ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ ತಹಸೀಲ್ದಾರ್ ಕಾರ್ಯಾಲಯದ ಅನತಿ ದೂರದಲ್ಲಿರುವ ಶಿವಲಿಂಗಪ್ಪ ಕಪ್ಪತ್ತನವರ ಬಡಾವಣೆ, ಸಿದ್ದರಾಮೇಶ್ವರ ನಗರ, ಬೇಂದ್ರೆ ಪ್ಲಾಟ್‌ಗಳಲ್ಲಿ ಕಂಡು ಬರುವ ಸದ್ಯದ ಸ್ಥಿತಿ ಇದು. ಇಲ್ಲಿ ವಾಸಿಸುವುದೇ ಕಷ್ಟಕರವಾಗಿದೆ. ಕೊಳಚೆ ನಿರ್ಮಾಣಗೊಂಡು ಎಲ್ಲೆಂದರಲ್ಲಿ ಹಂದಿಗಳು ವಾಸ ಮಾಡುತ್ತಿವೆ. ಮಳೆಗಾಲವಾದ್ದರಿಂದ ರಸ್ತೆ, ಚರಂಡಿ ವ್ಯವಸ್ಥೆಗಳಿಲ್ಲದೆ ಸಂಚರಿಸುವುದು ದುಸ್ತರವಾಗಿದೆ.
ಈ ಬಡಾವಣೆಗಳಲ್ಲಿ ಬಹುತೇಕ ಕೂಲಿ ಕಾರ್ಮಿಕರು, ಕೃಷಿಕರು, ಶೋಷಿತರು, ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಈ ವಾರ್ಡಿನ ಸದಸ್ಯೆ ಅನಿತಾ ಬಾರಬರ್ ಅವರು ಪಪಂ ಸಾಮಾನ್ಯ ಸಭೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವಂತೆ ಅಧಿಕಾರಿಗಳ ಗಮನ ಸೆಳೆದರೂ ಸ್ಪಂದಿಸಿಲ್ಲ ಎನ್ನುವ ಆರೋಪಗಳಿವೆ.೫೦೦ಕ್ಕೂ ಹೆಚ್ಚು ಮನೆಗಳಿರುವ ಈ ಬಡಾವಣೆಯಲ್ಲಿ ಪ್ರತಿಯೊಬ್ಬರೂ ಪಪಂಗೆ ನಿಗದಿಪಡಿಸಿರುವ ತೆರಿಗೆ ಹಣ ಕಟ್ಟುತ್ತಾ ಬಂದಿದ್ದಾರೆ. ಆದರೆ ಇವತ್ತಿನ ವರೆಗೂ ಯಾವುದೇ ಸೌಲಭ್ಯಗಳನ್ನು ಕಲ್ಪಿಸದೇ ಇರುವುದು ನಾಚಿಕೆಯ ಸಂಗತಿಯಾಗಿದೆ ಎಂದು ಇಲ್ಲಿ ವಾಸಿಸುತ್ತಿರುವ ಜನರು ಅಸಮಾದಾನ ಹೊರಹಾಕುತ್ತಾರೆ.
ಬಡಾವಣೆಯ ಪಕ್ಕದಲ್ಲಿಯೇ ಸರ್ಕಾರಿ ಶಾಲೆಯಿದೆ. ಅಲ್ಲದೇ ನವೋದಯ ತರಬೇತಿ ಕೇಂದ್ರ ಕೂಡ ಇದೆ. ನಿತ್ಯ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ದುಸ್ತರವಾಗಿದೆ. ಬೀದಿದೀಪಗಳಿಲ್ಲದೇ ಇರುವುದರಿಂದ ಸಂಜೆ ವೇಳೆ ಮಕ್ಕಳು, ವೃದ್ಧರು ಸಂಚರಿಸುವುದು ಕಷ್ಟವಾಗಿದೆ. ತುರ್ತು ಮೂಲಭೂತ ಸೌಲಭ್ಯ ಕಲ್ಪಿಸಲು ಪಪಂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದರೆ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವುದಾಗಿ ಬಡಾವಣೆಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಸದ್ಯ ಮಳೆಗಾಲವಾಗಿದ್ದರಿಂದ ಎಲ್ಲೆಂದರಲ್ಲಿ ಮಳೆ ನೀರು ಶೇಖರಣೆಗೊಂಡು ಕೊಳಚೆ ಪ್ರದೇಶವಾಗಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಚಿಕ್ಕ ಮಕ್ಕಳು, ವೃದ್ಧರು, ಬಾಣಂತಿಯರು ನಿತ್ಯ ಸೊಳ್ಳೆಗಳ ಕಾಟದಿಂದ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಪಪಂ ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿಗಳು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ವಾರ್ಡ್ ನಂಬರ್ ೧೮ರಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಲ್ಲ. ಸೌಲಭ್ಯ ಕಲ್ಪಿಸಿ ಕೊಡುವಂತೆ ಈ ಹಿಂದೆ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ಅಧಿಕಾರಿಗಳ ಮತ್ತು ಎಂಜಿನಿಯರ್ ಗಮನಕ್ಕೆ ತರಲಾಗಿದೆ. ಬಡಾವಣೆಯ ನಿವಾಸಿಗಳು ಲಿಖಿತ ಮನವಿಯನ್ನೂ ನೀಡಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಗಳು ಇತ್ತ ತಿರುಗಿ ನೋಡದೇ ಬೇಜವಾಬ್ದಾರಿ ತೋರುತ್ತಿದ್ದಾರೆ ವಾರ್ಡ್ ಸದಸ್ಯ ಅನಿತಾ ಬಾರಬರ ಹೇಳಿದರು.