ಬಿ-ಖಾತಾ ಸದನದಲ್ಲಿ ಮೊದಲು ಧ್ವನಿ ಎತ್ತಿದ್ದು ನಾನೇ: ಶಾಸಕ ಎ.ಆರ್.ಕೃಷ್ಣಮೂರ್ತಿ

KannadaprabhaNewsNetwork | Published : Mar 30, 2025 3:01 AM

ಸಾರಾಂಶ

ಬಿ-ಖಾತಾ ಮಾಡಲು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸದನದಲ್ಲಿ ಪ್ರಥಮವಾಗಿ ಧ್ವನಿ ಎತ್ತಿದ್ದೇ ನಾನು, ಈಗ ಇದರಿಂದ ರಾಜ್ಯಾದ್ಯಂತ ಇರುವ ಲಕ್ಷಾಂತರ ಮಂದಿಗೆ ಅನುಕೂಲವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಬಿ-ಖಾತಾ ಮಾಡಲು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸದನದಲ್ಲಿ ಪ್ರಥಮವಾಗಿ ಧ್ವನಿ ಎತ್ತಿದ್ದೇ ನಾನು, ಈಗ ಇದರಿಂದ ರಾಜ್ಯಾದ್ಯಂತ ಇರುವ ಲಕ್ಷಾಂತರ ಮಂದಿಗೆ ಅನುಕೂಲವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಬಿ ಖಾತಾ ಅಭಿಯಾನದಿಂದ ಎಲ್ಲರಿಗೂ ಅನುಕೂಲವಾಗಿದೆ ಎಂದು ಪಪಂ ಸದಸ್ಯರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಬಿ ಖಾತಾದಿಂದ ಹಲವು ಮಂದಿಗೆ ನೆನೆಗುದಿಗೆ ಬಿದ್ದಿದ್ದ ತಮ್ಮ ಸ್ವತ್ತುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗಿದೆ. ರಾಜ್ಯ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗಿದೆ. ಇದಕ್ಕೆ ನಾನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರು, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಶೈಲಜಾ ಹಾಗೂ ವೈ.ಎ.ರಂಗಸ್ವಾಮಿ ಎಂಬುವರಿಗೆ ಒಂದೇ ನಿವೇಶನವನ್ನು ಇಬ್ಬರಿಗೆ ಇ-ಸ್ವತ್ತು ಮಾಡಲಾಗಿದೆ. ಈ ಬಗ್ಗೆ ನನಗೆ ದೂರು ಬಂದಿದೆ. ಈ ಬಗ್ಗೆ ಕ್ರಮ ವಹಿಸಬೇಕು. ಅಲ್ಲದೆ ೨ನೇ ವಾರ್ಡಿನಲ್ಲಿ ನಿವೇಶನ ಒಂದಕ್ಕೆ ಮುಖ್ಯಾಧಿಕಾರಿಯ ಡಿಜಿಟಲ್ ಕೀ ದುರ್ಬಳಕೆ ಮಾಡಿಕೊಂಡು ಗುತ್ತಿಗೆ ನೌಕರರೊಬ್ಬರು ಕರ್ತವ್ಯ ಲೋಪ ಎಸೆಗಿದ್ದಾರೆ. ಇವರ ವಿರುದ್ಧ ನಾನು ಪತ್ರ ಬರೆದಿದ್ದರೂ ಇನ್ನೂ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ದೂರವಾಣಿ ಮೂಲಕ ನಗರೋತ್ಥಾನ ಇಲಾಖೆಯ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚನೆಯನ್ನು ನೀಡಿದರು.

ಪಟ್ಟಣದಲ್ಲಿ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ಥಳದಾನವನ್ನು ನೀಡಿದ್ದರೂ ಅಲ್ಲಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದ ಒಂದು ಬದಿಯಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಈಗ ದಾನಿಗಳು ನೀಡಿರುವ ಸ್ಥಳವನ್ನು ಮುಂದಿನ ದಿನಗಳಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಸದನದಲ್ಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸುವಂತೆ ನಾನು ಪ್ರಶ್ನೆ ಕೇಳಿದ್ದೆ. ಇದಕ್ಕೆ ರಾಜ್ಯದಲ್ಲಿ ೧೧೦೦ ಹುದ್ದೆಗಳು ಖಾಲ ಇದೆ ಎಂದು ಉತ್ತರ ಬಂದಿದೆ. ಇದರಲ್ಲಿ ಯಳಂದೂರಿನ ಪಪಂನ ನೌಕರರೂ ಸೇರಿದ್ದಾರೆ. ಹಾಗಾಗಿ ಇವರನ್ನು ಸರ್ಕಾರ ಖಾಯಂಗೊಳಿಸುವ ಭರವಸೆ ನೀಡಿದ್ದು ಇದರಿಂದ ಅನುಕೂಲವಾಗಲಿದೆ ಎಂದರು. ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣ ಮಾಡಲು ೪.೧೦ ಎಕರೆ ಸ್ಥಳ ಬೇಕಿದೆ. ಈಗಾಗಲೇ 40X60 ಜಾಗವನ್ನು ನೀಡಲಾಗಿದೆ. ಅಲ್ಲದೆ ಚರಂಡಿ ನೀರು ಶುದ್ಧೀಕರಣಗೊಳಿಸಲು ೨.೫ ಎಕರೆ ಜಮೀನು ಕೇಳಲಾಗಿದೆ ಈ ಬಗ್ಗೆ ಸ್ಥಳ ಒದಗಿಸಿಕೊಡುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಪಪಂ ಅಧ್ಯಕ್ಷೆ ಲಕ್ಷ್ಮಿ ಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹದೇವನಾಯಕ, ಮಹದೇವ, ಮಂಜು, ಪ್ರಭಾವತಿ ರಾಜಶೇಖರ್, ಬಿ. ರವಿ, ಸುಶೀಲಾ ಪ್ರಕಾಶ್ ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಜೆಇ ನಾಗೇಂದ್ರ, ಪರಶಿವಮೂರ್ತಿ, ದೊಡ್ಡಬಸವಣ್ಣ, ಲಕ್ಷ್ಮಿ, ಜಯಲಕ್ಷ್ಮಿ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.

Share this article