ಕೋಳಿವಾಡ ಹೇಳಿಕೆಗೆ ನನ್ನ ಎಳ್ಳಷ್ಟು ಸಹಮತವಿಲ್ಲ: ಎಚ್.ಕೆ. ಪಾಟೀಲ

KannadaprabhaNewsNetwork | Published : Sep 28, 2024 1:21 AM

ಸಾರಾಂಶ

ರಾಜಭವನದಲ್ಲಿ ಕಡತಗಳನ್ನು ತಾವೇ ಸೋರಿಕೆ ಮಾಡಿ, ಅದನ್ನು ಸರ್ಕಾರವೇ ಮಾಡಿದೆ ಎಂದು ರಾಜ್ಯ ಸರ್ಕಾರದ ಮೇಲೆಯೇ ಗೂಬೆ ಕೂಡಿಸುತ್ತಿದ್ದಾರೆ.

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಬೇಕು ಎಂದು ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿಕೆಗೆ ನನ್ನ ಎಳ್ಳಷ್ಟೂ ಸಹಮತವಿಲ್ಲ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಅವರ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಗಟ್ಟಿಯಾಗಿರುವ ನಮ್ಮ ಸರ್ಕಾರವನ್ನು ತಮ್ಮ ಷಡ್ಯಂತ್ರದ ಮೂಲಕ ಅಲ್ಲಾಡಿಸಬೇಕು ಎನ್ನುವವರಿಗೆ ತಕ್ಕ ಮತ್ತು ಸ್ಪಷ್ಟವಾದ ಉತ್ತರ ಕೊಡುತ್ತೇವೆ ಎಂದರು.

ಸಿಬಿಐಗೆ ಕೊಟ್ಟಿದ್ದ ಅಧಿಕಾರವನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿರುವುದು ಭಯದಿಂದ ಎನ್ನುವ ಪ್ರಶ್ನೆಗೆ ಉತ್ತರಿಸಿ ಅವರು, ರಾಜಭವನದಲ್ಲಿ ಕಡತಗಳನ್ನು ತಾವೇ ಸೋರಿಕೆ ಮಾಡಿ, ಅದನ್ನು ಸರ್ಕಾರವೇ ಮಾಡಿದೆ ಎಂದು ರಾಜ್ಯ ಸರ್ಕಾರದ ಮೇಲೆಯೇ ಗೂಬೆ ಕೂಡಿಸುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸಿಬಿಐಗೆ ನೀಡಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಗಮನಿಸಿಯೇ ಸಿಬಿಐ ಕೊಟ್ಟಿರುವ ಮುಕ್ತ ಸ್ವಾತಂತ್ರ್ಯವನ್ನು ವಾಪಸ್‌ ಪಡೆದಿದ್ದೇವೆ. ಇನ್ಮೇಲೆ ಏನೇ ಆದರೂ ಕೇಸ್ ಟು ಕೇಸ್ ಪರಿಶೀಲನೆ ನಡೆಸಬೇಕು. ಆನಂತರ ಮುಂದಿನ ಕ್ರಮ ಎನ್ನುವುದು ನಮ್ಮ ಸರ್ಕಾರದ ನಿರ್ಧಾರವಾಗಿದೆ ಎಂದರು.

ಮುಡಾ ತನಿಖೆಯ ಭಯದಿಂದ ಸರ್ಕಾರ ಹೀಗೆ ಮಾಡುತ್ತಿದೆ ಎನ್ನುವ ವಿರೋಧ ಪಕ್ಷಗಳ ಆರೋಪ ಕುರಿತ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಅವರು, ಅದಕ್ಕೂ, ಇದಕ್ಕೂ ಏನ್ರೀ ಸಂಬಂಧ? ಈಗಾಗಲೇ ಕೋರ್ಟ್ ಲೋಕಾಯುಕ್ತ ತನಿಖೆ ನಡೆಸುವಂತೆ ಸೂಚಿಸಿದೆ. ಲೋಕಾಯುಕ್ತ ತನಿಖೆ ನಡೆಸುತ್ತದೆ ಅಷ್ಟೇ. ಅದರ ಬಗ್ಗೆ ಈಗ ಹೆಚ್ಚಿನ ವ್ಯಾಖ್ಯಾನ ಬೇಡ ಎಂದರು.

ಕರ್ನಾಟಕದಲ್ಲಿ 25 ಸಾವಿರ ಸ್ಮಾರಕಗಳಿದ್ದು, ಅವುಗಳನ್ನು ಗುರುತಿಸಿ, ಸಂರಕ್ಷಿಸಿ, ಜನರ ದರ್ಶನಕ್ಕೆ ಅವುಗಳನ್ನು ಲಭ್ಯಗೊಳಿಸಬೇಕು. ಇಕೋ ಟೂರಿಸಂ, ಅಡ್ವೆಂಚರ್ ಟೂರಿಸಂ, ಶೈಕ್ಷಣಿಕ ಪ್ರವಾಸ, ರೈತ ಪ್ರವಾಸ, ಎಲ್ಲದಕ್ಕೂ ಒತ್ತು ಕೊಡುವ ಒಟ್ಟು ಒಂದು ಪ್ರವಾಸೋದ್ಯಮ ನೀತಿಯನ್ನು ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತರಲಿದೆ ಎಂದು ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Share this article