)
- ಗುರುಗಳು ಚೆನ್ನಾಗಿರಲೆಂದು ಟೀಕಿಸುವ ಯತ್ನಾಳ್, ಎಚ್.ಎಸ್. ಶಿವಶಂಕರಗೆ ಇಷ್ಟಪಡುತ್ತೇನೆ - - -
ಬೆಂಗಳೂರಿನ ಶ್ವಾಸ ಪೀಠವನ್ನು ಹರಿಹರ ಪಂಚಮಸಾಲಿ ಪೀಠದಡಿಯೇ ತರುತ್ತೇನೆ, ನನ್ನ ಪ್ರಾಣ ಹೋದರೆ ನನ್ನ ಆಸ್ತಿ ಏನಾದರೂ ಇದ್ದರೆ ಅದು ಇದೇ ಹರಿಹರ ಪೀಠಕ್ಕೆ ಹೋಗುತ್ತದೆ ಎಂದು ಶ್ರೀ ವಚನಾನಂದ ಸ್ವಾಮೀಜಿ ಸ್ಪಷ್ಟ ಸಂದೇಶ ಸಾರಿದ್ದಾರೆ.
ಹರಿಹರದ ಪಂಚಮಸಾಲಿ ಪೀಠದಲ್ಲಿ ಸಮಾಜದ ಮುಖಂಡರು, ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಮಠದಲ್ಲಿ ಲಿಂಗಪೂಜೆ, ಯೋಗ ನಿತ್ಯವೂ ಆಚರಣೆ ಆಗಬೇಕು. ಇನ್ನು ಮುಂದೆ ಈ ಮಠವು 12 ಟ್ರಸ್ಟಿಗಳ ಮಠವಾಗಿರದೇ, ಇಡೀ ಪಂಚಮಸಾಲಿ ಸಮುದಾಯದ ಮಠವಾಗಿರಲಿದೆ ಎಂದರು.ಪೊಲೀಸ್ ರಕ್ಷಣೆ ತೆಗೆದುಕೊಂಡು ಬಂದು, ಸಭೆ ಮಾಡಿದವರು ಯಾರವರು? ಗಟ್ಟಿಯಾಗಿದ್ದರೆ ಧೈರ್ಯವಾಗಿ ಸಮಾಜದ ಮುಂದೆ ಲೆಕ್ಕ ಕೊಟ್ಟು ಹೋಗಿದ್ದರೆ ಸಮಾಜಕ್ಕೆ ಆದರ್ಶವಾಗಿರುತ್ತಿದ್ದರು. ಧರ್ಮ ಎನ್ನುವ ಶಬ್ಧಕ್ಕೆ ಅಧರ್ಮದರ್ಶಿಗಳಾಗಿದ್ದಾರೆ. ನಿಜವಾದ ಸಮಾಜದ ಭಕ್ತರೆಂದರೆ ಇವತ್ತು ಗೊತ್ತಾಯಿತು. ನೀನೇ ಸಾಕಿದ ಗಿಣಿ, ಹದ್ದಾಗಿ ಕುಕ್ಕಿತಲ್ಲೋ ಎಂಬಂತೆ ನನ್ನನ್ನು ಹದ್ದಾಗಿ ಕುಕ್ಕಿದರು. ಮಠದಲ್ಲಿದ್ದರೂ ನಮ್ಮನ್ನು ಭಕ್ತರ ಭೇಟಿ ಮಾಡಲು ಬಿಡುತ್ತಿರಲಿಲ್ಲ ಎಂದು ಅವರು ಆರೋಪಿಸಿದರು.
ನಮ್ಮ ಪೂರ್ವಾಶ್ರಮದ ಸಹೋದರ ಅಪಘಾತದಲ್ಲಿ ಸಾವನ್ನಪ್ಪಿದಾಗಲೂ ಹೋಗಲಿಲ್ಲ. ಕಚ್ಚೆ, ಕೈ, ಬಾಯಿ ಬಹಳ ಗಟ್ಟಿಯಾಗಿಟ್ಟುಕೊಂಡಿದ್ದೇವೆ ನಾವು. ಪೀಠದಲ್ಲಿ ಯಾವುದೇ ಹಣಕಾಸು ವ್ಯವಹಾರ ಮಾಡಿಲ್ಲ. ನನಗೆ ದೀಕ್ಷೆ ಕೊಟ್ಟ ಗುರುಗಳು ಅನೇಕ ಮಠಗಳ ಪೀಠಾಧ್ಯಕ್ಷರಿದ್ದರು. ಯಾವುದೇ ಷರತ್ತಿಲ್ಲದೇ ನನಗೆ ಸಂಪುಟ ಪತ್ರ ನೀಡಿದ್ದಾರೆ. ಶ್ವಾಸ ಸಂಸ್ಥೆಯಿಂದ ಬಂದ ಹಣವನ್ನು ಸಹ ಇಲ್ಲಿಗೆ ಬಳಸಿದ್ದೇನೆ. ಯಾರೊಬ್ಬರ ಬಳಿಯೂ ಹಣ ಪಡೆಯದೇ, ಎಲ್ಲವನ್ನೂ ಇಲ್ಲಿಗೆ ಬಳಕೆ ಮಾಡಿದ್ದೇನೆ. ಹಣ ಮಾಡಬೇಕೆಂದು ನಾನು ಪೀಠಕ್ಕೆ ಬಂದಿಲ್ಲ. ಪ್ರಾಮಾಣಿಕವಾಗಿ ಪೀಠ ಬೆಳೆಸುವ ಪ್ರಯತ್ನ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರರನ್ನು ತುಂಬಾ ಇಷ್ಟಪಡುತ್ತೇನೆ. ನಮ್ಮ ಗುರುಗಳು ಚೆನ್ನಾಗಿರಬೇಕೆಂದು ಟೀಕೆ ಮಾಡಿದ್ದಾರೆ. ಅಂತರಂಗ, ಬಹಿರಂಗ ಎರಡೂ ಶುದ್ಧವಾಗಿವೆ. ಇಂತಹವರು ಏನೇ ಮಾತನಾಡಿದರೂ ಪ್ರಸಾದವೆಂದೇ ಸ್ವೀಕಾರ ಮಾಡಿದ್ದೇವೆ. ಟೀಕೆ ಮಾಡುವ ಮೂಲಕ ನನ್ನ ಎಚ್ಚರಿಸಿದ್ದಾರೆ. ಯಾರೆಲ್ಲಾ ಟೀಕೆ ಮಾಡಿದ್ದಾರೆ, ಆ ಎಲ್ಲರೂ ನನ್ನ ಶಿಲ್ಪಿಗಳು. ನಾನು ವ್ಯಕ್ತಿಯಲ್ಲ, ಈ ಸಮಾಜದ ಸಂಪತ್ತು, ಭಕ್ತರೆ ನನಗೆ ಭಗವಂತ. ನಾನು ಯಾರ ಋಣದಲ್ಲೂ ಇಲ್ಲ. ಭಕ್ತರ ಋಣದಲ್ಲಿದ್ದೇನೆ. 12 ಟ್ರಸ್ಟಿಗಳನ್ನು ನೋಡಿ ಬಂದಿಲ್ಲ. 80 ಲಕ್ಷ ಪಂಚಮಸಾಲಿ ಸಮಾಜ ನೋಡಿ ಬಂದವನು ನಾನು ಎಂದು ವಚನಾನಂದ ಸ್ವಾಮೀಜಿ ಟ್ರಸ್ಟಿಗಳಿಗೆ ತಿರುಗೇಟು ನೀಡಿದರು.
* (ಕೋಟ್) ಪ್ರತಿ ತಿಂಗಳು ₹4 ಲಕ್ಷ ಖರ್ಚು ತೋರಿಸುತ್ತಿದ್ದರು. ಆಡಳಿತಾಧಿಕಾರಿಯಾಗಿ ಡಾ.ರಾಜಕುಮಾರ ಬಂದ ಮೇಲೆ ಅದು ₹1.5 ಲಕ್ಷಕ್ಕೆ ಇಳಿಯಿತು. ನನಗೆ ಲೆಕ್ಕ ಗೊತ್ತಿಲ್ಲ. ನಾನು ಯೋಗ ಕಲಿತಿದ್ದೇನೆ. ಗುರುಗಳು ಬಡವಾಗಿರಬೇಕು, ಭಕ್ತರು ಶ್ರೀಮಂತರಾಗಿರಬೇಕು. ಕಾಣಿಕೆ ಏನೇ ನೀಡಿದದರೂ ಅಲ್ಲಿಯೇ ಒಪ್ಪಿಸಿದ್ದೇನೆ. ₹1 ಕೋಟಿಗೂ ಹೆಚ್ಚು ದಾನ ಸಂಗ್ರಹಿಸಿ, ಅದರ ಬಡ್ಡಿ ಹಣದಲ್ಲಿ ಮಠ ನಡೆಯುತ್ತಿದೆ.
- - -
- ವಚನಾನಂದ ಶ್ರೀ.