ಚಿಕ್ಕಮಗಳೂರು : ಜಿಲ್ಲೆಯ ಎಲ್ಲಾ ಪರಿವಾರದ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಸಂಸದರ ಕಚೇರಿ ಆರಂಭಿಸಿದ್ದು, ಜನಸಾಮಾನ್ಯರು ಬಡ ಜನರ ಸಮಸ್ಯೆ ಪರಿಹರಿಸಲು ಸಹಾಯಕವಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ನಗರಸಭೆ ಆವರಣದಲ್ಲಿ ಶುಕ್ರವಾರ ಲೋಕಸಭಾ ಸದಸ್ಯರ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ, ಸಂಸದರ ಕಚೇರಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಕಚೇರಿಯಾಗಲಿ ಎಂಬ ಉದ್ದೇಶದಿಂದ ನೂತನ ಕಚೇರಿಗೆ ಚಾಲನೆ ನೀಡಲಾಗಿದೆ ಎಂದರು.
ಸರ್ಕಾರಿ ಕಚೇರಿಗಳ ಸಮಯದಂತೆ ರಜಾ ದಿನಗಳನ್ನು ಹೊರತುಪಡಿಸಿ, ಅಗತ್ಯ ಸಿಬ್ಬಂದಿಗಳೊಂದಿಗೆ ಈ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸ ಲಿದ್ದಾರೆ. ತಾವು ವಾರದಲ್ಲಿ ಎರಡು ದಿನ ಈ ಕಚೇರಿಯಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಉಪ ಚುನಾವಣೆಗೆ ಪಕ್ಷ ನನಗೆ ಉಸ್ತುವಾರಿಯಾಗಿ ಜವಾಬ್ದಾರಿ ನೀಡಿದ್ದು, ಸುಮಾರು 21 ದಿನಗಳ ಕಾಲ ಅದರ ಕೆಲಸ ಮಾಡಬೇಕಾಗಿದೆ. ನಂತರ ಬಹುತೇಕ ಜನರನ್ನು ಭೇಟಿಯಾಗುವುದಾಗಿ ಹೇಳಿದರು.
ಕಳೆದ ಅವಧಿಯಲ್ಲಿ ಸಂಸದರಾಗಿದ್ದ ಶೋಭಾ ಕರಂದ್ಲಾಜೆ 150 ಕೋಟಿ ರು. ವೆಚ್ಚದಲ್ಲಿ ಉಡುಪಿಯಲ್ಲಿ 100 ಹಾಸಿಗೆಗಳ ಕಾರ್ಮಿಕ ಇಲಾಖೆ ಆಸ್ಪತ್ರೆ ಮಂಜೂರು ಮಾಡಿಸಿದ್ದರು. ಪ್ರಚಾರದ ಕೊರತೆಯಿಂದ ಇದು ಬೆಳಕಿಗೆ ಬಂದಿಲ್ಲ ಎಂದು ವಿಷಾಧಿಸಿದ ಅವರು, ಮುಂದೆ ಸಾರ್ವಜನಿಕ ರಿಂದ ಯಾವುದೇ ದೂರುಗಳು ಬರದಂತೆ ಕ್ರಮ ವಹಿಸುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರ ಕಚೇರಿ ನಗರಸಭೆಯಲ್ಲಿ ವಿದ್ಯುಕ್ತವಾಗಿ ಪ್ರಾರಂಭಿಸಲಾಗಿದೆ. ಈ ಕಚೇರಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜನಸ್ನೇಹಿಯಾಗಿ ಸಂಸದರು ಉತ್ತಮ ಕಾರ್ಯ ಮಾಡಲು ಜನಸಂಪರ್ಕ ಕೇಂದ್ರವಾಗಿ ಜನರ ಸಮಸ್ಯೆ ಬಗೆಹರಿಸುವ ಒಂದು ಉತ್ತಮ ಸ್ಪಂದನೆ ಇರುವ ಕಚೇರಿಯಾಗಲಿ ಎಂದು ಹಾರೈಸಿದರು.ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ, ಸಭಾ ನಾಯಕರಾಗಿ ವಿವಿಧ ಸಚಿವಾಲಯಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಉತ್ತಮ ಅನುಭವ ಹೊಂದಿದ ವ್ಯಕ್ತಿಯಾಗಿದ್ದಾರೆಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಸಮಾಜದ ಕಟ್ಟ ಕಡೆಯ ಎಲ್ಲಾ ವರ್ಗದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಲೋಕ ಕಲ್ಯಾಣ ಆಗುವಂತೆ ಈ ಸಂಸದರ ಕಚೇರಿ ಕಾರ್ಯ ನಿರ್ವಹಿಸಲಿ ಎಂದು ಹೇಳಿದರು.
ಬಯಲು, ಮಲೆನಾಡು, ಕರಾವಳಿ ಎಂಬ ಬೇದಭಾವ ಮಾಡದೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಎರಡು ಜಿಲ್ಲೆಗಳಿಗೆ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವ ಸರ್ವ ಶಕ್ತಿ ಹೊಂದಿದ್ದು, ರಾಜಕೀಯದಲ್ಲಿ ಬಹಳ ಅನುಭವ ಇರುವ ವ್ಯಕ್ತಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಕೋಟೆ ರಂಗನಾಥ್ ಹಾಗೂ ಪಕ್ಷದ ಮುಖಂಡರು ಹಾಜರಿದ್ದರು. 10 ಕೆಸಿಕೆಎಂ 1ಚಿಕ್ಕಮಗಳೂರು ನಗರಸಭೆ ಕಟ್ಟಡದಲ್ಲಿ ತಮ್ಮ ನೂತನ ಕಚೇರಿಯನ್ನು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಶುಕ್ರವಾರ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಸಿ.ಟಿ. ರವಿ, ಸುಜಾತ ಶಿವಕುಮಾರ್, ದೇವರಾಜ್ ಶೆಟ್ಟಿ ಇದ್ದರು.