ಸಿಎಂ ಜತೆ ರೈತರ ಚರ್ಚೆಗೆ ದಿನಾಂಕ ನಿಗದಿಪಡಿಸುವೆ

KannadaprabhaNewsNetwork |  
Published : Jul 09, 2026, 12:15 AM IST
8ಕೆಆರ್ ಎಂಎನ್ 1.ಜೆಪಿಜಿಶಾಸಕ ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆ ವಿರೋಧಿಸಿ ಹೋರಾಡುತ್ತಿರುವ ರೈತರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಲು ಅವಕಾಶ ಕೇಳಿದ್ದಾರೆ. ಮುಖ್ಯಮಂತ್ರಿಗಳನ್ನು ಕೇಳಿ ದಿನಾಂಕ ನಿಗದಿ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆ ವಿರೋಧಿಸಿ ಹೋರಾಡುತ್ತಿರುವ ರೈತರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಲು ಅವಕಾಶ ಕೇಳಿದ್ದಾರೆ. ಮುಖ್ಯಮಂತ್ರಿಗಳನ್ನು ಕೇಳಿ ದಿನಾಂಕ ನಿಗದಿ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ನಗರದ ಜಿಬಿಡಿಎ ಸಭಾಂಗಣದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯ ಭೂ ಮಾಲೀಕರು, ರೈತರು ಮತ್ತು ರೈತ ಮುಖಂಡರ ಸಭೆ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ, ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ಭೂಮಿ ಕೊಡುವುದಿಲ್ಲ. ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ದಿನಾಂಕ ನಿಗದಿ ಪಡಿಸಲಾಗುವುದು ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಹೋರಾಟ ಮಾಡುತ್ತಿರುವ ರೈತರ ಮನವೊಲಿಸುವ ಪ್ರಯತ್ನ ಮಾಡುವಂತೆ ಸೂಚನೆ ನೀಡಿದ್ದರು. ಅಲ್ಲದೆ, ಕೆಲ ರೈತರು ಪುನರ್ ವಸತಿ ವಿಚಾರ ಮರು ಪರಿಶೀಲನೆ ಮಾಡಿದರೆ ರೈತರು ಒಪ್ಪ ಬಹುದೆಂದು ಸಲಹೆ ನೀಡಿದ್ದರು. ಅದರಂತೆ ರೈತರ ಸಭೆ ಕರೆದು ಚರ್ಚೆ ನಡೆಸಿದ್ದೇನೆ.

ಕೆಲ ರೈತರು ಯೋಜನೆ ಕೈಬಿಡುವಂತೆ ಹಾಗೂ ಇನ್ನೂ ಕೆಲ ರೈತರು ಯೋಜನೆ ಅನುಷ್ಠಾನಗೊಳಿಸಿ ಆತಂಕ ನಿವಾರಿಸುವಂತೆ ಒತ್ತಾಯಿಸುತ್ತಿದ್ದಾರೆ. ಯೋಜನೆ ಪರವಾಗಿರುವ ರೈತರು ನೋಟಿಫಿಕೇಷನ್ ಆಗಿದ್ದರೂ ಜೆಎಂಸಿ ಮಾಡದೆ ತೊಂದರೆ ಕೊಡುತ್ತಿದ್ದು, ತಮಗೂ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಅವರೆಲ್ಲರ ಸಭೆ ಕರೆದು ಚರ್ಚೆ ನಡೆಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವವರೆಗೂ ಭೂ ಪರಿಹಾರ ನೀಡದಂತೆ ಹಾಗೂ ಜೆಎಂಸಿ ಮಾಡದಂತೆ ರೈತರು ಒತ್ತಾಯಿಸಿದ್ದರಲ್ಲ ಎಂಬ ಪ್ರಶ್ನೆಗೆ ಆ ರೀತಿ ಪ್ರಕ್ರಿಯೆ ನಿಲ್ಲಿಸಲು ಸಾಧ್ಯವಿಲ್ಲ. ಫೈನಲ್ ನೋಟಿಫಿಕೇಶನ್ ಹೊರಡಿಸಿದ ಮೇಲೆ ಡಿ ನೋಟಿಫೈ ಮಾಡಲು ಸಾಧ್ಯವಿಲ್ಲ. ನೋಟಿಫಿಕೇಶನ್ ಹೊರಡಿಸಿರುವ ರೈತರಿಗೆ ಭೂ ಪರಿಹಾರ ನೀಡದಿದ್ದರೆ ಆ ರೈತರು ಬೈಯುತ್ತಾರೆ. ಯಾವ ರೈತರು ಪರಿಹಾರ ಕೊಡುವಂತೆ ಕೇಳಿ ಒಪ್ಪಿಗೆ ಪತ್ರ ಕೊಡುತ್ತಾರೊ ಆ ರೈತರ ಭೂಮಿಯ ಜೆಎಂಸಿ ಮಾಡುತ್ತೇವೆ. ಬಲವಂತವಾಗಿ ಜೆಎಂಸಿ ಮಾಡುವುದಿಲ್ಲ ಎಂದು ಉತ್ತರಿಸಿದರು.

ಅಂತಿಮ ಅಧಿಸೂಚನೆ ಹೊರಡಿಸಿರುವ ಮೂರು ಗ್ರಾಮಗಳಲ್ಲಿ ಶೇಕಡ 75ರಷ್ಟು ರೈತರು 110 ಕೋಟಿ ಭೂ ಪರಿಹಾರ ಪಡೆದಿದ್ದಾರೆ. ಭೂ ಮಾಲೀಕರು ಕೆಲ ದಾಖಲಾತಿ ಒದಗಿಸದ ಕಾರಣ ಪರಿಹಾರ ವಿತರಣೆ ತಡವಾಗಿದೆ.

ಶೀಘ್ರದಲ್ಲಿಯೇ ಉಳಿದ 6 ಕಂದಾಯ ಗ್ರಾಮಗಳ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಪಾದಾರ್ಪಣೆ ಮಾಡಿದ ಮೇಲೆ ರೈತರ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿದೆ. ಮುಖ್ಯಮಂತ್ರಿಗಳು ರೈತರೊಂದಿಗೆ ಮಾತನಾಡುವಂತೆ ನನಗೆ ಜವಾಬ್ದಾರಿ ಕೊಟ್ಟಿದ್ದರು. ಈಗ ರೈತರ ಮನವೊಲಿಸುವ ಕೆಲಸ ಮಾಡುತ್ತಿದ್ದೇನೆ. ಪ್ರತಿಭಟನೆ ಮಾಡುತ್ತಿರುವ ಶೇಕಡ 40ರಷ್ಟು ಜನರನ್ನು ಮನವೊಲಿಸಿದ್ದೇವೆ. ನಿಧಾನವಾಗಿ ರೈತರು ಯೋಜನೆ ಒಪ್ಪಿಕೊಂಡು ಭೂಮಿ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಬೈರಮಂಗಲ ವೃತ್ತಕ್ಕೆ ಹೋದಾಗ ಗೊಂದಲ ಉಂಟಾಗಿ ಗಲಾಟೆಯಾದರೆ ನಮ್ಮ ಹೆಣ್ಣು ಮಕ್ಕಳ ಮೇಲೆ ಕೇಸು ದಾಖಲಾಗುತ್ತದೆ. ಅಲ್ಲಿ ಹೋದಾಗ ಅವಘಡವಾದರೆ ರೈತರಿಗೆ ತೊಂದರೆಯಾಗುತ್ತದೆ. ಹಾಗಾಗಿಯೇ ರೈತರನ್ನು ಜಿಬಿಡಿಎ ಕಚೇರಿಗೆ ಕರೆದು ಸಭೆ ಮಾಡುತ್ತಿದ್ದೇನೆ. ಎಂಟು ತಿಂಗಳ ಹಿಂದೆ ಇಲ್ಲೆ ಸಭೆ ನಡೆಸಿದಾಗಲೂ ಜೆಡಿಎಸ್ ನವರು ಪಿತೂರಿ ಮಾಡಿ ಗಲಾಟೆ ಮಾಡಿಸಲು ಪ್ರಯತ್ನಿಸಿದರು. ರೈತರು ಪ್ರಾಮಾಣಿಕವಾಗಿದ್ದರೆ ಸಮಸ್ಯೆ ಆಗುವುದಿಲ್ಲ. ಯಾವುದಾದರು ಪಕ್ಷದಲ್ಲಿ ಗುರುತಿಸಿಕೊಂಡಾಗ ಮಾತ್ರ ಸಮಸ್ಯೆಗಳು ಉಲ್ಬಣಿಸುತ್ತವೆ ಎಂದು ಬಾಲಕೃಷ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಕಾಂಗ್ರೆಸ್ ಮುಖಂಡ ಬೆಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌.............

ಎಚ್ಡಿಕೆ ಕೇತಗಾನಹಳ್ಳಿ ಜಮೀನು ರೆಡ್‌ಜೋನ್ ಮಾಡಿದರೆ ಒಪ್ಪಿಕೊಳ್ತಾರಾ

ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿಯವರು ರೆಡ್ ಜೋನ್ ನಿಂದ ಏನು ತೊಂದರೆ ಇಲ್ಲವೆಂದು ಹೇಳುತ್ತಾರೆ. ಹಾಗಾದರೆ ಅವರ ಕೇತಗಾನಹಳ್ಳಿ ಜಮೀನನ್ನು ರೆಡ್ ಜೋನ್ ಮಾಡಿದರೆ ಒಪ್ಪಿಕೊಳ್ಳುತ್ತಾರಾ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಢೋಂಗಿ ರಾಜಕಾರಣ ಬಿಡಬೇಕು. ಈಗ ನಾಟಕ ಆಡುವ ಬದಲು 2018ರಲ್ಲಿ ಎರನಡೇ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಯೋಜನೆ ಕೈಬಿಡಬಹುದಾಗಿತ್ತು. ರೆಡ್ ಜೋನ್ ನಿಂದ ತೊಂದರೆ ಆಗುವುದಿಲ್ಲವೆಂದು ಏಕೆ ಸುಳ್ಳು ಹೇಳುತ್ತಿದ್ದಾರೆ. ಕೇತಗಾನಹಳ್ಳಿಯಲ್ಲಿರುವ ಅವರ ಜಮೀನನ್ನು ರೆಡ್ ಜೋನ್ ಮಾಡಿದರೆ ಒಪ್ಪಿಕೊಳ್ಳುತ್ತಾರಾ ಕೇಳಿ. ಅವರದು ಯಾವಾಗಲೂ ಹಿಟ್ ಅಂಡ್ ರನ್ ಕೇಸ್ ಎಂದು ವ್ಯಂಗ್ಯವಾಡಿದರು.

ಈ ಯೋಜನೆ ಕೈ ಬಿಡುವಂತೆ ನನಗೆ ಯಾವ ಕಾಂಗ್ರೆಸ್ ನಾಯಕರು ಹೇಳಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಪ್ರಮಾಣ ಮಾಡಿ ಹೇಳಲಿ. ಆ ಮಾತು ಹೇಳಿದರೆ ನಾನೇ ರಾಜಕೀಯ ಬಿಡುತ್ತೇನೆ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೌನ್ ಶಿಪ್ ಯೋಜನೆ ಮಾಡಿದ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ. ಯೋಜನೆ ಮಾಡಿದವರೇ ಚರ್ಚೆಗೆ ಆಹ್ವಾನಿಸುವುದು ಹಾಸ್ಯಾಸ್ಪದ. ರಾಜಕಾರಣಕ್ಕಾಗಿ ಜೆಡಿಎಸ್ ನವರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಾಲಕೃಷ್ಣ ಟೀಕಿಸಿದರು.

ಬಾಕ್ಸ್‌.........

ಕುಮಾರಸ್ವಾಮಿಗೆ ಮಿನಿಮಮ್ ಕಾಮನ್ ಸೆನ್ಸ್ ಇಲ್ಲ

ರಾಮನಗರ: ಎಸ್ ಐಆರ್ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿಯವರು ಉದ್ದೇಶ ಪೂರಕವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನಾವೇನು ಶಾಸಕರು, ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರಿಗೆ ಮಿನಿಮಮ್ ಕಾಮನ್ ಸೆನ್ಸ್ ಇಲ್ಲ ಎಂದು ಶಾಸಕ ಬಾಲಕೃಷ್ಣ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ - ಬಿಜೆಪಿಯವರು ಬಿಎಲ್ ಒ ಆಗಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಅವಮಾನ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಅವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇಂತಹ ವಿಷಯಗಳಲ್ಲಿ ಅಧಿಕಾರಿಗಳು ಚುನಾವಣಾ ಆಯೋಗದ ನಿಯಂತ್ರದಲ್ಲಿ ಇರುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲವಲ್ಲ ಎಂದರು.

ಒಂದು ಕೋಮಿನ ಮೇಲೆ ಉದ್ದೇಶ ಪೂರಕವಾಗಿ ಗೂಬೆ ಕೂರಿಸುವ ವ್ಯವಸ್ಥಿತವಾದ ಸಂಚು ನಡೆಯುತ್ತಿದೆ. ಕುಮಾರಸ್ವಾಮಿರವರು ಹಿಂದೆ ಮತ ಹಾಕಿಸಿಕೊಳ್ಳುವಾಗ ಅವರು ಇಲ್ಲಿಯವರು. ಈಗ ಬಾಂಗ್ಲಾದವರು ಆಗಿದ್ದಾರೆ. ಕುಮಾರಸ್ವಾಮಿರವರು ಇಂತಹ ಚಿಲ್ಲರೆ ರಾಜಕಾರಣ ಬಿಡಬೇಕು ಎಂದು ಹೇಳಿದರು.

ಕೋಟ್ ................

ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ದೆಹಲಿಗೆ ಹೋಗಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ನನಗೇಕೆ ಸಚಿವ ಸ್ಥಾನ ಕೊಡಬೇಕೆಂದು ಮನವರಿಕೆ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷಗಳಲ್ಲಿ ಮೇಲೆತ್ತುವವರು ಮತ್ತು ಕಾಲೆಳೆಯುವವರು ಹೆಚ್ಚಾಗಿದ್ದಾರೆ. ದೆಹಲಿಯಲ್ಲಿ ಹೆಸರು ಬರೆದು ಕಳುಹಿಸಿದರೆ, ಇಲ್ಲಿಗೆ ಬರುವಷ್ಟರಲ್ಲಿ ಆ ಹೆಸರನ್ನು ಹೊಡೆದಾಕಿರುತ್ತಾರೆ. ನಾನು ಐದು ಬಾರಿ ಶಾಸಕನಾಗಿದ್ದೇನೆ. ನನಗೂ ಅವಕಾಶ ಕೊಡುವಂತೆ ಮಾಡಿ ಬಂದಿದ್ದೇನೆ. ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸ ಇದೆ.

- ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ

8ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಶಾಸಕ ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಕಾಂಗ್ರೆಸ್ ಮುಖಂಡ ಬೆಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂಬಳಗೂಡು ಪಿಡಿಒ ಮನೆ ಮೇಲೆ ಲೋಕಾ ದಾಳಿ
ನಾಳೆ ನೀರಾವರಿ ಸಲಹಾ ಸಮಿತಿ ಸಭೆ: ಶಾಸಕ ಪಿ.ರವಿಕುಮಾರ್