3 ಬಾರಿ ಶಾಸಕನಾದ ಹೆಗ್ಗಳಿಕೆ ನನ್ನನ್ನು: ಸಂತಸ । 3 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಕಾಮಗಾರಿಗೆ ಶಾಸಕ ಕೃಷ್ಣಮೂರ್ತಿ ಗುದ್ದಲಿ ಪೂಜೆ
1 ಮತದ ಸೋಲು ನನ್ನನ್ನು 19 ವರ್ಷ ವನವಾಸಕ್ಕೆ ದೂಡಿತು. 19 ವರ್ಷಗಳ ಬಳಿಕ ಹಲವು ಸೋಲುಗಳನ್ನು ಕಂಡು 3ನೇ ಬಾರಿ ಶಾಸಕನಾದ ಹೆಗ್ಗಳಿಕೆ ನನ್ನದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.ತಾಲೂಕಿನ ವಿವಿಧೆಡೆ 3 ಕೋಟಿ ರು.ಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಸರ್ಕಾರ ಸರ್ವ ಜನಾಂಗಗಳ ಅಭಿವೃದ್ಧಿಗೂ ಬದ್ಧವಾಗಿದೆ. ಶಾಸಕನಾಗಿ ನಾನು ಸಹ ಪಕ್ಷಬೇಧವಿಲ್ಲದೆ ಎಲ್ಲಾ ಧರ್ಮದವರ ಅಭಿವೃದ್ಧಿಗೂ ಬದ್ಧನಾಗಿದ್ದೇನೆ ಎಂದರು. ಸರ್ಕಾರಗಳು ಕೈಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಗೆ ಎಲ್ಲರೂ ಸಹಕರಿಸಿ. ಒಂದು ದೇಶ, ಒಂದೇ ಚುನಾವಣೆ ಎಂಬ ನಿಟ್ಟಿನಲ್ಲಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಮತದಾರರು ಒಂದು ಕಡೆ ತಮ್ಮ ಮತದ ಪ್ರಕ್ರಿಯೆ ಉಳಿಸಿಕೊಂಡು ಎರಡ್ಮೂರು ಕಡೆ ಇದ್ದರೆ ಅದನ್ನು ತೆಗೆದುಹಾಕಿ ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸಿ ಎಂದರು.ಅದೇ ರೀತಿಯಲ್ಲಿ ಕೆಲವು ಕಡೆ ಜಗಲಿಕಟ್ಟೆಯಲ್ಲಿ ಕುಳಿತು ಬಿಪಿಎಲ್ ಅರ್ಹರ ಪೈಕಿ ಕೆಲವರನ್ನು ಕೈಬಿಡಲಾಗಿದ್ದು, ಇದು ಸರಿಹೋಗಬೇಕು. ಅರ್ಹರಿಗೆ ಮಾತ್ರ ಬಿಪಿಎಲ್ ಸಿಗಬೇಕು ಎಂದರು.ಇಂದು 20 ಲಕ್ಷ ರು. ಅಂದಾಜಿನಲ್ಲಿ ಟಗರಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಅಲ್ಲದೆ 67 ಲಕ್ಷ ರು. ಅಂದಾಜಿನಲ್ಲಿ ತೂಕದ ವಿದ್ಯುನ್ಮಾನ ಯಂತ್ರಕ್ಕೆ ಚಿಲಕವಾಡಿ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದ್ದೇನೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಸಹಕಾರ ನೀಡಬೇಕು ಎಂದರು.ಎಳನೀರು ಮಾರುಕಟ್ಟೆಗೆ ಮರುಟೆಂಡರ್ ಪ್ರಕ್ರಿಯೆಯಲ್ಲಿ 3 ಮಂದಿ ಗುತ್ತಿಗೆದಾರರು ಭಾಗಿಯಾಗಿದ್ದು, ಈ ಬಾರಿ ಖಂಡಿತ ಪ್ರಕ್ರಿಯೆ ಪೂರ್ಣಗೊಂಡು ಭೂಮಿ ಪೂಜೆ ನೆರವೇರಿಸಲಾಗುವುದು. ಆಲಹಳ್ಳಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 60 ಲಕ್ಷ ರು. ಅಂದಾಜಿನಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.ವಿವಿಧ ಕಾಮಗಾರಿಗೆ ಚಾಲನೆ:
ಶಾಸಕರು ಇದೆ ವೇಳೆ ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿ 30 ಲಕ್ಷ ರು. ವೆಚ್ಚದ ಸಿಸಿ ರಸ್ತೆ ಚರಂಡಿ ಕಾಮಗಾರಿ, ಟಗರಪುರ ಗ್ರಾಮದಲ್ಲಿ 20 ಲಕ್ಷ ರು. ವೆಚ್ಚದ 2015-26ನೇ ಸಾಲಿನ ಜಿ.ಪಂ ಅನುದಾನದಲ್ಲಿ ನಿರ್ಮಾಣಗೊಂಡ ಗ್ರಂಥಾಲಯ ಕಟ್ಟಡ, ಚಿಲಕವಾಡಿ ಬೆಟ್ಟದ ಸಮೀಪದಲ್ಲಿ 80 ಮೆಟ್ರಿಕ್ ಟನ್ ಸಾಮರ್ಥ್ಯದ ವಿದ್ಯುನ್ಮಾನದ ತೂಕದ ಯಂತ್ರ ನಿರ್ಮಾಣಕ್ಕೆ 87 ಲಕ್ಷ ರು. ವೆಚ್ಚದ ಕಾಮಗಾರಿ, ಕುಂತೂರು ಗ್ರಾಮದಲ್ಲಿ 30 ಲಕ್ಷ ರು. ವೆಚ್ಚದ ಸಿಸಿ ರಸ್ತೆ ಚರಂಡಿ ಕಾಮಗಾರಿ, ಗೊಬ್ಬಳಿಪುರ ಗ್ರಾಮದಲ್ಲಿ 30 ಲಕ್ಷ ರು. ಸಿಸಿ ರಸ್ತೆ ಚರಂಡಿ, ಹರಳೆ ಗ್ರಾಮದಲ್ಲಿ 35 ಲಕ್ಷ ರು., ಕೆಂಪನಪಾಳ್ಯ ಗ್ರಾಮದಲ್ಲಿ 35 ಲಕ್ಷ ರು. ವೆಚ್ಚದ ಸಿಸಿ ರಸ್ತೆ, ಚರಂಡಿ, ಮೊಳೆಕಟ್ಟೆ ಗ್ರಾಮದಲ್ಲಿ 35 ಲಕ್ಷ ರು. ವೆಚ್ಚದ ರಸ್ತೆ ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ತೋಟೇಶ್, ಯುವ ಮುಖಂಡ ಚೇತನ್ ದೊರೈರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ತಾ.ಪಂ ಇಒ ಕುಮಾರ್, ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ಎಇ ದರ್ಶನ್, ಟಗರಪುರ ಪಿಡಿಒ ಮಲ್ಲೇಶ್, ಗುತ್ತಿಗೆದಾರ ಇಫ್ರಾನ್, ಗೊಬ್ಬಳಿಪುರ ರಾಚಯ್ಯ, ಎಪಿಎಂಸಿ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಬಸವಣ್ಣ ಇದ್ದರು.--8ಕೆಜಿಎಲ್ 51ಕೊಳ್ಳೇಗಾಲ ತಾಲೂಕಿನ ಹಲವೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು.