ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ಜರುಗಿತು.
ಚರ್ಚೆಯಲ್ಲಿ ಭಾಗವಹಿಸಿದ್ದ ರಾಜು ಕುಂಬಿ ಮತ್ತು ಅಶ್ವಿನಿ ಅಂಕಲಕೋಟಿ ಅವರು ಕ್ರಿಯಾಯೋಜನೆಯನ್ನು ಯಾರ ಗಮನಕ್ಕೆ ತರದೆ ತಯಾರು ಮಾಡಿದ್ದೀರಿ, ನಮ್ಮ ವಾರ್ಡ್‌ಗಳಿಗೆ ಯಾವುದೇ ಅನುದಾನ ನೀಡಿಲ್ಲ. ಹೀಗಾಗಿ ನಾವು ಈ ಕ್ರಿಯಾಯೋಜನೆಗೆ ಯಾಕೆ ಅನುಮೋದನೆ ನೀಡಬೇಕು ಎಂದಾಗ ಪ್ರಶ್ನಿಸಿದಾಗ ಇತರ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ಯೋಜನೆಗೆ ಸಂಬಂಧಪಟ್ಟಂತೆ ₹77.20 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಬಗ್ಗೆ ಅಭಿಯಂತರ ವೀರೇಂದ್ರಸಿಂಗ್ ಖಾಟೇವಾಲೆ ಅವರು ಯಾವ ಯಾವ ವಾರ್ಡಿಗೆ ಎಷ್ಟು ಅನುದಾನ ನೀಡಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತರುತ್ತಿದ್ದಂತೆ, ಬಿಜೆಪಿ ಸದಸ್ಯರು ಏರುಧ್ವನಿಯಲ್ಲಿ ಸಭಾಧ್ಯಕ್ಷರಿಗೆ ಮುಗಿಬಿದ್ದರು. ಅಧ್ಯಕ್ಷರು ಮತ್ತು ಬಿಜೆಪಿ ಸದಸ್ಯರ ಮಧ್ಯೆ ವಾಕ್ಸಮರ ನಡೆಯಿತು.ನೀವು 14 ಸದಸ್ಯರಿಗೆ ಮಾತ್ರ ಅಧ್ಯಕ್ಷರೋ ಪುರಸಭೆಯ ಎಲ್ಲ ಸದಸ್ಯರಿಗೆ ಅಧ್ಯಕ್ಷರೋ ಎಂದು ಬಿಜೆಪಿ ಸದಸ್ಯರು ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಅವರನ್ನು ಪ್ರಶ್ನಿಸಿದರು. ಈ ಮಧ್ಯೆ ಸಾಹೇಬಜಾನ್ ಹವಾಲ್ದಾರ ಅವರು ಕಾಂಗ್ರೆಸ್ ಸದಸ್ಯರ ಸಹಿಯುಳ್ಳ ಪತ್ರ ನೀಡಿ, ಕ್ರಿಯಾಯೋಜನೆಯನ್ನು ನಾವು ಬೆಂಬಲಿಸುವುದಾಗಿ ಹೇಳಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಪುರಸಭೆಯ ಅನುದಾನ ಹಂಚಿಕೆಯಲ್ಲಿ ಆಡಳಿತಾರೂಢ ಪಕ್ಷ ಕಾಂಗ್ರೆಸ್ ತಾರತಮ್ಯ ಮಾಡುತ್ತಿದ್ದುದನ್ನು ಖಂಡಿಸಿ ಸಭಾತ್ಯಾಗ ಮಾಡಿದರು.
ಸಭೆಯಲ್ಲಿ ರಾಜು ಕುಂಬಿ, ಬಸವರಾಜ ಓದುನವರ, ಮಹೇಶ ಹೊಗೆಸೊಪ್ಪಿನ, ಸಿಕ್ಕಂದರ ಕಣಕೆ, ರಾಮು ಗಡದವರ, ನೀಲಪ್ಪ ಪೂಜಾರ, ಶಿವಪ್ರಕಾಶ ಕೊಂಚಿಗೇರಿಮಠ, ಜಯಮ್ಮ ಅಂದಲಗಿ, ಕಿರಣ ನವಲೆ, ಮಂಜವ್ವ ನಂದೆಣ್ಣವರ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ, ಉಪಾಧ್ಯಕ್ಷ ಫಿರ್ದೋಷ ಆಡೂರ, ಪುರಸಭೆ ಎಂಜಿನಿಯರ್ ವೀರೇಂದ್ರಸಿಂಗ್ ಖಾಟೇವಾಲೆ, ಲಿಂಬಯ್ಯಮಠ, ಮಂಜುಳಾ ಹೂಗಾರ, ಮಂಜುನಾಥ ಮುದಗಲ್ಲ, ಹನುಮಂತ ನಂದೆಣ್ಣವರ ಹಾಜರಿದ್ದರು.