ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಟೀ ಅಂಗಡಿ ಮಾಲೀಕ ಅಬ್ಬಾಸ್‌ನ ಅಂತರಾಳದ ನುಡಿಗಳಿವು. ಸಚಿವ ಡಿ.ಸುಧಾಕರ್ ಅವರ ಚಳ್ಳಕೆರೆಯ ನಿವಾಸ ಗೊಮ್ಮಟ ನಿಲಯದ ಪಕ್ಕದಲ್ಲಿ ಚಿಕ್ಕದೊಂದು ಟೀ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಅಬ್ಬಾಸ ಕಳೆದ 25 ವರ್ಷಗಳಿಂದ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದ.
ಸುಧಾಕರ್ ಮನೆ ಪಕ್ಕದಲ್ಲಿ ಇರುವ ಸೆವೆನ್ ಹಿಲ್ಸ್ ಡಿಸ್ಟಲರಿ ಕಚೇರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಸಣ್ಣದೊಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಟೀ, ಕಾಫೀ ಸೇರಿದಂತೆ ಬೇಸಿಗೆ ಬಂತೆಂದರೆ ಕಲ್ಲಂಗಡಿ, ಪಪ್ಪಾಯಿ ಮಾರಾಟ ಮಾಡುತ್ತಿದ್ದರು. ಇಂತಹ ಬಡ ವ್ಯಾಪಾರಿಗೆ ಸುಧಾಕರ್ ಆಶ್ರಯ ಕೊಟ್ಟಿದ್ದರ ಕುರಿತು ಅಬ್ಬಾಸ್ ಅಭಿಮಾನದಿಂದ ನುಡಿಯುತ್ತಾರೆ.ನಮ್ಮ ಸಾಹುಕಾರ ಬಡವರಿಗೆ ಭರ್ತಿ ಸಹಾಯ ಮಾಡುತ್ತಿದ್ದರು. ಕಷ್ಟ ಎಂದು ಸಹಾಯ ಬೇಡಿ ಬಂದವರಿಗೆ ಎಂದಿಗೂ ವಾಪಾಸ್ ಕಳಿಸಿದವರಲ್ಲ. ಒಮ್ಮೆ ನನ್ನ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಲು ನಗರಸಭೆಯವರು ಬಂದಾಗ ಕೈ ಮುಗಿದು ಬೇಡಿಕೊಂಡರೂ ಬಿಟ್ಟಿರಲಿಲ್ಲ. ಪೆಟ್ಟಿಗೆ ಎತ್ತಿ ಬೇರೆಡೆ ಇಟ್ಟಿದ್ದರು. ನಮ್ ಸಾಹುಕಾರ್ ಬೆಂಗಳೂರಿನಿಂದ ಬಂದು ಅಬ್ಬಾಸ್ ಎಲ್ಲೋದ ಅಂತ ಕೆಲಸದವರನ್ನ ಕೇಳಿದ್ದಾರೆ. ವಿಷಯ ತಿಳಿದು ನಗರಸಭೆಯವರಿಗೆ ಹೇಳಿ ಪೆಟ್ಟಿಗೆ ಅಂಗಡಿ ಮತ್ತೆ ಇಲ್ಲಿಗೆ ಬರುವಂತೆ ಮಾಡಿದ್ದರು. ಅವರ ಫೋಟೋ ನಮ್ಮ ಅಂಗಡಿಯಲ್ಲಿಟ್ಟುಕೊಂಡು ದಿನಾಲು ಸಾಹುಕಾರನ ಮುಖ ನೋಡಿಯೇ ಆರಂಭಿಸುತ್ತೇನೆ. ಅಲ್ಲಿಂದ ಇಲ್ಲಿಯವರೆಗೂ ಸಾಹುಕಾರ್ ಅವರ ಋಣದಲ್ಲಿಯೇ ಬದುಕುತ್ತಿದ್ದೇನೆ ಎಂದು ಕಣ್ಣೀರಾಗುತ್ತಾರೆ ಅಬ್ಬಾಸ್.
ನಮ್ಮ ಪಾಲಿನ ದೇವರೇ ಹೋದ ಮೇಲೆ ನಮಗಿನ್ನಾರು ದಿಕ್ಕು. ನಮ್ಮಂತ ತಬ್ಬಲಿಗಳನ್ನು ಹೊಟ್ಟೆಗಾಕಿಕೊಳ್ಳುವವರು ಯಾರಿದ್ದಾರೆ ಎಂದು ಅಂತರಾಳದ ನೋವನ್ನು ಹರವುತ್ತಾನೆ. ದಿನಾಲು ಫೋಟೋ ನೋಡಿ ಹಸಿ ಬಟ್ಟೆಯಿಂದ ಒರೆಸುತ್ತಿದ್ದೆ. ಈಗ ಹೂವಿನ ಹಾರ ಹಾಕಿ ಪೂಜಿಸಬೇಕಿದೆ. ನಮ್ ಸಾಹುಕಾರ ಇಷ್ಟು ಬೇಗ ಹೋಗ್ತಾನೆ ಅಂತ ಅಂದುಕೊಂಡಿರಲಿಲ್ಲ. ಆಸ್ಪತ್ರೆಯಲ್ಲಿದ್ದಾಗೆ ಬೇಗ ಚಳ್ಳಕೆರೆಗೆ ವಾಪಸ್ಸಾಗಲಿ ಎಂದು ಪ್ರಾರ್ಥನೆ ಮಾಡ್ತಿದ್ದೆ. ಆ ದೇವ್ರಿಗೆ ನನ್ ಮಾತು ಕೇಳಿಸಲಿಲ್ಲವೆಂದು ಅಬ್ಬಾಸ್ ಕಣ್ಣೀರಾದ.