ಸಾಲಿಗ್ರಾಮ : ತಂದೆಯವರ ಒತ್ತಾಸೆಯಿಂದಾಗಿ ಮೂರನೇ ಪ್ರಯತ್ನದಲ್ಲಿ ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದೇನೆ ಎಂದು ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 263ನೇ ಸ್ಥಾನ ಪಡೆದಿರುವ ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮ ಎ.ಸಿ. ಪ್ರೀತಿ ಹೇಳಿದರು .
ಕುಗ್ರಾಮದಲ್ಲಿ ಜನಿಸಿ ಎಸ್ಸೆಸ್ಸೆಲ್ಸಿಯವರೆಗೆ ತವರಲ್ಲಿ ಶಿಕ್ಷಣ ಪಡೆದು, ನಂತರ ಪಿಯುಸಿಯಲ್ಲಿ ಕೆ.ಆರ್. ನಗರದ ಸರ್ಕಾರಿ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಬಡತನ ಇದ್ದರೂ ಕೃಷಿಯಲ್ಲಿ ಬಿ.ಎಸ್ಸಿ, ಎಂ.ಎಸ್ಸಿ ಪದವಿ ಪಡೆದ ಪ್ರೀತಿಯವರು ಯುಪಿಎಸ್ಸಿ ಸಾಧನೆಯ ಕನಸು ಕಂಡರು. ಮೊದಲೆರಡು ಪ್ರಿಲಿಮನ್ನರಿ ಪರೀಕ್ಷೆಯಲ್ಲಿ ಫೇಲಾಗಿದ್ದ ಅವರು, ಮನೆಯಲ್ಲಿನ ಆರ್ಥಿಕ ಪರಿಸ್ಥಿತಿಯಿಂದಾಗಿ ಉನ್ನತ ಹುದ್ದೆ ಅಲಂಕರಿಸುವ ಕನಸನ್ನು ಕೈಚೆಲ್ಲಿದ್ದರು.
ವೃತ್ತಿಯಲ್ಲಿ ಅಡುಗೆ ಭಟ್ಟರಾಗಿರುವ ತಂದೆ ಚನ್ನಬಸಪ್ಪ ಅವರು ನನಗೆ ಧೈರ್ಯ ತುಂಬಿ ಎಷ್ಟು ಖರ್ಚಾದರೂ ನಾನು ಭರಿಸುವೆ. ಇದೊಂದು ಬಾರಿ ಪ್ರಯತ್ನ ಪಡು ಎಂದು ಹುರಿದುಂಬಿಸಿದರು, ತಂದೆಯವರ ಸ್ಥೈರ್ಯದ ಮಾತುಗಳಿಂದ ಪ್ರೇರೆಪಿತಲಾದ ನಾನು ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದು ಮೂರನೇ ಬಾರಿಗೆ ಯಶಸ್ಸು ಕಂಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.ಉತ್ತರ ಪ್ರದೇಶ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿಳಿಬ್ಬರು ನನ್ನ ಸಾಧನೆಗೆ ಸ್ಫೂರ್ತಿ. ನನ್ನ ಹುಟ್ಟೂರು ಜನತೆಯ ಆಶೀರ್ವಾದ, ನನ್ನೂರ ಜನತೆ ನನ್ನ ಮೇಲಿಟ್ಟಿದ ನಂಬಿಕೆ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ನನ್ನ ಶ್ರಮ ಶೇ. 40, ನನ್ನ ತಂದೆ, ತಾಯಿಯ ಪರಿಶ್ರಮ ಉಳಿದ 60 ರಷ್ಟು. ನನ್ನ ತಂದೆ ತಾಯಿಯೇ ನಿಜವಾದ ಸಾಧಕರು ಎಂದರೆ ತಪ್ಪಾಗಲಾರದು ಎಂದು ಅವರು ಖುಷಿಪಟ್ಟರು. ಕರ್ನಾಟಕ ಇಲ್ಲವೇ ಮಹಾರಾಷ್ಟ್ರ ಕೇಡರ್ ನಲ್ಲಿ ಐಎಎಸ್ ಅಧಿಕಾರಿಯಾಗುವ ಅವಕಾಶ ನನಗಿದೆ ಎಂದು ಅವರು ತಿಳಿಸಿದರು.
ಇಂದಿನ ಯುವ ಸಮೂಹಕ್ಕೆ ಮಾದರಿ: ಕುಗ್ರಾಮದಲ್ಲಿ ಜನಿಸಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಕಠಿಣತಿ ಕಠಿಣ ಪರೀಕ್ಷೆ ಯುಪಿಎಸ್ಸಿ ಸಾಧಕಿ ಪ್ರೀತಿ ಅವರು ಇಂದಿನ ಯುವ ಸಮೂಹಕ್ಕೆ ಮಾದರಿ ಎಂದು ಕೆ.ಆರ್. ನಗರ ಪುರಸಭೆ ಸದಸ್ಯ ಕೆ.ಎಲ್. ಜಗದೀಶ್ ಅವರು ಬಣ್ಣಿಸಿದರು.ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಗುರುವಾರ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 265ನೇ ಸ್ಥಾನ ಪಡೆದ ಎ.ಸಿ. ಪ್ರೀತಿ ಹಾಗೂ ಅವರ ತಂದೆ ತಾಯಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪ್ರೀತಿಯವರು ಕಡು ಬಡತನದಲ್ಲೂ ಛಲ ಬಿಡದೆ ತನ್ನ ಗುರಿ ಮುಟ್ಟಿದ್ದಾರೆ. ಪ್ರೀತಿ ನಿಜಕ್ಕೂ ಹಳ್ಳಿಯ ಅಸಾಧಾರಣ ಪ್ರತಿಭೆ. ಇವರ ವೃತ್ತಿ ಜೀವನ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.ಸಮಾಜ ಸೇವಕರಾದ ಕೆ.ಎಲ್. ರಮೇಶ್ ಅವರ ನೇತೃತ್ವದಲ್ಲಿ ಪ್ರೀತಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜಶೇಖರ್, ನಂಜನಗೂಡು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ದೀಪು, ಪತ್ರಕರ್ತ ಕರ್ಪೂರವಳ್ಳಿ ಮಹದೇವ್, ಶಿಕ್ಷಕ ಪುರುಷೋತ್ತಮ್, ಅಪೋಲೋ ಮಹೇಶ್, ಹಾರಂಗಿ ಮಹಾಮಂಡಲದ ನಿರ್ದೇಶಕ ಅಂಕನಹಳ್ಳಿ ಯತೀಶ್, ಪ್ರೀತಿ ಅವರ ತಂದೆ ಚನ್ನಬಸಪ್ಪ, ತಾಯಿ ನೇತ್ರಾವತಿ, ಗ್ರಾಮದ ಮುಖಂಡರು ಇದ್ದರು.