ಯಾರ ಬೆದರಿಕೆಗಳಿಗೂ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ: ಕೆ.ಎಂ.ಉದಯ್

KannadaprabhaNewsNetwork |  
Published : Jan 11, 2026, 02:00 AM IST
10ಕೆಎಂಎನ್ ಡಿ22 | Kannada Prabha

ಸಾರಾಂಶ

ನಾಲೆಗಳು, ಕಾಲುವೆಗಳು ಆಧುನೀಕರಣಗೊಳ್ಳದೆ ಈ ಹಿಂದೆ ಕೆ.ಆರ್.ಎಸ್ ಜಲಾಶಯದಿಂದ ನೀರು ವಿಳಂಬವಾಗಿ ಬರುತ್ತಿತ್ತು. ಇದರಿಂದ ರೈತರಿಗೆ ನಿಗದಿತ ವೇಳೆಯಲ್ಲಿ ನೀರು ಸಿಗದೆ ಬೆಳೆಗಳು ಒಣಗುತ್ತಿದ್ದವು. ಈಗ ನಾಲೆಗಳ ಅಭಿವೃದ್ಧಿಯಿಂದ ಸರಾಗವಾಗಿ ಒಂದೇ ದಿನದಲ್ಲಿ ಜಮೀನುಗಳಿಗೆ ತಲುಪಿ ಬೆಳೆಗಳಿಗೆ ನೀರು ಸಿಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಳೆದ ಎರಡೂವರೆ ವರ್ಷಗಳಿಂದ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಕಂಡು ವಿರೋಧಿಗಳು ನನ್ನ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿದ್ದು, ಯಾರ ಬೆದರಿಕೆಗಳಿಗೂ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಎಚ್ಚರಿಸಿದರು.

ಸಮೀಪದ ಕಾಡುಕೊತ್ತನಹಳ್ಳಿ ಶ್ರೀಮಹದೇಶ್ವರ ದೇವಾಲಯದ ಸಮೀಪ ಕಾವೇರಿ ನೀರಾವರಿ ನಿಗಮದಿಂದ ಸುಮಾರು 40 ಕೋಟಿ ರು. ವೆಚ್ಚದಲ್ಲಿ ಹೆಬ್ಬಕವಾಡಿ ನಾಲಾ ಆಧುನೀಕರಣ ಕಾಮಗಾರಿಗೆ ಭೂಮಿಪೂಜೆ ನೆರೆವೆರಿಸಿ ಮಾತನಾಡಿದರು.

ಗೆಜ್ಜಲಗೆರೆ ಸೇರಿದಂತೆ ಮದ್ದೂರಿನ ಸುತ್ತಾಮುತ್ತ ನಾಲ್ಕು ಗ್ರಾಪಂಗಳನ್ನು ನಗರಸಭೆಗೆ ಸೇರ್ಪಡೆ ಮಾಡಿರುವುದು ನನ್ನ ಸ್ವಾರ್ಥಕ್ಕಲ್ಲ. ಗ್ರಾಮಗಳ ಅಭಿವೃದ್ಧಿಗಾಗಿ. ಜನರ ಕಲ್ಯಾಣಕ್ಕಾಗಿ ಸರ್ಕಾರ ಮಟ್ಟದಿಂದ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಿಸಿದ್ದೇನೆ. ಇದರಿಂದ ನನಗೆ ವೈಯಕ್ತಿಕ ಉಪಯೋಗವಿಲ್ಲದ್ದರೂ ಕೆಲವರು ರಾಜಕಾರಣ ಮಾಡುತ್ತಾ ನನ್ನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರದಿಂದ 1500 ಕೋಟಿಗೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದ್ದೇನೆ. ನಾನು ಶಾಸಕನಾಗಿ ಆಯ್ಕೆಯಾಗಿ ಗ್ರಾಮಗಳಿಗೆ ಭೇಟಿ ನೀಡಿದಾಗ ರೈತರು ಹಾಗೂ ಜನತೆ ನನಗೆ ರಸ್ತೆ, ಚರಂಡಿ ಹಾಗೂ ಕಾಲುವೆಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದ್ದರು. ರೈತರ ಮನವಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ ಎಂದರು.

ನಾಲೆಗಳು, ಕಾಲುವೆಗಳು ಆಧುನೀಕರಣಗೊಳ್ಳದೆ ಈ ಹಿಂದೆ ಕೆ.ಆರ್.ಎಸ್ ಜಲಾಶಯದಿಂದ ನೀರು ವಿಳಂಬವಾಗಿ ಬರುತ್ತಿತ್ತು. ಇದರಿಂದ ರೈತರಿಗೆ ನಿಗದಿತ ವೇಳೆಯಲ್ಲಿ ನೀರು ಸಿಗದೆ ಬೆಳೆಗಳು ಒಣಗುತ್ತಿದ್ದವು. ಈಗ ನಾಲೆಗಳ ಅಭಿವೃದ್ಧಿಯಿಂದ ಸರಾಗವಾಗಿ ಒಂದೇ ದಿನದಲ್ಲಿ ಜಮೀನುಗಳಿಗೆ ತಲುಪಿ ಬೆಳೆಗಳಿಗೆ ನೀರು ಸಿಗುತ್ತಿದೆ ಎಂದರು.

ಹೆಬ್ಬಕವಾಡಿ ನಾಲೆಯನ್ನು ಸುಮಾರು 40 ಕೋಟಿ ರು. ವೆಚ್ಚದಲ್ಲಿ ಸುಮಾರು 30 ರಿಂದ 40 ಗ್ರಾಮಗಳ ರೈತರಿಗೆ ಅನುಕೂಲವಾಗಲು ಕಾಮಗಾರಿಗೆ ಚಾಲನೆ ನೀಡಿದ್ದೇವೆ. ತಾಲೂಕಿನ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಮಟ್ಟದಲ್ಲಿ ಅನುಮೋದನೆ ಸಲ್ಲಿಸಿದ್ದು, ಶೀಘ್ರ ಹಸಿರು ನಿಶಾನೆ ದೊರಕುತ್ತದೆ. ಮಂಡ್ಯ ಜಿಲ್ಲೆಯ ವಿಶೇಷವಾಗಿ ಮದ್ದೂರು ತಾಲೂಕಿಗೆ ನೀರಾವರಿ ಯೋಜನೆಗಳಿಗೆ ಅತಿಹೆಚ್ಚು ಅನುದಾನ ನೀಡಿದ ಕೀರ್ತಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು ಮಾತನಾಡಿ, ಕಾಡುಕೊತ್ತನಹಳ್ಳಿಗೆ 2ಕೋಟಿಗೂ ಹೆಚ್ಚಿನ ಅನುದಾನವನ್ನು ಒಂದೇ ಗ್ರಾಮಕ್ಕೆ ನೀಡಿದ್ದು, ಹೆಬ್ಬಕವಾಡಿ ನಾಲೆ ವ್ಯಾಪ್ತಿ ರೈತರು ಕಾಮಗಾರಿ ಹಾಗೂ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್ ಮಾತನಾಡಿ, ಶಾಸಕ ಕೆ.ಎಂ ಉದಯ್ ಅವರ ಕೆಲಸಗಳನ್ನು ಸಹಿಸದ ಕೆಲ ವಿರೋಧಿಗಳು ಪಿತೂರಿ ನಡೆಸುತ್ತಿದ್ದಾರೆ. ವಿರೋಧಿಗಳ ಮಾತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಕಾರ್ಯಪಾಲಕ ಅಭಿಯಂತರು ನಂಜುಂಡೇಗೌಡ, ಕಾಡುಕೊತ್ತನಹಳ್ಳಿ, ಗ್ರಾಪಂ ಅಧ್ಯಕ್ಷ ಜಯರಾಜು, ಮಾಜಿ ಅಧ್ಯಕ್ಷ ದಯಾನಂದ್, ತಾಪಂ ಮಾಜಿ ಸದಸ್ಯ ಕಪನಿಗೌಡ, ಕೆಪಿಸಿಸಿ ಸದಸ್ಯ ಎಸ್.ಚಿದಂಬರ ಮೂರ್ತಿ, ಮುಖಂಡರಾದ ಮಾದೇಗೌಡ,ಕೆ.ಸಿ. ಮಹದೇವು, ಎಸ್ಸಿ ಬ್ಲಾಕ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ , ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಯಡಗನಹಳ್ಳಿ ಕೆಂಚೆಗೌಡ , ಗ್ರಾಪಂ ಉಪಾಧ್ಯಕ್ಷ ಲೋಕೇಶ್, ಎಇಇ ರಾಜೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸೂಳೆಕೆರೆಯಲ್ಲಿ ಹೂಳೆತ್ತುವ ಅಧುನೀಕರಣಗೊಳಿಸುವ ಸಂಬಂಧ ಜ.18 ರಂದು ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗುವುದು. ಈಗಾಗಲೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 300 ಎಕರೆಯನ್ನು ಒತ್ತುವರಿ ತೆರವು ಮಾಡಿದ್ದು, ನಾಲಾ ವ್ಯಾಪ್ತಿಯ ಪಿಕಪ್ ನಾಲೆಗಳ ದುರಸ್ತಿ , ನಾಲೆಗಳ ಆಧುನಿಕರಣ ರಸ್ತೆಗಳು ಕಾಮಗಾರಿಗಳನ್ನು ನಡೆಸುವಾಗ ರೈತರು ಹಾಗೂ ಜನತೆ ಯಾವುದೇ ಅಡಚಣೆ ಮಾಡದೆ ಸಹಕಾರ ನೀಡಬೇಕು.

- ಕೆ.ಎಂ.ಉದಯ್ ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಠಾರೋತ್ಸವ: ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕಾರ ಸೇವೆ
ಹಿಪ್ಪು ನೇರಳೆ ಮತ್ತು ರೇಷ್ಮೆ ಲಾಭದಾಯಕ ಬೆಳೆಗಳು