ಬೆಂಗಳೂರು : ಮೂರು ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ 'ಅಖಿಲ ಭಾರತೀಯ ಪ್ರತಿನಿಧಿ ಸಭಾ’

KannadaprabhaNewsNetwork | Updated : Mar 20 2025, 07:30 AM IST

ಸಾರಾಂಶ

 ಆರ್‌ಎಸ್‌ಎಸ್‌ ವಾರ್ಷಿಕ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ ಈ ಬಾರಿ ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ (21ರಿಂದ 23ರವರೆಗೆ) ನಡೆಯಲಿದೆ ಎಂದು ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಸುನೀಲ್‌ ಅಂಬೇಕರ್ ತಿಳಿಸಿದ್ದಾರೆ.

 ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಾರ್ಷಿಕ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ ಈ ಬಾರಿ ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ (21ರಿಂದ 23ರವರೆಗೆ) ನಡೆಯಲಿದೆ ಎಂದು ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಸುನೀಲ್‌ ಅಂಬೇಕರ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್‌ಎಸ್‌ಎಸ್‌ನ ಅತ್ಯುನ್ನತ ನೀತಿ-ನಿರ್ಧಾರ ಕೈಗೊಳ್ಳುವ ವಾರ್ಷಿಕ ಸಭೆಯಾಗಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾವನ್ನು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆರ್‌ಎಸ್‌ಎಸ್‌ನ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂಘದ 2024-25ನೇ ಸಾಲಿನ ವಾರ್ಷಿಕ ವರದಿ ಒಪ್ಪಿಸಲಿದ್ದಾರೆ. ಅಂತೆಯೆ ವಿವಿಧ ಪ್ರಾಂತಗಳ ಕಾರ್ಯಕರ್ತರಿಂದ ರಾಷ್ಟ್ರವ್ಯಾಪಿ ನಡೆದ ವಿವಿಧ ಚಟುವಟಿಕೆಗಳ ಕುರಿತೂ ಸಭೆಗೆ ವರದಿ ನೀಡಲಾಗುತ್ತದೆ ಎಂದು ಹೇಳಿದರು.

ಜೆ.ಪಿ.ನಡ್ಡಾ ಸೇರಿ ಹಲವರು ಭಾಗಿ:

ಮೂರು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ ಶರಣ್‌, ವಿಎಚ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಲೋಕ್‌ ಕುಮಾರ್‌, ವನವಾಸಿ ಕಲ್ಯಾಣ ಆಶ್ರಮದ ಸತ್ಯೇಂದ್ರ ಸಿಂಗ್‌, ವಿದ್ಯಾಭಾರತಿ, ಆರ್‌ಎಸ್‌ಎಸ್‌ ಪ್ರೇರಿತ 32 ಸಂಘಟನೆಗಳ ಸಂಘಟನಾ ಮಂತ್ರಿಗಳು, ಸಹ ಸಂಘಟನಾ ಮಂತ್ರಿಗಳು, ಭಾರತೀಯ ಮಜ್ದೂರ್‌ ಸಂಘ, ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖ ಸಂಚಾಲಕಿ ವಿ.ಶಾಂತಾಕುಮಾರಿ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಭಾಗಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಅಂತೆಯೆ ಈ ಸಭೆಯಲ್ಲಿ ಆರ್‌ಎಸ್‌ಎಸ್‌ ಸರಸಂಘ ಚಾಲಕ ಡಾ.ಮೋಹನ್‌ ಭಾಗವತ್‌, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲ ಸರ ಕಾರ್ಯವಾಹರುಗಳು, ಅನ್ಯ ಪದಾಧಿಕಾರಿಗಳು, ಕಾರ್ಯಕಾರಿಣಿಯ ಸದಸ್ಯರು ಉಪಸ್ಥಿತರಿರಲಿದ್ದಾರೆ. ಪ್ರಮುಖವಾಗಿ ಕ್ಷೇತ್ರೀಯ ಹಾಗೂ ಪ್ರಾಂತ ಸ್ತರದ 1,480 ಆಹ್ವಾನಿತ ಪ್ರತಿನಿಧಿಗಳು ಬೈಠಕ್‌ನಲ್ಲಿ ಭಾಗವಹಿಸಲು ಆಪೇಕ್ಷಿತರಾಗಿದ್ದಾರೆ ಎಂದರು.

ಆರ್‌ಎಸ್‌ಎಸ್‌ಗೆ ನೂರು ವರ್ಷ:

ಆರ್‌ಎಸ್‌ಎಸ್ ಸ್ಥಾಪನೆಯಾಗಿ ಈ ವರ್ಷಕ್ಕೆ ನೂರು ವರ್ಷ ಪೂರೈಸಲಿದೆ. ಈ ಶತಾಬ್ಧಿ ನಿಮಿತ್ತ ಅಖಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸಂಘದ ಕಾರ್ಯ ವಿಸ್ತಾರದ ಕುರಿತು ಚರ್ಚೆಗಳು ನಡೆಯಲಿವೆ. 2025ರ ವಿಜಯದಶಮಿಯಿಂದ 2026ರ ವಿಜಯದಶಮಿವರೆಗೆ ಸಂಘ ಶತಾಬ್ಧಿ ವರ್ಷ ಎಂದು ಕರೆಯಲಿದೆ. ಈ ಅವಧಿಯಲ್ಲಿ ಎಲ್ಲಾ ವರ್ಗದ ಜನರನ್ನು ಜೋಡಿಸಿಕೊಂಡು ಪ್ರಭಾವಿಕಾರಿ ಹಾಗೂ ವ್ಯಾಪಕವಾಗಿ ಸಂಘದ ಕಾರ್ಯ ವಿಸ್ತಾರದ ಕೆಲಸವಾಗಲಿದೆ. ಪಂಚ ಪರಿವರ್ತನೆ ಹೆಸರಿನಲ್ಲಿ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ ಮತ್ತು ನಾಗರಿಕ ಕರ್ತವ್ಯ ಕುರಿತು ಚರ್ಚಿಸಿ ಎಲ್ಲಾ ಸ್ತರದ ಜನರನ್ನು ಈ ನಿಟ್ಟಿನಲ್ಲಿ ಜೋಡಿಸಿಕೊಳ್ಳುವ ಕುರಿತು ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಅಂಬೇಕರ್ ವಿವರಿಸಿದರು.

ಸಭೆಯಲ್ಲಿ ಎರಡು ನಿರ್ಣಯ ಪ್ರಕಟ:

ಮೂರು ದಿನಗಳ ಈ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಎರಡು ನಿರ್ಣಯಗಳನ್ನು ಆರ್‌ಎಸ್‌ಎಸ್‌ ಪ್ರಕಟಿಸಲಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿ ಇತರೆ ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿ ಸೇರಿ ಕಾಳಜಿ ವಹಿಸಬೇಕಾದ ಘಟನಾವಳಿಗಳು. ಮತ್ತೊಂದು, ಕಳೆದ ನೂರು ವರ್ಷಗಳ ಸಂಘದ ಪಯಣ, ಶತಾಬ್ಧಿ ವರ್ಷದ ಕಾರ್ಯ ಹಾಗೂ ಮುಂದಿನ ಯೋಜನೆಗಳ ಕುರಿತು ನಿರ್ಣಯ ಕೈಗೊಂಡು ಪ್ರಕಟಿಸಲಾಗುತ್ತದೆ ಎಂದರು.

ಕರ್ನಾಟಕದಲ್ಲಿ 1525ರಲ್ಲಿ ಜನಿಸಿದ ಶೌರ್ಯಶಾಲಿ ರಾಣಿ ಅಬ್ಬಕ್ಕ ಅವರ 500ನೇ ವರ್ಷದ ಜಯಂತಿ ಸ್ಮರಿಸಲು ಈ ಸಭೆಯಲ್ಲಿ ವಿಶೇಷ ಹೇಳಿಕೆ ಬಿಡುಗಡೆ ಮಾಡಲಾಗುವುದು. ಈ ಮುಖಾಂತರ ರಾಣಿ ಅಬ್ಬಕ್ಕ ಅವರ ಅಪ್ರತಿಮ ಕೊಡುಗೆಗಳನ್ನು ಗುರುತಿಸಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಆರ್‌ಎಸ್‌ಎಸ್‌ ಸರ ಸಂಘ ಚಾಲಕ ಮೋಹನ್‌ ಭಾಗವತ್‌ ಅವರ ರಾಷ್ಟ್ರವ್ಯಾಪಿ ಪ್ರವಾಸವನ್ನು ನಿರ್ಣಯಿಸಲಾಗುವುದು. ಸಭೆಯ ಕೊನೆ ದಿನ ಅಂದರೆ, 23ರಂದು ಬೆಳಗ್ಗೆ 11.30ಕ್ಕೆ ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸುನೀಲ್‌ ಅಂಬೇಕರ್‌ ಹೇಳಿದರು.

ಮಾ.30ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಗಪುರದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಭೇಟಿ ನೀಡುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿ, ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಸಹ ಭೇಟಿ ನೀಡಿದ್ದರು. ಹೀಗಾಗಿ ಪ್ರಧಾನಿ ಮೋದಿ ಭೇಟಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಮೋದಿ ಬಂದರೆ ಸ್ವಾಗತ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆರ್‌ಎಸ್‌ಎಸ್‌ ಕ್ಷೇತ್ರೀಯ ಕಾರ್ಯವಾಹ ಎನ್‌.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Share this article