ಹೊಸಪೇಟೆ: ಕಾಡು ಸಂರಕ್ಷಣೆಗೆ ಕಟಿಬದ್ಧರಾಗಿರುವ ತಮ್ಮೆಲ್ಲರ ಧ್ವನಿಯಾಗಿ ನಾನು ಬಂದಿರುವೆ. ನಿಮ್ಮ ಸಮಸ್ಯೆ ವೈಯಕ್ತಿಕವಾಗಿ ನನ್ನ ಸಮಸ್ಯೆ ಎಂದೇ ಭಾವಿಸಿರುವೆ. ತಮ್ಮ ಅಹವಾಲನ್ನು ಸರ್ಕಾರದ ಗಮನಕ್ಕೆ ತರುವೆ ಎಂದು ವನ್ಯಜೀವಿ ಸಂರಕ್ಷಣೆ ಅಭಿಯಾನದ ರಾಯಭಾರಿ ಹಾಗೂ ನಟ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದರು.
ಕಾಡು ಉಳಿಸಿದರೆ, ನಮ್ಮನ್ನು ಬೆಳೆಸುತ್ತದೆ. ಹಾಗಾಗಿ ನಾವು ಮೊದಲು ಕಾಡುಪ್ರಾಣಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡೋಣ. ಹೆಚ್ಚುವರಿ ಭತ್ಯೆ ದಿನಕ್ಕೆ ₹30 ನೀಡುವುದರ ಬಗ್ಗೆ ಈಗಾಗಲೇ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರ ಬಳಿ ಚರ್ಚಿಸಿರುವೆ. ಅರಣ್ಯ ಇಲಾಖೆ ಸಿಬ್ಬಂದಿ ಆರೋಗ್ಯದ ಬಗ್ಗೆ ಮತ್ತು ಪ್ರಾಣಿಗಳಿಗೆ ಪಶುವೈದ್ಯರ ನೇಮಕಾತಿ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
ಎಲ್ಲೆಡೆ ಸಸಿಗಳನ್ನು ನೆಡುವ ಕಾರ್ಯ ಆಗಬೇಕಿದೆ. ನನ್ನ ಮನೆ ಆವರಣದಲ್ಲಿ ನೇರಳೆ ಮರ ಇದೆ. ಅದನ್ನು ತೆಗೆದು ಬಿಟ್ಟು, ದೊಡ್ಡ ಮನೆ ಕಟ್ಟಬಹುದು ಎಂದು ಹಲವರು ಸಲಹೆ ನೀಡಿದರು. ಆದರೆ, ನಾನು ಮಾತ್ರ ಈ ಮರ ಉಳಿಸಿಕೊಂಡಿರುವೆ. ಸಸಿಗಳನ್ನು ಬೆಳೆಸಿದರೆ ನಾವು ಬೆಳೆಯುತ್ತೇವೆ. ಈಗಾಗಲೇ ನನ್ನ ಅಭಿಮಾನಿಗಳಿಗೂ ಈ ಸಂದೇಶ ರವಾನಿಸಿರುವೆ. ಕಾಡಂಚಿನ ಮಕ್ಕಳ ಶಿಕ್ಷಣದ ಬಗ್ಗೆಯೂ ನನಗೆ ಕಾಳಜಿ ಇದೆ ಎಂದರು.ಡಿಎಫ್‌ಒ ಎಚ್.ಅನುಪಮ ಮಾತನಾಡಿ, ಅರಣ್ಯ ಸಿಬ್ಬಂದಿಗೆ ಗನ್ ಕೊಡುವುದರ ಬಗ್ಗೆ ಬಹಳ ಸಲ ಚರ್ಚೆ ಆಗಿದೆ. ಆದರೆ, ಕಾಡು ಪ್ರಾಣಿಗಳ ಸಂರಕ್ಷಣೆ ದೃಷ್ಟಿಕೋನದೊಂದಿಗೆ ಈ ಕಾರ್ಯ ಮಾಡಲಾಗುತ್ತಿಲ್ಲ. ನಾವು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ. ಈ ಹಿಂದಿನ ಸಾಂಪ್ರದಾಯಿಕ ಪದ್ಧತಿಯೊಂದಿಗೆ ಆಧುನಿಕತೆಯತ್ತ ಹೆಜ್ಜೆ ಹಾಕಬೇಕಿದೆ. ಕಾಡು ಬೆಳೆಸುವುದರೊಂದಿಗೆ ಕಾಡಂಚಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದೆ ಎಂದರು.
ಎಸಿಎಫ್ ಭಾಸ್ಕರ್, ಆರ್‌ಎಫ್‌ಒ ಬಸವರಾಜ, ನಾಗರಾಜ, ಕೌಶಿಕ್ ದಳವಾಯಿ ಸೇರಿದಂತೆ ಸಿಬ್ಬಂದಿಗಳಾದ ಪುಷ್ಪಾಂಜಲಿ, ವೀರೇಶ್, ಚನ್ನಬಸವ ಸೇರಿದಂತೆ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ರವಿಚಂದ್ರ ನಿರ್ವಹಿಸಿದರು.