ಮಾಗಡಿ: ವೈ.ಜಿ.ಗುಡ್ಡ ಏತ ನೀರಾವರಿ ಯೋಜನೆ ಆರು ತಿಂಗಳಲ್ಲಿ ಮುಕ್ತಾಯಗೊಂಡು ಉದ್ಘಾಟನೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಭರವಸೆ ನೀಡಿದರು.
ರೈತಪರ ಎನ್ ಡಿಎ ಮೈತ್ರಿಕೂಟ ಇಲ್ಲ:
ಬಿಜೆಪಿ ಮತ್ತು ಜೆಡಿಎಸ್ ಎಂದಿಗೂ ರೈತರ ಪರವಾಗಿಲ್ಲ, ಕಾಂಗ್ರೆಸ್ ಮಾತ್ರ ಅನ್ನದಾತರ ಹಿತ ಕಾಯುತ್ತಿದೆ. ಮುಂಜಾನೆ 4 ಗಂಟೆಗೆದ್ದು ಕಷ್ಟಪಡುವ ಹೈನುಗಾರರಿಗೆ ಆರ್ಥಿಕ ಬಲ ತುಂಬಲು 8 ರು. ದರ ಹೆಚ್ಚಳ ಮಾಡಲಾಗಿದೆ. ಇದರಲ್ಲಿ 7 ರೂಪಾಯಿ ನೇರವಾಗಿ ರೈತರ ಖಾತೆಗೆ ಜಮೆಯಾಗಲಿದ್ದು, 1 ರು. ಆಡಳಿತಾತ್ಮಕ ವೆಚ್ಚಕ್ಕೆ ಹೋಗಲಿದೆ. ಡೀಸೆಲ್, ಪೆಟ್ರೋಲ್, ಜಿಎಸ್‌ಟಿ ಹಾಗೂ ಪಶು ಆಹಾರದ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಬಿಜೆಪಿ ಜೆಡಿಎಸ್ ಏಕೆ ವಿರೋಧ ಮಾಡಲಿಲ್ಲ. ಈಗ ಹಾಲಿನ ದರ ಹೆಚ್ಚಳವಾಗಿದೆ ಎಂದು ವಿರೋಧ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು,ಹೈನುಗಾರರನ್ನು ರಕ್ಷಿಸಲು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೋರಾಟ ಮತ್ತು ಸರ್ಕಾರದ ನಿರ್ಧಾರದಿಂದ ಹಾಲಿನ ದರ ಹೆಚ್ಚಳವಾಗಿದೆ. ಒಬ್ಬರಿಗೆ ಅನುಕೂಲವಾದರೆ ಮತ್ತೊಬ್ಬರಿಗೆ ಅನನುಕೂಲವಾಗುತ್ತದೆ ಎಂದು ಗ್ರಾಹಕರಿಗೆ ಹಾಲಿನ ದರ ಹೆಚಚ್ಚಳದ ಬಗ್ಗೆ ಸಚಿವರು ಸಮರ್ಥನೆ ಮಾಡಿಕೊಂಡರು.
ನ.23ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾಲೂಕಿನ ಕುದೂರಿಗೆ ಭೇಟಿ ನೀಡಲಿದ್ದು, ಕೆಎಸ್‌ಆರ್‌ಟಿಸಿ ಬಸ್ ಡಿಪೋ, ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ಹಾಗೂ ನೂತನ ಕೆಪಿಎಸ್ ಶಾಲೆ, ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಜತೆಗೆ 300 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆಯಡಿ ತಿಪ್ಪಸಂದ್ರ-ಕುದೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ 72 ಕೋಟಿ ವೆಚ್ಚದ ಸುಗ್ಗನಹಳ್ಳಿ-ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್ ರಸ್ತೆ ಕಾಮಗಾರಿ, ಸಂಸ್ಕೃತ ವಿಶ್ವವಿದ್ಯಾನಿಲಯ ಉದ್ಘಾಟನೆ ಹಾಗೂ ಕೆಂಪೇಗೌಡ ಸಮಾಧಿ ಸ್ಥಳ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಬಾಲಕೃಷ್ಣ ಮಾಹಿತಿ ನೀಡಿದರು.
ಇದೇ ವೇಳೆ ತಹಸೀಲ್ದಾರ್ ರಂಜಿತ್, ಕಾವೇರಿ ನೀರಾವರಿ ನಿಗಮ ಎಇಇ ಹುಮೀರ ಹಷ್ಮಿ, ಆರ್‌ಎಫ್‌ಒ ನೇತ್ರಾವತಿ, ಟಿಎಚ್ಒ ಡಾ.ನಾಗನಾಥ್, ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಜುಟ್ಟನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಜುಟ್ಟನಹಳ್ಳಿ ಜಯರಾಮ್, ಚಕ್ರಬಾವಿ ದೇವರಾಜ್, ನಾರಾಯಣಸ್ವಾಮಿ, ಹಲಸಬೆಲೆ ಮುಖಂಡರಾದ ಮಹದೇವಯ್ಯ, ಬಸವರಾಜು, ಚಂದ್ರು ಇತರರು ಹಾಜರಿದ್ದರು.
ಮಾಗಡಿ ತಾಲೂಕಿನ ಹಲಸಬೆಲೆ ಗ್ರಾಮದಲ್ಲಿ ನೂತನ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ನಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ತಹಸೀಲ್ದಾರ್ ರಂಜಿತ್, ಕಾವೇರಿ ನೀರಾವರಿ ನಿಗಮ ಎಇಇ ಹುಮೀರ ಹಷ್ಮಿ, ಆರ್‌ಎಫ್‌ಒ ನೇತ್ರಾವತಿ ಇತರರಿದ್ದರು.