ಬಲವಂತದಿಂದ ಒಕ್ಕಲೆಬ್ಬಿಸುವ ಕೆಲಸ ಎಂದಿಗೂ ಮಾಡುವುದಿಲ್ಲ

KannadaprabhaNewsNetwork |  
Published : May 18, 2025, 01:09 AM IST
ಖಾನಾಪುರ ತಾಲೂಕು ಹೆಮ್ಮಡಗಾ ಬಳಿಯ ಭೀಮಗಡ ಪ್ರಕೃತಿ ಶಿಬಿರದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಭೀಮಗಡ ವನ್ಯಜೀವಿ ವಲಯದ ತಳೆವಾಡಿ ಗ್ರಾಮದ ಜನರ ಸ್ವ-ಇಚ್ಛಾ ಪುನರ್ವಸತಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾದ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು. | Kannada Prabha

ಸಾರಾಂಶ

ಅನಾದಿಕಾಲದಿಂದ ಅರಣ್ಯದಲ್ಲಿ ಬದುಕು ಕಟ್ಟಿಕೊಂಡ ಜನರನ್ನು ಸರ್ಕಾರ ಬಲವಂತದಿಂದ ಒಕ್ಕಲೆಬ್ಬಿಸುವ ಕೆಲಸ ಎಂದಿಗೂ ಮಾಡುವುದಿಲ್ಲ. ಅರಣ್ಯವಾಸಿಗಳು ಸ್ವಯಂಪ್ರೇರಣೆಯಿಂದ ಬಯಸಿದರೇ ಮಾತ್ರ ಸ್ಥಳಾಂತರಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ. ಈ ವಿಷಯವನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಅನಾದಿಕಾಲದಿಂದ ಅರಣ್ಯದಲ್ಲಿ ಬದುಕು ಕಟ್ಟಿಕೊಂಡ ಜನರನ್ನು ಸರ್ಕಾರ ಬಲವಂತದಿಂದ ಒಕ್ಕಲೆಬ್ಬಿಸುವ ಕೆಲಸ ಎಂದಿಗೂ ಮಾಡುವುದಿಲ್ಲ. ಅರಣ್ಯವಾಸಿಗಳು ಸ್ವಯಂಪ್ರೇರಣೆಯಿಂದ ಬಯಸಿದರೇ ಮಾತ್ರ ಸ್ಥಳಾಂತರಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ. ಈ ವಿಷಯವನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ತಾಲೂಕಿನ ಹೆಮ್ಮಡಗಾ ಬಳಿಯ ಭೀಮಗಡ ಪ್ರಕೃತಿ ಶಿಬಿರದ ಸಭಾಗೃಹದಲ್ಲಿ ಶನಿವಾರ ಅರಣ್ಯ ಇಲಾಖೆ ಏರ್ಪಡಿಸಿದ್ದ ಭೀಮಗಡ ವನ್ಯಜೀವಿ ವಲಯದ ತಳೆವಾಡಿ ಗ್ರಾಮದ ಜನರ ಸ್ವ-ಇಚ್ಛಾ ಪುನರ್ವಸತಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾದ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಭೀಮಗಡ ವನ್ಯಧಾಮದ ತಮ್ಮೂರಿನಿಂದ ಸ್ವಯಂ ಪ್ರೇರಿತವಾಗಿ ಕಾಡಿನಿಂದ ಹೊರಗೆ ಬರಲು ಇಚ್ಛಿಸಿರುವ ತಳೆವಾಡಿ ಗ್ರಾಮದ 27 ಕುಟುಂಬಗಳನ್ನು ಮುಖ್ಯವಾಹಿನಿಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಿದೆ. ತಳೆವಾಡಿಯ ಜನರು ಸ್ಥಳಾಂತರಕ್ಕೆ ಬಯಸಿದ್ದರಿಂದ ಕಳೆದ 1 ವರ್ಷದ ಅವಧಿಯಲ್ಲಿ ಗ್ರಾಮದ ಜನರನ್ನು ಅರಣ್ಯದಿಂದ ಹೊರತರಲು ಅಗತ್ಯವಿರುವ ಅನುದಾನ ಕ್ರೋಢೀಕರಿಸಿ ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ತಾವು ಸಚಿವ ಜಾರಕಿಹೊಳಿ, ಶಾಸಕ ಹಲಗೇಕರ ಹಾಗೂ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ನೆರವೇರಿಸಿದ್ದು, ಈ ಕಾರ್ಯ ಅರಣ್ಯ ಇಲಾಖೆಯಲ್ಲಿ ಇತಿಹಾಸ ಸೃಷ್ಟಿಸಿದೆ ಎಂದು ಬಣ್ಣಿಸಿದರು.ಕೇಂದ್ರದ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆಯಿಂದ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದ (ಕಾಂಪಾ) ₹5 ಕೋಟಿ ಅನುದಾನದಲ್ಲಿ ತಳೆವಾಡಿ ಜನರ ಸ್ಥಳಾಂತರ ಕಾರ್ಯ ಈಡೇರಿದೆ. ಇದೇ ರೀತಿ ಭೀಮಗಡ ವನ್ಯಧಾಮದ ಇನ್ನುಳಿದ ಗ್ರಾಮಗಳ ಪುನರ್ವಸತಿಗೆ ಜನರು ಸ್ವ-ಇಚ್ಛೆಯಿಂದ ಮುಂದೆ ಬಂದಲ್ಲಿ ಅವರಿಗೂ ಪ್ರತಿ ಕುಟುಂಬಕ್ಕೆ ತಲಾ ₹15 ಲಕ್ಷ ಆರ್ಥಿಕ ಸಹಾಯ ಒದಗಿಸಲು ಅರಣ್ಯ ಇಲಾಖೆ ಬದ್ಧವಿದ್ದು, ಇದಕ್ಕಾಗಿ ಕಾಂಪಾ ಮೂಲಕ ₹500 ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದಿಂದಲೂ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ 20 ವರ್ಷಗಳಿಂದ ಭೀಮಗಡ ವನ್ಯಧಾಮದ ಜನರಿಂದ ಸ್ಥಳಾಂತರದ ಬೇಡಿಕೆ ಇತ್ತು. ಅರಣ್ಯ ಸಚಿವರು ಮತ್ತು ಸ್ಥಳೀಯ ಶಾಸಕರು ಬಹಳಷ್ಟು ಮುತುವರ್ಜಿ ವಹಿಸಿ ಕಾಡಿನ ಜನರ ಕೂಲು ಆಲಿಸಿದ್ದಾರೆ. ಭೀಮಗಡ ವನ್ಯಧಾಮದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶವಿದ್ದು, ಈ ಭಾಗದಲ್ಲಿ ನಾಗರಹೊಳೆ, ಬಂಡೀಪುರದ ಮಾದರಿಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಬೇಕು ಎಂದರು.ಶಾಸಕ ವಿಠ್ಠಲ ಹಲಗೇಕ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಇತಿಹಾಸದಲ್ಲಿ ಇದೊಂದು ಮಹತ್ವದ ಕಾರ್ಯಕ್ರಮ. ಸರ್ಕಾರ ಕಾನನ ವಾಸಿಗಳ ಕೂಗು ಆಲಿಸಿ ಅವರ ಬೆಂಬಲಕ್ಕೆ ನಿಂತಿದ್ದು, ಕಾನನದಿಂದ ಹೊರಹೋಗಲು ಬಯಸುವವರಿಗೆ ಆರ್ಥಿಕ ಸಹಾಯದ ಜೊತೆಗೆ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂದು ಸಚಿವರನ್ನು ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ಮುಖ್ಯವನ್ಯಜೀವಿ ಪರಿಪಾಲಕ ಸುಭಾಷ್ ಮಾಲ್ಖಡೆ, ಕಾಂಪಾ ಸಿಇಒ ರಾಧಾ ದೇವಿ, ಡಿಸಿ ಮೊಹಮ್ಮದ್ ರೋಶನ್, ಎಸ್ಪಿ ಭೀಮಾಶಂಕರ ಗುಳೇದ, ಗ್ಯಾರಂಟಿ ಕಮಿಟಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ, ಶಹರ ಅಧ್ಯಕ್ಷ ಮಹಾಂತೇಶ ರಾಹೂತ, ಮುಖಂಡರಾದ ಆರ್.ಡಿ.ಹಂಜಿ, ಇರ್ಫಾನ್ ತಾಳಿಕೋಟಿ, ಮಲ್ಲಪ್ಪ ಮಾರಿಹಾಳ, ರಾಜಕುಮಾರ ಟೋಪಣ್ಣವರ, ನಾರಾಯಣ ಕಾಟಗಾಳಕರ ಸೇರಿದಂತೆ ಭೀಮಗಡ ವನ್ಯಧಾಮ ವ್ಯಾಪ್ತಿಯ ನಾಗರಿಕರು, ಪರಿಸರವಾದಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳು, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಸಿಸಿಎಫ್ ಮಂಜುನಾಥ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಎಫ್ ಮರಿಯ ಕ್ರಿಸ್ತುರಾಜಾ ಸ್ವಾಗತಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು. ಭೀಮಗಡ ಆರ್‌ಎಫ್‌ಒ ಸೈಯದಸಾಬ್ ನದಾಫ ವಂದಿಸಿದರು.

ತಳೆವಾಡಿಯ ಪ್ರತಿ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ ಮಂಜೂರಾಗಿದ್ದು, ಮೊದಲ ಕಂತಿನಲ್ಲಿ ತಲಾ ₹10 ಲಕ್ಷದಂತೆ ಈ ಕುಟುಂಬಗಳಿಗೆ ಚೆಕ್ ವಿತರಿಸಲಾಗಿದೆ. ಮನೆ ಕಟ್ಟಿಕೊಳ್ಳಲು ನಿವೇಶನ ಮತ್ತು ಮನೆ ನಿರ್ಮಾಣಕ್ಕೆ ಅನುದಾನ ನೀಡಬೇಕು, ಜೊತೆಗೆ ಈ ಜನರಿಗೆ ಯೋಜನಾ ನಿರಾಶ್ರಿತರು ಎಂದು ಪರಿಗಣಿಸಬೇಕು ಎಂಬ ಬೇಡಿಕೆಯಿದ್ದು, ಇದನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವ ಪ್ರಯತ್ನ ಮಾಡಲಾಗುತ್ತದೆ.

-ಈಶ್ವರ ಖಂಡ್ರೆ,
ಅರಣ್ಯ ಸಚಿವರು.

ಖಾನಾಪುರ ತಾಲೂಕಿನ ಇತಿಹಾಸದಲ್ಲಿ ಇದೊಂದು ಮಹತ್ವದ ಕಾರ್ಯಕ್ರಮ. ಸರ್ಕಾರ ಕಾನನ ವಾಸಿಗಳ ಕೂಗು ಆಲಿಸಿ ಅವರ ಬೆಂಬಲಕ್ಕೆ ನಿಂತಿದ್ದು, ಕಾನನದಿಂದ ಹೊರಹೋಗಲು ಬಯಸುವವರಿಗೆ ಆರ್ಥಿಕ ಸಹಾಯದ ಜೊತೆಗೆ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು.

-ವಿಠ್ಠಲ ಹಲಗೇಕ, ಶಾಸಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ