ಕನ್ನಡಪ್ರಭ ವಾರ್ತೆ ಬ್ಯಾಡಗಿ
ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಎರಡು ದಿನ ಆಯೋಜಿಸಲಾಗಿರುವ ಶ್ರೀ ಗುರು ಸಿದ್ದರಾಮೇಶ್ವರ 851ನೇ ಜಯಂತಿ ಹಾಗೂ ಲಿಂಗಾಯತ ನೊಳಂಬ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕಕ್ಕೆ ಮತ್ತೊಂದು ಹೆಸರು ಸಿದ್ಧರಾಮೇಶ್ವರರು, ಅವರ ದೂರದೃಷ್ಟಿ ವಿಚಾರಗಳಿಂದ ನಾವೆಲ್ಲರೂ ನೀರಿನ ಸಮಸ್ಯೆಯಿಂದ ಮುಕ್ತವಾಗಿದ್ದೇವೆ, ಆದರೆ ಅವರ ಹೆಸರಿನಲ್ಲಿ ಇಂದಿಗೂ ನಾವ್ಯಾರೂ ಕೆರೆಕಟ್ಟೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಆದರೆ ನನ್ನ ಅಧಿಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನ ನೀಡುವ ಮೂಲಕ ಶ್ರೀಗಳು ನಿರ್ಮಿಸಿದಂತಹ ಕೆರೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಿದ್ದೇನೆ ಎಂದರು.ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಗುರು ಸಿದ್ಧರಾಮೇಶ್ವರರು ಕಾಯಕದಿಂದ ಶಿವಯೋಗ ಸ್ವೀಕರಿಸಿದವರು, ಆದರೆ ಇತ್ತೀಚೆಗೆ ಕಾಯಕ ಮಾಡದೇ ಶ್ರೀಮಂತರಾಗುವ ಮನೋಭಾವ ಬೆಳೆಸಿಕೊಳ್ಳುತ್ತಿರುವುದು ದುರಂತ ಎಂದರು.
ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸಾಮಾಜಿಕ ಸಮಾನತೆಯನ್ನು ನೇರವಾಗಿ ಹೇಳಿದ್ದೇ ಲಿಂಗಾಯತ ಧರ್ಮ, ಹೀಗಾಗಿ ಲಿಂಗಾಯತ ಸಮಾಜ ಅಶಕ್ತವಲ್ಲ, ನಮ್ಮಲ್ಲಿ ಎಲ್ಲವೂ ಇದೇ. ನಮ್ಮ ಶಕ್ತಿಯನ್ನು ಅರಿತುಕೊಳ್ಳಲಾಗದೇ ಇನ್ನೊಬ್ಬರ ಹೇಳಿಕೆ ಮಾತು ಕೇಳುವಂತಹ ಮನಸ್ಥಿತಿಗೆ ಬಂದಿರುವುದು ದುರಂತ ಎಂದರು.
ಇದೇ ವೇಳೆ ಸುರೇಂದ್ರಪ್ಪ ಕಿರವಾಡಿ ಇವರಿಗೆ ನೊಳಂಬಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು, ಎಂ.ಕೆ. ಭಾಗ್ಯ ರಚಿಸಿದ ಅಜ್ಜಯ್ಯನ ಗ್ರಂಥವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. ಸೋಮಲಿಂಗಪ್ಪ ಕಣಗಲಭಾವಿ ಸ್ವಾಗತಿಸಿದರು, ನೊಳಂಬ ಸಮಾಜದ ರಾಜ್ಯಾಧ್ಯಕ್ಷ ಎಸ್.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಶಿವಕುಮಾರ ನಿರೂಪಿಸಿದರು.