ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣ ಶುಕ್ರವಾರ ಸಾವಿರಾರು ಪುಟಾಣಿ ಕೃಷ್ಣರಿಂದ ತುಂಬಿದ ಕೃಷ್ಣ ಲೋಕ ಸೃಷ್ಟಿಯಾಗಿತ್ತು.
ಮಂಗಳೂರು: ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣ ಶುಕ್ರವಾರ ಸಾವಿರಾರು ಪುಟಾಣಿ ಕೃಷ್ಣರಿಂದ ತುಂಬಿದ ಕೃಷ್ಣ ಲೋಕ ಸೃಷ್ಟಿಯಾಗಿತ್ತು.ಶ್ರೀ ಕ್ಷೇತ್ರ ಕದ್ರಿಯಲ್ಲಿ ಕದ್ರಿ ದೇವಳದ ಸಹಯೋಗದೊಂದಿಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ನಡೆದ 44ನೇ ವರ್ಷದ ‘ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ - ಶ್ರೀಕೃಷ್ಣ ವೇಷ ಸ್ಪರ್ಧೆ’ಯಲ್ಲಿ ಕಂಡುಬಂದಿರುವ ದೃಶ್ಯ ಇದು.
ಬೆಳಗ್ಗೆ ಕೃಷ್ಣನ ಚಿತ್ರ ಬಿಡಿಸುವ ಶ್ರೀಕೃಷ್ಣ ವರ್ಣ ವೈಭವದಲ್ಲಿ ಪುಟಾಣಿಗಳು ಸಂಭ್ರಮದಿಂದ ಭಾಗವಹಿಸಿದ್ದರು. ಬಳಿಕ ಮಹಿಳೆಯರು ಸಾಮೂಹಿಕವಾಗಿ ಸಾಂಪ್ರದಾಯಿಕವಾಗಿ ಹಾಡನ್ನು ಹಾಡುತ್ತಾ ಕಡಗೋಲಿನಿಂದ ಮೊಸರು (ಮಜ್ಜಿಗೆ) ಕಡೆದು ಬೆಣ್ಣೆ ತೆಗೆಯುವ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಇದರಲ್ಲಿ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿದ್ದರು.44 ವಿಭಾಗ, 12 ವೇದಿಕೆಯಲ್ಲಿ ನಡೆದ ಸ್ಪರ್ಧೆ:
ದೇವಸ್ಥಾನದ ಪ್ರಾಂಗಣದ ಸುಮಾರು 12 ವೇದಿಕೆಗಳಲ್ಲಿ, ಸುಮಾರು 44 ವಿಭಾಗಗಳ ಸ್ಫರ್ಧೆಗಳು ಏಕ ಕಾಲದಲ್ಲಿ ನಡೆಯಿತು. ಕದ್ರಿ ದೇವಳದ ಒಟ್ಟು ಆವರಣದಲ್ಲಿ, ಶ್ರೀ ಮಹಾಗಣಪತಿ ದೇವಸ್ಥಾನ, ಅಭಿಷೇಕ ಮಂದಿರ, ಕದ್ರಿಕೆರೆ ಅಶ್ವತಕಟ್ಟೆ ಬಳಿ, ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ನಂದಗೋಕುಲ ವೇದಿಕೆ, ಅಭಿಷೇಕ ಮಂದಿರ 1ನೇ ಮಹಡಿ, ಕಲ್ಯಾಣ ಮಂಟಪ, ಮಂಜುಶ್ರೀ, ಅಭಿಷೇಕ ಮಂದಿರ-ಮಾತಾಕೃಪಾಗಳಲ್ಲಿ ಏಕಕಾಲದಲ್ಲಿ ಸ್ಪರ್ಧೆಗಳು ನಡೆಯಿತು.ತೊಟ್ಟಿಲ ಕೃಷ್ಣ, ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ, ಗೀತಾ ಕೃಷ್ಣ, ಶಂಖನಾದ, ಶಂಖ ಉದ್ಘೋಷ, ರಾಧಾಕೃಷ್ಣ, ರಾಧಾ ಮಾಧವ, ಯಶೋಧ ಕೃಷ್ಣ, ದೇವಕಿ ಕೃಷ್ಣ, ವಸುದೇವ ಕೃಷ್ಣ (ಮುಕ್ತವಿಭಾಗ), ಯಕ್ಷ ಕೃಷ್ಣ, ಕೃಷ್ಣ-ಕುಚೇಲ, ನಂದ ಗೋಕುಲ (ಸಮೂಹ ವಿಭಾಗ), ಛಾಯಾಕೃಷ್ಣ, ಶ್ರೀಕೃಷ್ಣ ವರ್ಣವೈಭವ ಚಿತ್ರಕಲಾ ಸ್ಪರ್ಧೆ, ಅಚ್ಚುತ ರಸಪ್ರಶ್ನೆ, ಮಾಧವ ರಸಪರಶ್ನೆ, ಕೇಶವ ರಸಪ್ರಶ್ನೆ, ಪಂಡರಾ ಪುರ ವಿಠಲ (ನೃತ್ಯ ಭಜನಾ ಸ್ಪರ್ಧೆ) ಮೊದಲಾದ ಸ್ಪರ್ಧೆಗಳು ನಡೆಯಿತು.
ಸ್ಪರ್ಧಾಳುಗಳಿಗೆ ಸಿಹಿ ತಿಂಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥ ದೇವರ ಭಾವಚಿತ್ರಮ ಕೊಳಲು, ಪ್ರೋತ್ಸಾಹರಿಂದ ನೀಡಲ್ಪಟ್ಟ ಇತರ ಉಡುಗೊರೆ ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ನೀಡಲಾಯಿತು. ವಿಜೇತರಿಗೆ ಇದರ ಜೊತೆಗೆ ಬಹುಮಾನಗಳನ್ನು ನೀಡಲಾಗುತ್ತದೆ.ಪುಟಾಣಿಗಳ, ತಾಯಂದಿರ ಸಂಭ್ರಮ:
ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಪುಟಾಣಿಗಳನ್ನು ಅವರ ತಾಯಂದಿರು ಕೃಷ್ಣನ ವೇಷ ಹಾಕಿಸಿ ತಯಾರು ಮಾಡಿಸಿ ವೇದಿಕೆ ಬಳಿ ಕರೆತಂದಿದ್ದರು. ಪುಟಾಣಿಗಳು ವೇದಿಕೆಯೇರುತ್ತಿದ್ದಂತೆ ತಾಯಂದಿರು, ಮನೆಯವರು ಸಂತಸದಿಂದ ಸಂಭ್ರಮಿಸಿ ವೀಡಿಯೋ, ಫೋಟೋ ಚಿತ್ರಿಸುವ, ಪುಟಾಣಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ದೃಶ್ಯ ಕಂಡುಬಂದಿತ್ತು.ತೊಟ್ಟಿಲ ಕೃಷ್ಣ, ಯಕ್ಷ ಕೃಷ್ಣ:
ಸ್ಪರ್ಧೆಯಲ್ಲಿ ಯಕ್ಷಕೃಷ್ಣ ಹಾಗೂ ತೊಟ್ಟಿಲ ಕೃಷ್ಣ ವಿಶೇಷ ಗಮನ ಸೆಳೆಯಿತು. ಪುಟಾಣಿಗಳು ಯಕ್ಷಗಾನ ವೇಷ ಧರಿಸಿ ಕೃಷ್ಣನ ಪಾತ್ರ ನಿರ್ವಹಿಸಿದ್ದರು. ಯಕ್ಷಗಾನದ ಹಾಡಿಗೆ ತಕ್ಕಂತೆ ಹೆಜ್ಜೆ, ಪಾತ್ರಕ್ಕೆ ತಕ್ಕಂತೆ ಅಭಿನಯ ಮಾಡಿ ನೆರೆದವರಿಂದ ಚಪ್ಪಾಳೆಗಿಟ್ಟಿಕೊಂಡರು. ತೊಟ್ಟಿಲ ಕೃಷ್ಣ ವಿಭಾಗದಲ್ಲಿ ಮಹಿಳೆಯರು (ತಾಯಂದಿರು) ತಮ್ಮದೇ ಆದ ಸಾಂಪ್ರದಾಯಿಕ ಶೈಲಿಯಲ್ಲಿ 6 ತಿಂಗಳ ಕೆಳಗಿನ ಕಂದಮ್ಮಗಳನ್ನು ತೊಟ್ಟಿಲಿಗೆ ಹಾಕುತ್ತಾ ಅವರದೇ ಭಾಷೆಯಲ್ಲಿ ಜೋಗುಳ ಹಾಡುತ್ತಾ ಮಗುವನ್ನು ತೊಟ್ಟಿಲಲ್ಲಿ ತೂಗುವುದು ಆಕರ್ಷಣೀಯವಾಗಿತ್ತು.ಉದ್ಘಾಟನೆ: ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಉದ್ಘಾಟಿಸಿ ಮಾತನಾಡಿ, ಕಲ್ಕೂರ ಪ್ರತಿಷ್ಠಾನ ವತಿಯಿಂದ ಕದ್ರಿ ಕ್ಷೇತ್ರದಲ್ಲಿ ಆರಂಭಗೊಂಡ ಶ್ರೀಕೃಷ್ಣ ವೇಷ ಸ್ಪರ್ಧೆಯಿಂದ ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯುತ್ತದೆ. ಕೃಷ್ಣ ನ ಸಂದೇಶಗಳನ್ನು ಜೀವನದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕಲ್ಕೂರ ಪ್ರತಿಷ್ಠಾನ ವತಿಯಿಂದ ನಡೆಯುವ ರಾಷ್ಟ್ರೀಯ ಮಕ್ಕಳ ಉತ್ಸವ ಗಿನ್ನಿಸ್ ದಾಖಲೆಗೆ ಸೇರಬಹುದಾದ ಕೃಷ್ಣ ವೇಷ ಸ್ಪರ್ಧೆಯಾಗಿದೆ ಎಂದರು.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಪ್ರಮುಖರಾದ ಡಾ.ಹರಿಕೃಷ್ಣ ಪುನರೂರು, ಡಾ.ಎಂ.ಬಿ.ಪುರಾಣಿಕ್, ಡಾ.ಎಂ.ಪಿ.ಶ್ರೀನಾಥ್, ಜಿ.ಕೆ.ಭಟ್ ಸೇರಾಜೆ, ಭುವನಾಭಿರಾಮ ಉಡುಪ, ಸುರೇಂದ್ರ ರಾವ್, ಲೀಲಾಕ್ಷ ಕರ್ಕೇರ, ಎಂ.ಶಶಿಧರ ಹೆಗ್ಡೆ, ಅಶೋಕ್ ಡಿ.ಕೆ., ಸಮೀರ್ ಪುರಾಣಿಕ್, ಚಂದ್ರಶೇಖರ ಶೆಟ್ಟಿ, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ, ವಿಜಯಲಕ್ಷ್ಮಿ ಶೆಟ್ಟಿ ಮತ್ತಿತರರು ಇದ್ದರು.ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.
ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಈಗ ರಾಷ್ಟ್ರೀಯ ಮಕ್ಕಳ ಉತ್ಸವ ಆಗಿ ಆಯೋಜನೆಗೊಳ್ಳುತ್ತಿದೆ. 47 ವಿಭಾಗಗಳಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಸಾವಿರಾರು ಮಂದಿ ಶಿಸ್ತುಬದ್ಧವಾಗಿ ಭಾಗವಹಿಸುತ್ತಿದ್ದಾರೆ.- ಎಸ್.ಪ್ರದೀಪ ಕುಮಾರ್ ಕಲ್ಕೂರ, ಅಧ್ಯಕ್ಷರು ಕಲ್ಕೂರ ಪ್ರತಿಷ್ಠಾನ