂ ಭೇಟಿ ಮಾಡಿದ್ದರು, ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಮನೆ ಬಾಗಿಲಿಗೆ ಭೇಟಿ ನೀಡಿದ್ದನ್ನೂ ಹೇಳಲಾ? ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ರೇಣುಕಾಚಾರ್ಯ ನಿರ್ಧಾರ ಬದಲಿಸಿದರು. ಯಾವುದೇ ಪಕ್ಷದಲ್ಲಿದ್ದರೂ ರಾಜಕೀಯ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ಬಸವರಾಜ ಶಿವಗಂಗಾ ತಾಕೀತು ಮಾಡಿದರು.

ಚುನಾವಣೆ ವೇಳೆ ಎಲ್ಲೆಲ್ಲಿ, ಎಷ್ಟೆಷ್ಟು ಕೋಟಿ ದುಡ್ಡು ತಗೊಂಡಿದ್ದೀರಿ, ಯಾರು ದುಡ್ಡು ಕೊಟ್ಟಿದ್ದಾರೆ, ಯಾವ ರೀತಿ ಚುನಾವಣೆ ಮಾಡಿದ್ದೀರಿ ಅಂತಾ ನನಗೆಲ್ಲವೂ ಗೊತ್ತಿದೆ. ಚುನಾವಣೆ ವೇಳೆ ದುಡ್ಡು ತಗೊಂಡು ಮನೆ ಸೇರಿದ್ದು ಯಾರು? ನನ್ನ ಬಗ್ಗೆ ಮಾತನಾಡಿದರೆ ನಿನ್ನ ಕರ್ಮಕಾಂಡವನ್ನೆಲ್ಲಾ ಬಿಚ್ಚಿಡುತ್ತೇನೆ. ಚಿನ್ನದ ಚಮಚ ಇಟ್ಟುಕೊಂಡ ರೇಣುಕಾಚಾರ್ಯ ಅಣ್ಣನವರೇ ತಮಗೆ ಗೊತ್ತಿದೆ, ನಾನೂ ಹೊನ್ನಾಳಿ ತಾಲೂಕಿನಿಂದಲೇ ಬಂದವನು. ನಾನು ಯಾವ ರೀತಿ ಬೆಳೆದಿದ್ದೀನಿ, ಬದುಕಿದ್ದೀನಿ ಅಂತಾ ಹೊನ್ನಾಳಿ ಜನರಿಗೆ ಕೇಳಿ ಎಂದು ಶಿವಗಂಗಾ ಟಾಂಗ್ ನೀಡಿದರು.

ವ್ಯಕ್ತಿಗತವಾಗಿ ನನ್ನ ಬಗ್ಗೆ ನೀವಾಗಿಯೇ ಮಾತನಾಡಿದ್ದೀರಿ. ಕ್ಯಾಸಿನೋ ನಡೆಸುತ್ತಿದ್ದೆ ಅಂತಾ ಆರೋಪಿಸಿದ್ದೀರಿ. ಯಾವುದೇ ಕ್ಯಾಸಿನೋದಲ್ಲಿ ಒಂದೇ ಒಂದು ಪರ್ಸೆಂಟ್ ನನ್ನ ಪಾಲು ಇಲ್ಲ. ಇಸ್ಪೀಟ್, ಐಪಿಎಲ್ ಬೆಟ್ಟಿಂಗ್ ದಂಧೆ ಬಗ್ಗೆ ಆರೋಪಿಸಿದ್ದೀರಿ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ನಾನು ತೊಡಗಿಲ್ಲ. ಇದಕ್ಕೆ ದೇವರ ಮುಂದೆ ಆಣೆ, ಪ್ರಮಾಣ ಮಾಡಲು ಸಿದ್ಧ. ಸಿಗಂದೂರು ಚೌಡೇಶ್ವರಿ, ಕಟೀಲು ದುರ್ಗಾ ಪರಮೇಶ್ವರಿ ಹಾಗೂ ಚನ್ನಗಿರಿ ತಾಲೂಕಿನ ಮಾವಿನಹೊಳೆ ಮಹಾರುದ್ರಸ್ವಾಮಿ ದೇವಸ್ಥಾನಕ್ಕೆ ಬಂದು, ಪ್ರಮಾಣ ಮಾಡಲು ಸಿದ್ಧ. ನನ್ನ ವಿರುದ್ಧ ಆರೋಪ ಮಾಡಿದ ರೇಣುಕಾಚಾರ್ಯ ಸಹ ಬಂದು, ಆಣೆ ಪ್ರಮಾಣ ಮಾಡಲಿ ಎಂದು ಪಂಥಾಹ್ವಾನ ನೀಡಿದರು.

ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀವು ಪಡೆದಿದ್ದೀರೋ, ಇಲ್ಲವೋ? ಅದರಿಂದ ನೀವು ಲಾಭ ಪಡೆದಿದ್ದೀರೋ ಇಲ್ಲವೋ? ಜಯಲಕ್ಷ್ಮೀ ಯಾರು ಅಂತಾ ಮರೆತೇ ಬಿಟ್ಟಿದ್ದೀರಾ? ಅದನ್ನು ಬೇಕಿದ್ದರೆ ನಾನು ನೆನಪಿಸುತ್ತೇನೆ. ಕಾನೂನು ಪ್ರಕಾರವೇ ಸರ್ಕಾರಿ ಟೆಂಡರ್ ಪಡೆದು, ಮರಳು ವ್ಯಾಪಾರ ಮಾಡುತ್ತಾ ಬಂದಿದ್ದೇನೆ ಎಂದು ಬಸವರಾಜ ಶಿವಗಂಗಾ ಅವರು ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು.

- - -

(ಕೋಟ್‌) * ಹೊನ್ನಾಳಿ ಕ್ಷೇತ್ರ ಮರೆತು ಬಿಡುಬೆಂಜ್ ಕಾರ್‌ನಲ್ಲಿ ಬಂದು ಎಲ್ಲಿ ಕುಳಿತು, ಏನು ಮಾತನಾಡಿದ್ದೀರಿ? ಏನು ತಿಂದಿದ್ದೀರಿ ಅಂತಾ ಗೊತ್ತಾ? ಹೊನ್ನಾಳಿಯ ಹಿರಿಯ ಶಾಸಕ ಡಿ.ಜಿ. ಶಾಂತನಗೌಡ ಮುಗ್ದ, ಮೂಕಜೀವಿ. ಅಂತಹ ಶಾಂತನಗೌಡರ ಜಾಗದಲ್ಲಿ ನಾನು ಇದ್ದಿದ್ದರೆ, ರಾಜಕೀಯ ಏನು ಅಂತಾ ನಿಮಗೆ ತೋರಿಸುತ್ತಿದ್ದೆ ಎಂದು ಶಾಸಕ ಬಸವರಾಜ ಶಿವಗಂಗಾ ಹೇಳಿದರು.

ನಾನು ಲಾಟರಿ ಶಾಸಕ ಅಂತಾ ಹೇಳಿದ್ದೀರಿ, ನನ್ನ ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಿದ್ದೀನಿ ಬಂದು ನೋಡು. ಡೋಂಗಿ ಹೋರಾಟ ನಡೆಸಿರುವವರು ನೀವು. ರೈತ ಹೋರಾಟದ ಮೂಲಕ ಬಂದವನು ನಾನು. ಇನ್ನು ಹೊನ್ನಾಳಿ ಕ್ಷೇತ್ರವನ್ನೇ ನೀವು ಮರೆತು ಬಿಡು ಎಂದು ರೇಣುಕಾಚಾರ್ಯ ಅವರಿಗೆ ಎಚ್ಚರಿಸಿದರು.

- - -

-26ಕೆಡಿವಿಜಿ1:

ದಾವಣಗೆರೆಯಲ್ಲಿ ಚನ್ನಗಿರಿ ಕ್ಷೇತ್ರ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ
ಚಿಕ್ಕಮಗಳೂರು ಗಿರಿಧಾಮಗಳಲ್ಲಿ ಪ್ರವಾಸಿಗರ ಕಾರುಬಾರು