ಕನ್ನಡಪ್ರಭ ವಾರ್ತೆ ಮುಧೋಳ
ಜಿಪಂ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ತಾಲೂಕಾಡಳಿತ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಿಕ್ಷಕ ದಿನೋತ್ಸವ ಸಮಿತಿ ಮುಧೋಳ ಇವರ ಸಂಯುಕ್ತಾಶ್ರಯದಲ್ಲಿ ಡಾ.ರಾಧಾಕೃಷ್ಣನ್ ರವರ ಜನ್ಮದಿನದ ಅಂಗವಾಗಿ ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ತಾಲೂಕಾ ಮಟ್ಟದ ಶಿಕ್ಷಕರ ದಿನೋತ್ಸವ-2026, ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಶಿಕ್ಷಕರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದಿನ ಸರ್ಕಾರಿ ಶಾಲಾ ಶಿಕ್ಷಕರು ಅಫ್ಡೇಟ್ ಆಗಬೇಕು. ಹೊಸ ಹೊಸ ತಂತ್ರಜ್ಞಾನ, ವಿನೂತನ ಕೌಶಲ ಬಳಸಿಕೊಂಡು ಮಕ್ಕಳಿಗೆ ಪಾಠಬೋಧನೆ ಮಾಡಬೇಕು. ಪಾಠಬೋಧನೆ ಜತೆಗೆ ಜೀವನ ಶಿಕ್ಷಣ ನೀಡಿ, ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಜಾತಿ, ಮತ, ಧರ್ಮ, ಮೇಲು, ಕೀಳು ಎಂಬ ಭಾವನೆಯಿಂದ ಮಕ್ಕಳು ಹೊರಬರಬೇಕು. ಅಂತಹ ಮನೋಭಾವನೆ ಮಕ್ಕಳಲ್ಲಿ ಮೂಡಿಸಬೇಕೆಂದು ಹೇಳಿದ ಅವರು, ಬಿಇಒ ಕಚೇರಿ ಮತ್ತು ಶಿಕ್ಷಕರ ಗುರುಭವನ ಶೀಘ್ರದಲ್ಲಿ ಕಟ್ಟಿಸಿಕೊಡುವದಾಗಿ ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಹಣಮಂತ ಆರ್.ನಿರಾಣಿ ಮಾತನಾಡಿ, ಗುರುವಿನ ಮಹತ್ವ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿ ತಿಳಿಸಿಕೊಟ್ಟ ಅವರು, ಗುಣಾತ್ಮಕ ಮತ್ತು ಮೌಲ್ಯಾಧರಿತ ಶಿಕ್ಷಣ ನೀಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಲೋಕಾಪೂರ ಹಿರೇಮಠದ ಡಾ.ಚಂದ್ರಶೇಖರ ಸ್ವಾಮಿಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ತಹಸೀಲ್ದಾರ ಡಾ.ಚಿಕ್ಕಪ್ಪ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಇಒ ಎಸ್.ಎಂ.ಮುಲ್ಲಾ ಸ್ವಾಗತಿಸಿದರು. ಎ.ಆರ್.ಛಬ್ಬಿ ವಂದಿಸಿದರು .
ನಿವೃತ್ತ ಶಿಕ್ಷಕರಿಗೆ, ಶಿಕ್ಷಕರ ಪ್ರತಿಭಾವಂತ ಮಕ್ಕಳಿಗೆ, ಗಣ್ಯರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ನಾನು ಹಿಂದಿ ವಿಷಯವನ್ನು ಕಲಿಯದೆ ಇದ್ದುದರಿಂದ ಸಾಕಷ್ಟು ಭಾರಿ ತೊಂದರೆ ಮತ್ತು ಮುಜಗುರ ಅನುಭವಿಸಿದ್ದೇನೆ. ನಮ್ಮ ನಡೆ, ನುಡಿ, ಸಂಸ್ಕಾರ, ಜೀವನ ಶಿಕ್ಷಣವನ್ನು ಕಲಿಸುವುದೇ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಶಾಲಾ ಶಿಕ್ಷಕರು ಎಂಬುದಕ್ಕೆ ನಾನೇ ಸಾಕ್ಷಿ, ನಾನು ಸರ್ಕಾರಿ ಶಾಲೆಯಲ್ಲಿ ಕಲಿತಿದ್ದರಿಂದಲೇ ಇಂದು ಸಚಿವನಾಗಿ, ಶಾಸಕನಾಗಿದ್ದೇನೆ. ಯಾರು ಉನ್ನತ ಸ್ಥಾನಮಾನದಲ್ಲಿ ಇದ್ದಾರೆ ಅವರೆಲ್ಲರೂ ಬಹುತೇಕ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆದುಕೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಸರ್ಕಾರಿ ಶಾಲೆಯನ್ನು ಉಳಿಸಬೇಕು. -ಆರ್.ಬಿ.ತಿಮ್ಮಾಪುರ, ಶಾಸಕ, ಮಾಜಿ ಸಚಿವ