ವಿಜಯಪುರ: ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘ ಹಾಗೂ ರಾಜ್ಯ ಮಹಾಸಭಾ ಪದಾಧಿಕಾರಿಗಳು ಪುರಸಭಾಧ್ಯಕ್ಷೆ ಎಸ್.ಭವ್ಯಾಮಹೇಶ್ ಅವರನ್ನು ಅಭಿನಂದಿಸಿದರು.
ಸಂಘದ ರಾಜ್ಯ ಮಹಸಭಾ ಅಧ್ಯಕ್ಷ ಸುಬ್ಬಣ್ಣ ಮಾತನಾಡಿ, ಆಡಳಿತ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಂತಹ ಜಾಣ್ಮೆ ಬೆಳೆಸಿಕೊಳ್ಳಬೇಕು. ಪರ ವಿರೋಧಗಳು ಚುನಾವಣೆಗಷ್ಟೇ ಸೀಮಿತವಾಗಿರಲಿ, ಪುರಸಭೆಯ ಒಳಗೆ ೨೩ ವಾರ್ಡುಗಳ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರದಲ್ಲಿರುವಾಗ ನೀವು ಮಾಡಿದ ಕೆಲಸಗಳಷ್ಟೇ ಶಾಶ್ವತ. ಸಮುದಾಯದ ಗೌರವವೂ ಹೆಚ್ಚಾಗುತ್ತದೆ. ಈಗ ಕೇವಲ ಪುರಸಭೆಗೆ ಮಾತ್ರವಲ್ಲದೆ ಸಮುದಾಯಕ್ಕೆ ಗೌರವ ತರುವಂತಹ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸಲಹೆ ನೀಡಿದರು.ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಮು.ಕೃಷ್ಣಮೂರ್ತಿ ಮಾತನಾಡಿ, ರಾಜ್ಯದಲ್ಲಿ ಉತ್ತಮ ಪುರಸಭೆಯೆಂದು 3 ಬಾರಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವಿಜಯಪುರ ಪುರಸಭೆಗೆ ಕಡಿಮೆ ಸಂಖ್ಯೆಯಲ್ಲಿ ಸದಸ್ಯರಿದ್ದರೂ ಪಕ್ಷಾತೀತವಾಗಿ ಭವ್ಯಾಮಹೇಶ್ ಅವರನ್ನು ಆಯ್ಕೆ ಮಾಡಿರುವುದು ಇಲ್ಲಿನ ಸದಸ್ಯರಲ್ಲಿನ ರಾಜಕೀಯ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ, ಸರ್ಕಾರಿ ಅನುದಾನ ಬಳಸಿಕೊಂಡು, ಸ್ಥಳೀಯವಾಗಿ ಆದಾಯ ಹೆಚ್ಚಿಸಿಕೊಂಡು, ಜನಪರ ಕೆಲಸ ಮಾಡಿದಾಗ, ಜನರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದರು.ಪುರಸಭಾಧ್ಯಕ್ಷೆ ಎಸ್.ಭವ್ಯಾಮಹೇಶ್ ಮಾತನಾಡಿ, ಒಬ್ಬ ಮಹಿಳೆ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ, ಪತಿ ಸೇರಿದಂತೆ ಕುಟುಂಬದ ಸದಸ್ಯರೆಲ್ಲರ ಸಹಕಾರ ಅಗತ್ಯ. ಆಗ ಮಾತ್ರ ಧೈರ್ಯವಾಗಿ ಹೊರ ಬಂದು ಕೆಲಸ ಮಾಡಲು ಸಾಧ್ಯ. ಇಂದು ನನಗೆ ಸಿಕ್ಕಿರುವ ಅಭಿನಂದನೆ ಅಭಿವೃದ್ಧಿಯನ್ನಾಗಿ ಮಾರ್ಪಡಿಸಿಕೊಂಡು ಪಟ್ಟಣದ ಜನತೆಯ ಆಶೋತ್ತರಗಳಿಗೆ ತಕ್ಕಂತೆ ೨೩ ಸದಸ್ಯರೂ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಎಂದರು.
ರಾಜ್ಯ ಉಪಾಧ್ಯಕ್ಷ ಶಾಮಣ್ಣ, ರಾಜ್ಯ ನಿರ್ದೇಶಕ ಕನಕರಾಜು, ಜಿಲ್ಲಾ ಘಟಕದ ಅಧ್ಯಕ್ಷ ಉದಯ್ ಕುಮಾರ್, ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ, ಕರಗ ಭವನ ಸಮಿತಿ ಅಧ್ಯಕ್ಷ ಪಾಪರಾಜು, ಕೆ.ಎಂ.ಮಹೇಶ್ ಮಧು, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುನಿಚಿನ್ನಪ್ಪ, ಪುರಸಭೆ ಮಾಜಿ ಸದಸ್ಯ ಜಿ.ಎಂ.ಚಂದ್ರು, ಮುಖಂಡರಾದ ಕೆ.ಎಂ.ನಾಗರಾಜ್, ವೆಂಕಟೇಶ್, ಮುನಿಕೃಷ್ಣಪ್ಪ, ಜಯರಾಮಣ್ಣ, ರಮೇಶ್, ಗುಂಡಣ್ಣ, ನಾರಾಯಣಪ್ಪ ಮುಂತಾದವರು ಹಾಜರಿದ್ದರು.