ಕನ್ನಡಪ್ರಭ ವಾರ್ತೆ ಹಲಗೂರು
ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಅರಿತು ಎಲ್ಲಾ ಸದಸ್ಯರ ಸಲಹೆ ಸಹಕಾರ ಪಡೆದು ಸಂಸ್ಥೆ ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷ ಜಿ.ಎಸ್.ಮನೋಹರ್ ತಿಳಿಸಿದರು.ಲಯನ್ಸ್ ಕ್ಲಬ್ ಆವರಣದಲ್ಲಿ ಜಿ.ಎಸ್.ಮನೋಹರ್ ನೇತೃತ್ವದ ನೂತನ ತಂಡದ ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿನ ಪದಾಧಿಕಾರಿಗಳ ಸಹಕಾರ ಸಲಹೆ ಸೂಚನೆ ಮೇರೆಗೆ ಸೇವಾ ಕಾರ್ಯಗಳ ಜೊತೆಗೆ ಪ್ರತಿದಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಸಿವು ನಿವಾರಣಾ ಕಾರ್ಯಕ್ರಮವನ್ನು ಎಂದಿನಂತೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ಲಯನ್ಸ್ ಮಾಜಿ ಜಿಲ್ಲಾ ರಾಜ್ಯಪಾಲ ಡಾ.ಎನ್.ಕೃಷ್ಣೇಗೌಡ ಮಾತನಾಡಿ, ಸಂಸ್ಥೆಯಲ್ಲಿ ಪದಗ್ರಹಣ ಸಮಾರಂಭವೆಂದರೆ ಅದು ಹಬ್ಬದ ವಾತಾವರಣವಾಗಿದೆ. ಎಲ್ಲೆಡೆ ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ. ಮನುಷ್ಯನಿಗೆ ಅದೃಷ್ಟ ಅವಕಾಶವಿದ್ದರೆ ಉನ್ನತ ಸ್ಥಾನಮಾನ ದೊರಕುತ್ತದೆ ಎಂದರು.ಸಮಾಜದಲ್ಲಿ ಕಾಲು ಎಳೆಯುವವರು ಹೆಚ್ಚಿದ್ದು, ಬೆನ್ನು ತಟ್ಟಿ ಪ್ರೋತ್ಸಾಹಿಸುವವರು ವಿರಳವಾಗಿದ್ದಾರೆ. ಕೆಲವರಿಗೆ ಅದೃಷ್ಟವಿದ್ದರೆ ಅವಕಾಶವಿಲ್ಲ, ಅವಕಾಶವಿದ್ದರೆ ಅದೃಷ್ಟವಿಲ್ಲ. ಇದಕ್ಕೆ ಸಮಾಜದಲ್ಲಿರುವ ಅಸಮತೋಲನ ಹಣಕಾಸಿನ ಪರಿಸ್ಥಿತಿ ಎಂದರು.
ಸಂಸ್ಥೆಗಳ ಮೂಲಕ ಸೇವಾ ಕಾರ್ಯ ಮಾಡಿದಾಗ ಆತ್ಮತೃಪ್ತಿ ಸಿಗುತ್ತದೆ. ಆದರೂ ನಿಮ್ಮ ಸೇವಾ ಕಾರ್ಯಕ್ರಮಗಳಿಗೆ ಪ್ರತಿಫಲ ಖಂಡಿತ ಸಿಗುತ್ತದೆ ಎಂದು ಧೈರ್ಯ ತುಂಬಿದರು.ನೂತನ ತಂಡಕ್ಕೆ ಮಾಜಿ ಜಿಲ್ಲಾ ರಾಜಪಾಲ ವಿ.ರೇಣುಕಾ ಕುಮಾರ್ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಸಂಸ್ಥೆಯಿಂದ ಗಣ್ಯರು ಹಾಗೂ ಉತ್ತಮ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಕ್ಯಾನ್ಸರ್ ಪೀಡಿತ ಮದ್ದೂರು ತಾಲೂಕು ತಗ್ಗಹಳ್ಳಿ ಗ್ರಾಮದ ಯಶಿಕಾ ರಾಜ್ ಎಂಬವರಿಗೆ ಸಂಸ್ಥೆಯಿಂದ ಆಸ್ಪತ್ರೆ ವೆಚ್ಚಕ್ಕಾಗಿ 20 ಸಾವಿರ ರು.ಗಳನ್ನು ಪೋಷಕರಿಗೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಲಯನ್ ಮತಿ ದೇವಕುಮಾರ್, ಎಂ.ಸಿದ್ದೇಗೌಡ, ಟಿ.ಆರ್.ಸೋಮೇಗೌಡ, ಟಿ.ಸಿ.ಚಿಕ್ಕೇಗೌಡ ಸೇರಿದಂತೆ ನೂತನ ಕಾರ್ಯದರ್ಶಿ ಎ.ಟಿ.ಶ್ರೀನಿವಾಸ, ಖಜಾಂಜಿ ಸಿ.ಪ್ರವೀಣ, ಉಪಾಧ್ಯಕ್ಷರಾದ ಎನ್.ಎಸ್.ಗುಣೇಶ್, ಡಿ.ಎಲ್.ಮಾದೇಗೌಡ ಮತ್ತು ವನಿತ ಮನೋಹರ, ಡಾ.ನಾಗೇಶ್, ಎನ್.ಕೆ.ಕುಮಾರ್, ಡಾ.ಷಂಶುದ್ದೀನ್ ಸೇರಿದಂತೆ ಇತರರು ಇದ್ದರು.