ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಬಸವನಪುರ ಗ್ರಾಮದ ಚಲುವಯ್ಯ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದ ಪರಿಹಾರ ಹಣ 1 ಲಕ್ಷ ರು.ಗಳನ್ನು ಪಡೆಯಲು ಆತನ ಪುತ್ರಿ ಯಶೋಧಮ್ಮ ಕಾಲು ಮುರಿದುಕೊಂಡಿದ್ದ ಕಾರಣ ನ್ಯಾಯಾಲಯಕ್ಕೆ ತೆರಳಲು ಸಾಧ್ಯವಾಗದೆ ನೋಟರಿಯವರ ಕಚೇರಿಯ ಬಳಿ ಕುಳಿತ್ತಿದ್ದರು.
ಈ ವಿಚಾರ ತಿಳಿದ ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಎಚ್. ಅವಿನಾಶ್ ಚಿಂದು ಅವರು ಯಶೋಧಮ್ಮರವರು ಕುಳಿತಿದ್ದ ಜಾಗಕ್ಕೆ ಹೋಗಿ ವಿಚಾರಣೆ ಮಾಡಿದರಲ್ಲದೆ, ದಾಖಲಾತಿಗಳನ್ನು ಪರಿಶೀಲಿಸಿ ಅವರಿಗೆ ಹಣ ಬಿಡುಗಡೆ ಮಾಡಲು ಆದೇಶ ಮಾಡಿದರು.ಘಟನೆ ವಿವರ:
ಈ ಘಟನೆ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಲುವಯ್ಯ ಕುಟುಂಬದವರು ಪ್ರಕರಣ ದಾಖಲಿಸಿದ್ದರು. 2012ರಲ್ಲಿ ಮೋಟಾರ್ ವೈಕಲ್ ಆಕ್ಟ್ ಅಡಿಯಲ್ಲಿ ಕುಟುಂಬದವರಿಗೆ ಪರಿಹಾರ ಹಣ ಬಿಡುಗಡೆಯಾಗಿತ್ತು.
ಚಲುವಯ್ಯ ಕುಟುಂಬದ ಪರವಾಗಿ ವಾದ ಮಂಡಿಸಿದ ವಕೀಲ ಬಿ.ಪಿ.ರವಿರವರು, ಚಲುವಯ್ಯರವರ ಸಾವಿಗೆ ಕಾರು ಚಾಲಕ ಸಂಜಯ್ ಕಲಾರೋ ಅವರೇ ಕಾರಣವೆಂದು ಸಾಕ್ಷ್ಯ ಸಮೇತ ಸಾಬೀತುಪಡಿಸಿದಾಗ ನ್ಯಾಯಾಲಯವು ಆರೋಪಿಗೆ ದಂಡದ ಜೊತೆಗೆ 6 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿತ್ತು.ಈ ತೀರ್ಪನ್ನು ಪ್ರಶ್ನಿಸಿ ಸಂಜಯ್ ಕಲಾರೋ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಯೂ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದನ್ನೂ ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದ ಸಂಜಯ್ ಕಲಾರೋ ಚಲುವಯ್ಯರ ಸಾವಿಗೆ ಮರುಕ ವ್ಯಕ್ತಪಡಿಸಿ ಆ ಕುಟಂಬದವರಿಗೆ ಪರಿಹಾರ ನೀಡಲು ಸಿದ್ಧವಿರುವುದಾಗಿ ನ್ಯಾಯಾಧೀಶರ ಎದುರು ಹೇಳಿಕೊಂಡಿದ್ದರು. ಇದಕ್ಕೆ ನ್ಯಾಯಾಧೀಶರು ಚಲುವಯ್ಯರವರ ಪುತ್ರಿ ಯಶೋಧ ಸೇರಿದಂತೆ 10 ಮಂದಿ ಮಕ್ಕಳಿಗೆ ತಲಾ 1 ಲಕ್ಷ ರು.ನಂತೆ 10 ಲಕ್ಷ ರುಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿ, ಪರಿಹಾರದ ಹಣವನ್ನು ರಾಮನಗರದ ನ್ಯಾಯಾಲಯದಲ್ಲಿ ಠೇವಣಿ ಇರಿಸಿತ್ತು.
ಅದರಂತೆ ನ್ಯಾಯಾಲಯಕ್ಕೆ ವಕೀಲ ಬಿ.ಪಿ ರವಿ ಮೃತ ಚಲುವಯ್ಯರವರ 10 ಜನ ವಾರಸ್ಸುದಾರರ ಪರವಾಗಿ ವಕಾಲತ್ತು ಸಲ್ಲಿಸಿ ಓಚರ್, ಅವರ ಪಾಸ್ ಬುಕ್ ಹಾಗೂ ಆಧಾರ್ ಕಾರ್ಡ್‌ಗಳನ್ನು ಸಲ್ಲಿಸಿದ್ದರು. ಅವುಗಳನ್ನು ನ್ಯಾಯಾಲಯವು ಕೂಲಂಕುಶವಾಗಿ ಪರಿಶೀಲಿಸಿ ಮೃತ ಚಲುವಯ್ಯ ಅವರ 10 ಜನ ವಾರಸುದಾರರಿಗೆ ತಲಾ 1 ಲಕ್ಷ ರು.ಗಳ ಹಣವನ್ನು ನೀಡಲು ಆದೇಶ ಮಾಡಿತು.ಈ 10 ಜನ ವಾರಸುದಾರರ ಪೈಕಿ ಮೃತ ಚಲುವಯ್ಯ ಪುತ್ರಿ ಯಶೋಧಮ್ಮ ಅಪಘಾತಕ್ಕೊಳಗಾಗಿ ಮೆಟ್ಟಿಲು ಹತ್ತಿ ನ್ಯಾಯಾಲಯಕ್ಕೆ ಬರಲು ಸಾಧ್ಯವಾಗದ ಕಾರಣ ನ್ಯಾಯಾಲಯದ ಹೊರಗಡೆ ಇರುವ ನೋಟರಿಯವರ ಕಚೇರಿಯ ಬಳಿ ಕುಳಿತ್ತಿದ್ದರು. ಅಲ್ಲಿಗೆ ಸ್ವತಃ ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಎಚ್. ಅವಿನಾಶ್ ಚಿಂದುರವರು ಯಶೋದಮ್ಮ ಅವರು ಕುಳಿತಿದ್ದ ಜಾಗಕ್ಕೆ ಹೋಗಿ ವಿಚಾರಣೆ ಮಾಡಿ ಅವರ ದಾಖಲಾತಿಗಳನ್ನು ಪರಿಶೀಲಿಸಿ ಅವರಿಗೆ ಹಣ ಬಿಡುಗಡೆ ಮಾಡಲು ಆದೇಶ ಮಾಡಿದರು.26ಕೆಆರ್ ಎಂಎನ್ 9.ಜೆಪಿಜಿರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಎಚ್. ಅವಿನಾಶ್ ಚಿಂದುರವರು ಕಾಲು ಮುರಿದುಕೊಂಡಿದ್ದ ಯಶೋಧಮ್ಮ ಅವರಿದ್ದ ಸ್ಥಳಕ್ಕೆ ಬಂದು ವಿಚಾರಣೆ ಮಾಡುತ್ತಿರುವುದು.