ನನ್ನ ಸ್ಟೈಲ್‌ನಲ್ಲೇ ಜನರ ಸಮಸ್ಯೆ ಆಲಿಸುವೆ: ಡಿಕೆ ಶಿವಕುಮಾರ್

KannadaprabhaNewsNetwork |  
Published : Jun 25, 2024, 12:33 AM ISTUpdated : Jun 25, 2024, 01:19 PM IST
ಪೊಟೋ೨೪ಸಿಪಿಟಿ೩: ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಜನರ ಅಹವಾಲು ಆಲಿಸಿದರು. | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಹಾಗಾಗಿ ನಮ್ಮ ಸ್ಟೈಲ್‌ನಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದೇನೆ. ಅಧಿಕಾರಿಗಳನ್ನ ಹೆದರಿಸಿ ನಾವು ಕೆಲಸ ಮಾಡುತ್ತಿಲ್ಲ. ನಮ್ಮ ಕೆಲಸದ ಸ್ಟೈಲೇ ಹಾಗಿದೆ. ಅಧಿಕಾರಿಗಳನ್ನು ಹೆದರಿಸಿದರೆ ಅವರು ಹೋಗಿ ದೂರು ಕೊಡಲಿ.

 ಚನ್ನಪಟ್ಟಣ :  ಚನ್ನಪಟ್ಟಣದ ಶಾಸಕ ಸ್ಥಾನ ಇಷ್ಟು ದಿನ ಖಾಲಿ ಇರಲಿಲ್ಲ. ಇಲ್ಲಿ ಪಾಪ ಅವರೇ ಅಧಿಕಾರ ಅನುಭವಿಸಿದ್ದರಲ್ಲ, ಅವರೇ ಸಮಸ್ಯೆ ಪರಿಹರಿಸುತ್ತಾರೆ ಎಂದು ತಿಳಿದುಕೊಂಡಿದ್ದೆ. ಆದರೆ, ಅಧಿಕಾರಿಗಳ ಸಭೆ ನಡೆಸಿದ ನಂತರ ಇಲ್ಲಿನ ಸಮಸ್ಯೆಗಳ ಕುರಿತು ಗಮನಕ್ಕೆ ಬಂದಿದೆ. ಇಲ್ಲಿ ಏನು ಆಗಿಲ್ಲ, ಯಾವುದೇ ಕೆಲಸ ನಡೆದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ತಾಲೂಕಿನ ಹುಣಸನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ಗೆ ಇಷ್ಟು ದಿನ ಚನ್ನಪಟ್ಟಣ ನೆನಪಾಗಿರಲಿಲ್ವಾ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಹಾಗಾಗಿ ನಮ್ಮ ಸ್ಟೈಲ್‌ನಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದೇನೆ. ಅಧಿಕಾರಿಗಳನ್ನ ಹೆದರಿಸಿ ನಾವು ಕೆಲಸ ಮಾಡುತ್ತಿಲ್ಲ. ನಮ್ಮ ಕೆಲಸದ ಸ್ಟೈಲೇ ಹಾಗಿದೆ. ಅಧಿಕಾರಿಗಳನ್ನು ಹೆದರಿಸಿದರೆ ಅವರು ಹೋಗಿ ದೂರು ಕೊಡಲಿ ಎಂದರು.

ಒಂದು ಸಮುದಾಯದಲ್ಲಿ ಮತ ಹೆಚ್ಚಳ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕಳೆದ ಚುನಾವಣೆ ವೇಳೆ ಕ್ಷೇತ್ರದಲ್ಲಿ ಕೆಲ ಮುಸ್ಲಿಮರ ಮತಗಳನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ಬಂದು ಅವರು ಅಳಲು ತೋಡಿಕೊಂಡಿದ್ದರು. ಅಂತವರನ್ನು ಮತ್ತೆ ನೋಂದಣಿ ಮಾಡುತ್ತಿದ್ದಾರೆ. ಬೇಕಿದ್ದರೆ ಎಲ್ಲವನ್ನೂ ಪರಿಶೀಲಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

ಮೂವರು ಡಿಸಿಎಂ ಚರ್ಚೆ ವಿಚಾರಕ್ಕೆ ಸಂಬಂಧಿಸಿ, ಅದನ್ನ ಪಕ್ಷ ತೀರ್ಮಾನಿಸುತ್ತದೆ. ಯಾರು ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ ಎಂದರು. ಚನ್ನಪಟ್ಟಣದಿಂದ ಡಿಕೆಶಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಈಗ ಕಮಿಟಿ ರಚನೆ ಮಾಡಿದ್ದೇವೆ. ಸಾಕಷ್ಟು ಸಚಿವರು, ಶಾಸಕರು ಕಮಿಟಿಯಲ್ಲಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಎಲ್ಲರೂ ಸೇರಿ ತೀರ್ಮಾನ ಮಾಡುತ್ತಾರೆ. ನಾನು ಸ್ಪರ್ಧಿಸಬೇಕು ಎಂದರೂ ಅದನ್ನು ಕಮಿಟಿ ತೀರ್ಮಾನ ಮಾಡುತ್ತದೆ. ಸೂಕ್ತ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

PREV