ಇನ್ನೂ ಮೂರು ಚುನಾವಣೆ ಸ್ಪರ್ಧಿಸುವೆ, ಜನರ ಶ್ರೀರಕ್ಷೆ ಇರಲಿ

KannadaprabhaNewsNetwork | Published : May 9, 2025 12:30 AM
Follow Us

ಸಾರಾಂಶ

ನಾನು ಶಾಸಕನಾಗುವ ಪೂರ್ವದಲ್ಲಿ ಕ್ಷೇತ್ರದಲ್ಲಿ ಬರೀ 7 ಇದ್ದ ಹೈಸ್ಕೂಲ್‌ ಸಂಖ್ಯೆ 70ಕ್ಕೆ ಮುಟ್ಟಿದೆ. 21 ಪದವಿ ಪೂರ್ವ ಕಾಲೇಜು, 17 ವಸತಿ ಶಾಲೆ, ಎಂಜಿನಿಯರಿಂಗ್ ಕಾಲೇಜು, ಕೌಶಾಲ್ಯಾಭಿವೃದ್ಧಿ ಕೇಂದ್ರ ಆರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇನೆ.

ಕೊಪ್ಪಳ(ಯಲಬುರ್ಗಾ):

ಯಲಬುರ್ಗಾ ಕ್ಷೇತ್ರದಲ್ಲಿ ಎಲ್‌ಕೆಜಿಯಿಂದ ಪಿಜಿ ವರೆಗೂ ಉಚಿತ ಶಿಕ್ಷಣ ದೊರೆಯುವಂತಹ ವ್ಯವಸ್ಥೆ ಮಾಡಿದ್ದೇನೆ. ಕುಕನೂರು ಮತ್ತು ಯಲಬುರ್ಗಾ ತಾಲೂಕನ್ನು ವಿದ್ಯಾಕಾಶಿಯನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ ಎಂದಿರುವ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ, ಇನ್ನೂ ಮೂರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಕ್ಷೇತ್ರದ ಜನರ ಶ್ರೀರಕ್ಷೆ ಇರಲಿ ಎಂದು ಹೇಳಿದ್ದಾರೆ.

ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ, ಲಿಂಗನಬಂಡಿ ಗ್ರಾಮಗಳಲ್ಲಿ ಮಂಗಳವಾರ ನೂತನ ಸರ್ಕಾರಿ ಪ್ರೌಢಶಾಲೆಗಳ ಕಟ್ಟಡಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ಶಾಸಕನಾಗುವ ಪೂರ್ವದಲ್ಲಿ ಕ್ಷೇತ್ರದಲ್ಲಿ ಬರೀ 7 ಇದ್ದ ಹೈಸ್ಕೂಲ್‌ ಸಂಖ್ಯೆ 70ಕ್ಕೆ ಮುಟ್ಟಿದೆ. 21 ಪದವಿ ಪೂರ್ವ ಕಾಲೇಜು, 17 ವಸತಿ ಶಾಲೆ, ಎಂಜಿನಿಯರಿಂಗ್ ಕಾಲೇಜು, ಕೌಶಾಲ್ಯಾಭಿವೃದ್ಧಿ ಕೇಂದ್ರ ಆರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇನೆ. ಈ ವರ್ಷ ಮತ್ತೆ 4 ಪ್ರೌಢಶಾಲೆ ಮಂಜೂರು ಮಾಡಿಸಿ ಪ್ರಾರಂಭಿಸುತ್ತೇನೆ. ನನ್ನ ಹೊರೆತುಪಡಿಸಿ ಮೂರು ಬಾರಿ ಮೂವರು ಶಾಸಕರಾದರು ಒಂದೇ ಒಂದು ಹೈಸ್ಕೂಲ್ ಮಂಜೂರು ಮಾಡಿಸಿಲ್ಲ. ಈ ಬಾರಿ‌ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ತಾಲೂಕು ಉತ್ತಮ ಫಲಿತಾಂಶ ಬಂದಿದೆ. ಆದರೂ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಫಲಿತಾಂಶ ಬರಬೇಕು ಎಂದರು.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹ 50 ಕೋಟಿ ನೀಡಿದ್ದೇನೆ. 25 ಆಂಗ್ಲ ಮಾಧ್ಯಮ ಶಾಲೆ, 65 ಎಲ್‌ಕೆಜಿ ಶಾಲೆ ಆರಂಭಿಸಲಾಗಿದೆ ಎಂದ ಅವರು, ಜನರು ಅಭಿವೃದ್ಧಿ ಪರ ಕೆಲಸ ಮಾಡುವವರನ್ನು ಗೆಲ್ಲಿಸುತ್ತಾರೆ ವಿನಃ ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವವರನಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ವಿಪಕ್ಷದವರು ವಿನಾಕಾರಣ ಆರೋಪಿಸಿದರೂ ಅದು ಸತ್ಯಾಂಶದಿಂದ ಕೂಡಿಲ್ಲ. ಬರೀ ಆಧಾರ ರಹಿತ ಆರೋಪವಾಗಿದೆ ಎಂದು ತಿರುಗೇಟು ನೀಡಿದರು.

3 ಚುನಾವಣೆಗೆ ಸ್ಪರ್ಧೆ:

ಲಿಂಗನಬಂಡಿ ನನ್ನ ನೆಚ್ಚಿನ ಗ್ರಾಮ. ನನ್ನ 12 ಚುನಾವಣೆಯಲ್ಲಿ ನನಗೆ ಅಧಿಕ‌ ಮತ ನೀಡಿ ಆಶೀರ್ವದಿಸಿದ್ದೀರಿ. ಹೀಗಾಗಿ ಈ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, ಗ್ರಾಮಕ್ಕೆ ರೈಲ್ವೆ, ಮೊರಾರ್ಜಿ ಶಾಲೆ, ಹೈಸ್ಕೂಲ್ ಸೇರಿದಂತೆ ವಿವಿಧ ಅಭಿವೃದ್ಧಿ ಮಾಡಿದ್ದೇನೆ. ಇನ್ನು 3 ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ನೀವು ಆಶೀರ್ವದಿಸಬೇಕು ಎಂದ ಅವರು, ನಾನು ಕ್ಷೇತ್ರ ಬಿಟ್ಟು ಮತ್ತೊಂದು ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಿಡಿಒಗೆ ತರಾಟೆ:

ತುಮ್ಮರಗುದ್ದಿ ಗ್ರಾಮಕ್ಕೆ ಆಗಮಿಸಿದ ಬಸವರಾಜ ರಾಯರಡ್ಡಿಗೆ ಗ್ರಾಮಸ್ಥರು ಗ್ರಾಪಂನಲ್ಲಿ ಸಿಬ್ಬಂದಿ ಲಭ್ಯವಿರುವುದಿಲ್ಲ. ಪಿಡಿಒ‌ ರವಿಕುಮಾರ ಲಿಂಗಣ್ಣನವರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಆಗ ಪಿಡಿಒ ತರಾಟೆಗೆ ತೆಗೆದುಕೊಂಡ ರಾಯರಡ್ಡಿ, ತೆರಿಗೆ ಹಣದಿಂದ ವೇತನ ಪಡೆಯುವ ನೀವು ಜನರ ಕೆಲಸ ಮಾಡದೇ ಇದ್ದರೇ ಹೇಗೆ. ನಿಮ್ಮ ವರ್ತನೆ ಬದಲಾಯಿಸಿಕೊಳ್ಳಿ, ಜನರ ಕೆಲಸ ಮಾಡಿಕೊಡಬೇಕು. ಇಲ್ಲದಿದ್ದರೆ ಕ್ರಮ‌ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಗ್ರಾಪಂ ಅಧ್ಯಕ ಹೊಳಿಯಮ್ಮ ಹಳ್ಳಿಕೇರಿ, ಶಾಂತಮ್ಮ ವಾದಿ, ತಹಸೀಲ್ದಾರ್‌ ಬಸವರಾಜ ತೆನ್ನಳ್ಳಿ, ತಾಪಂ‌ ಇಒ ಸಂತೋಷ ಪಾಟೀಲ ಬಿರಾದಾರ, ಅಧಿಕಾರಿಗಳಾದ ಮಲ್ಲಿಕಾರ್ಜುನ, ಶಿವಕುಮಾರ ಕಲ್ಯಾಣಿ, ಮಹಾಂತೇಶ ಹಿರೇಮಠ, ಅಶೋಕ ಗೌಡರ, ಕೆರಿಬಸಪ್ಪ ನಿಡಗುಂದಿ, ರಾಮಣ್ಣ ಸಾಲಭಾವಿ, ಡಾ. ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಬಾಲಚಂದ್ರ ಸಾಲಭಾವಿ, ಎಂ.ಎಫ್‌. ನದಾಫ್‌, ಶೇಷಗಿರಿರಾವ್ ಕುಲಕರ್ಣಿ, ಈಶ್ವರ ಅಟಮಾಳಗಿ, ಸಂಗಣ್ಣ ಟೆಂಗಿನಕಾಯಿ, ಶಂಕ್ರಪ್ಪ ಬಡಿಗೇರ, ಕಳಕನಗೌಡ ಪಾಟೀಲ ಇದ್ದರು.