ನಿನ್ನ ಬಿಟ್ಟು ಹೋಗ್ತೇವೆ ಅಂದವ್ರು ಹೋಗೇ ಬಿಟ್ರು...

KannadaprabhaNewsNetwork |  
Published : Jun 29, 2024, 12:37 AM IST
28ಎಚ್‌ವಿಆರ್‌2 | Kannada Prabha

ಸಾರಾಂಶ

ಪಪ್ಪಾ, ನಿನ್ನ ಬಿಟ್ಟು ನಾವು ಮೂವರೂ ಟೂರ್‌ ಹೋಗಿ ಬರ್ತೇವೆ ಎಂದು ಹೇಳಿದ್ದ ಮಕ್ಕಳು ನನ್ನೊಬ್ಬನನ್ನೇ ಬಿಟ್ಟು ಹೋಗಿಬಿಟ್ರು... ನಿಮ್ಮ ಬಿಟ್ಟು ನಾನು ಹೇಗಿರಲಿ, ನಾನೂ ನಿಮ್ಮೊಂದಿಗೆ ಬರಬೇಕಿತ್ತು

ಹಾವೇರಿ: ಪಪ್ಪಾ, ನಿನ್ನ ಬಿಟ್ಟು ನಾವು ಮೂವರೂ ಟೂರ್‌ ಹೋಗಿ ಬರ್ತೇವೆ ಎಂದು ಹೇಳಿದ್ದ ಮಕ್ಕಳು ನನ್ನೊಬ್ಬನನ್ನೇ ಬಿಟ್ಟು ಹೋಗಿಬಿಟ್ರು... ನಿಮ್ಮ ಬಿಟ್ಟು ನಾನು ಹೇಗಿರಲಿ, ನಾನೂ ನಿಮ್ಮೊಂದಿಗೆ ಬರಬೇಕಿತ್ತು....

ಗುಂಡೇನಹಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿ ಅಂಜಲಿ, 5 ವರ್ಷದ ಆರ್ಯ, 3 ವರ್ಷದ ನಂದನ್‌ ಅವರನ್ನು ನೆನೆದು ಜಿಲ್ಲಾಸ್ಪತ್ರೆ ಶವಾಗಾರದ ಎದುರು ಮಕ್ಕಳ ತಂದೆ ರಘುರಾವ ಪವಾರ ಅವರು ಎದೆ ಬಡಿದುಕೊಂಡು ಕಣ್ಣೀರಿಡುತ್ತ ಹೇಳುತ್ತಿದ್ದ ಮಾತುಗಳು ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದ್ದವು. ಪತ್ನಿ, ಇಬ್ಬರು ಮಕ್ಕಳನ್ನು ನೆನೆದು ಅತ್ತು ಹಣ್ಣಾದರು.

ನಾನು ಬೈಕ್‌ ಚಾಲು ಮಾಡಿದರೆ ಇಬ್ಬರೂ ಮಕ್ಕಳು ಓಡೋಡಿ ಬರುತ್ತಿದ್ದರು. ಒಂದು ಸುತ್ತು ಬೈಕ್‌ನಲ್ಲಿ ಸುತ್ತಾಡಿಸಿಯೇ ಕೆಲಸಕ್ಕೆ ಹೋಗುತ್ತಿದ್ದೆ. ಇನ್ನು ಮೇಲೆ ನಾನು ಹೇಗೆ ಬದುಕಲಿ, ಮಕ್ಕಳಿಲ್ಲದ ಮನೆಗೆ ಹೇಗೆ ಹೋಗಲಿ ಎಂದು ರೋಧಿಸುತ್ತಿದ್ದ ರಘುರಾವ್ ಅವರನ್ನು ನೋಡಿ ಅವರನ್ನು ಸಂತೈಸುತ್ತಿದ್ದ ಸಂಬಂಧಿಕರೂ ಕಣ್ಣೀರಾದರು.

ನನ್ನ ಪತ್ನಿಯ ತವರು ಕಡೆಯವರು ಕರೆದರು ಅಂತ ಇಬ್ಬರು ಮಕ್ಕಳೊಂದಿಗೆ ಪತ್ನಿ ದೇವಸ್ಥಾನಕ್ಕೆ ಹೋಗಿದ್ದಳು. ಈ ಸಲ ಬೇಡ ಅಂತ ಹೇಳಿದ್ದೆ. ಆದರೂ ಹೋಗಿದ್ದರು. ಅದೇನು ಗ್ರಹಚಾರವೋ ಎಂದು ಹೇಳುತ್ತ ಮರುಗಿದರು.

ಇನ್ನು ದುರ್ಘಟನೆಯಲ್ಲಿ ಬದುಕುಳಿದ ಅರ್ಪಿತಾಳದ್ದು ಇನ್ನೊಂದು ಕತೆ. ಟಿಟಿ ವಾಹನದ ಚಾಲಕನೇ ಈಕೆಯ ಅಣ್ಣ. ಅಣ್ಣ, ಅಪ್ಪ, ಅಮ್ಮ ಮೂವರೂ ಅಪಘಾತದಲ್ಲಿ ಮೃತಪಟ್ಟಿದ್ದು, ಈಕೆ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾಳೆ. ಎರಡು ಕಡೆಯ ಸೀಟಿನ ಕೆಳಭಾಗದಲ್ಲಿ ಮಲಗಿದ್ದ ಈಕೆ ಮೃತದೇಹಗಳ ಮಧ್ಯೆ ಸಿಲುಕಿಕೊಂಡಿದ್ದಳು. ಅಗ್ನಿಶಾಮಕ ಸಿಬ್ಬಂದಿ ಬಂದು ಈಕೆಯನ್ನು ಹೊರಕ್ಕೆ ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ. ಬುದ್ಧಿಮಾಂದ್ಯಳಾಗಿರುವ ಅರ್ಪಿತಾ, ಕಣ್ಣೆದುರೇ ನಡೆದ ಘಟನೆ ವಿವರಿಸುತ್ತಿದ್ದರೆ ಅಕ್ಕಪಕ್ಕದ ಬೆಡ್‌ನಲ್ಲಿದ್ದವರೂ ಕಣ್ಣೀರಾದರು. ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಇಡೀ ದಿನ ಮೃತರ ಸಂಬಂಧಿಕರ ರೋದನವೇ ದುರಂತದ ಭೀಕರತೆಯನ್ನು ಕಟ್ಟಿಕೊಟ್ಟಿತ್ತು.

ಅಂಧರ ಫುಟ್‌ಬಾಲ್‌ ತಂಡದ ಮಾನಸಾ ಸಾವು: ಭಾರತ ಅಂಧರ ಫುಟ್ ಬಾಲ್ ತಂಡದ ಕ್ಯಾಪ್ಟನ್ ಆಗಿದ್ದ ಯುವತಿ ಮಾನಸಾ ಅಪಘಾತದಲ್ಲಿ ಮೃತಪಟ್ಟವರಲ್ಲಿ ಒಬ್ಬರಾಗಿದ್ದು, ದುರ್ಘಟನೆಯ ಸುದ್ದಿ ಕೇಳಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಂಧತ್ವಕ್ಕೆ ಸೆಡ್ಡು ಹೊಡೆದು ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದ ಮಾನಸ, ಭಾರತ ತಂಡದ ಅಂಧರ ಫುಟ್ ಬಾಲ್ ತಂಡದ ಕ್ಯಾಪ್ಟನ್ ಆಗಿದ್ದರು. ಐಎಎಸ್ ಕನಸು ಕಂಡಿದ್ದ ಮಾನಸಾ ಬೆಂಗಳೂರಿನಲ್ಲಿ ಓದುತ್ತಿದ್ದರು. ದೇವಸ್ಥಾನಕ್ಕೆ ತೆರಳಲು ಭಾನುವಾರ ಗ್ರಾಮಕ್ಕೆ ಆಗಮಿಸಿದ್ದಳು. ಕುಟುಂಬಸ್ಥರೊಂದಿಗೆ ಮಹಾರಾಷ್ಟ್ರ, ಸವದತ್ತಿಯ ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುತ್ತಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೃತದೇಹ ಹೊರತೆಗೆಯಲು ಹರಸಾಹಸ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿ ನುಜ್ಜುಗುಜ್ಜಾದ ಸ್ಥಿತಿಯಲ್ಲಿದ್ದ ಟಿಟಿ ವಾಹನದಲ್ಲಿ ಅಪ್ಪಚ್ಚಿಯಾಗಿದ್ದ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಹೊರತೆಗೆದಿದ್ದಾರೆ.

ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿಗೆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಫೈರಿಂಗ್‌ ಕಟರ್‌ ಮಶಿನ್‌ ಬಳಸಿ ಬಾಗಿಲು ಕಟ್‌ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿಯೊಬ್ಬರ ಕಣ್ಣಿಗೆ ಗಾಯವಾದರೂ ಲೆಕ್ಕಿಸದೇ ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 1 ಗಂಟೆ 15 ನಿಮಿಷ ನಡೆದ ಕಾರ್ಯಾಚರಣೆಯಲ್ಲಿ ಎಲ್ಲ ಮೃತದೇಹಗಳನ್ನು ಹೊರತೆಗೆದಿದ್ದಾರೆ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ