ಕನ್ನಡಪ್ರಭ ವಾರ್ತೆ ಕಿಕ್ಕೇರಿ
ನಮ್ಮೂರಿನ ಕವಿ ಕಿಕ್ಕೇರಿ ಕೆ.ಎಸ್.ನರಸಿಂಹಸ್ವಾಮಿ ಅವರು ಕಾವ್ಯದ ಮಲ್ಲಿಗೆಯ ಪರಿಮಳವನ್ನು ವಿದೇಶಗಳಲ್ಲಿ ಪಸರಿಸುವ, ಪರಿಚಯಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.ಕೆ.ಎಸ್.ನರಸಿಂಹಸ್ವಾಮಿ ಬಳಗದವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕನ್ನಡರಾಜ್ಯೋತ್ಸವಕ್ಕೆ ತೆರಳುತ್ತಿರುವ ತಮಗೆ ಕಿಕ್ಕೇರಿ ಅಭಿಮಾನಿ ಬಳಗದವರು ನೀಡಿದ ಗೌರವ ಸಮರ್ಪಣೆ, ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.
ಆಸ್ಟ್ರೇಲಿಯಾದ ಪರ್ತ್‌ನ ಕೆನಡಿ ಬ್ಯಾಪ್ಟಿಸ್ಟ್ ಆಡಿಟೋರಿಯಂನಲ್ಲಿ ನವೆಂಬರ್ 8 ರಂದು ಕನ್ನಡ ರಾಜ್ಯೋತ್ಸವ ಹಾಗೂ ನವೆಂಬರ್ 9 ರಂದು ಸೆಂಚುರಿ ಪಾರ್ಕ್ ಕಮ್ಯುನಿಟಿ ಸೆಂಟರ್‌ನಲ್ಲಿ ವಿಶೇಷ ಉಪನ್ಯಾಸ, ಸಂವಾದ, ಗಾಯನ, ಕವಿಗೋಷ್ಠಿ ಕಾರ್ಯಕ್ರಮವಿದೆ. ಕಾರ್ಯಕ್ರಮಕ್ಕೆ ಸುಗಮ ಸಂಗೀತಾ ಗಾಯಕನಾಗಿ ತಾನು ಹಾಗೂ ಕಿಕ್ಕೇರಿ ಲಿಖಿತ್ ಕೃಷ್ಣ ತೆರಳುತ್ತಿದ್ದೇವೆ. ಅಸ್ಟ್ರೇಲಿಯಾದಲ್ಲಿ ಭಾಗವಹಿಸಿ ಕವಿ ಪರಿಚಯ ಮತ್ತಷ್ಟು ಮಾಡಲಾಗುವುದು. ಅಸ್ಟ್ರೇಲಿಯಾದಲ್ಲಿ ಸಾಕಷ್ಟು ಕನ್ನಡಿಗರು ನೆಲೆಸಿದ್ದು ವರ್ಷಕ್ಕೊಮ್ಮೆ ಕನ್ನಡದ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿದ್ದಾರೆ ಎಂದರು.ವಿದೇಶಕ್ಕೆ ತೆರಳುತ್ತಿರುವ ತನಗೆ ತವರೂರಿನಿಂದ ನೀಡುತ್ತಿರುವ ಗೌರವ, ಬೀಳ್ಕೊಡುಗೆಗೆ ಅಭಾರಿಯಾಗಿರುವೆ. ಈ ಕಾರ್ಯಕ್ರಮದಲ್ಲಿ ಕನ್ನಡದ ಕಂಪಿನ ಜೊತೆ ಕಿಕ್ಕೇರಿಯ ಮೈಸೂರಿನ ಮಲ್ಲಿಗೆ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಕಾವ್ಯಗಳನ್ನು ಹಾಡಿ, ಇಲ್ಲಿನ ಕನ್ನಡಿಗರೊಂದಿಗೆ ಹಾಡಿಸಲಾಗುವುದು ಎಂದರು.
ಕೆಎಸ್‌ನ ಕಾವ್ಯ, ಗೀತೆಗಳಿಗೆ ಮನಸೋಲದವರು ಇಲ್ಲ. ಕನ್ನಡ ಶಾಲೆಯ ಮಕ್ಕಳಿಗೆ ಹಾಗೂ ಸಂಗೀತ ಪ್ರಿಯರಿಗೆ ಕನ್ನಡ ಗೀತೆಗಳ ತರಬೇತಿ ನೀಡಲಾಗುವುದು. ಕನ್ನಡ ಶಾಲೆ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ವಿತರಿಸಿ ಕನ್ನಡ ಭಾಷೆ, ಪುಸ್ತಕ ಓದುವ ಅಭಿರುಚಿ ಮೂಡಿಸಲಾಗುವುದು ಎಂದರು.ಈ ವೇಳೆ ಶಾಸಕ ಎಚ್.ಟಿ.ಮಂಜು, ತಾಪಂ ಮಾಜಿ ಅಧ್ಯಕ್ಷ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್ ಭಾಗವಹಿಸಿದ್ದರು.