ಕನ್ನಡಪ್ರಭ ವಾರ್ತೆ ರಾಮನಾಥಪುರ
ಅರಕಲಗೂಡು ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿಯನ್ನು ಮೂಡಿಸಿದ ಮಕ್ಕಳ ಮನೆ (ಎಲ್‌ಕೆಜಿ -ಯುಕೆಜಿ) ಕಾರ್ಯಕ್ರಮ ಇಡೀ ತಾಲೂಕಿನಾದ್ಯಂತ ವ್ಯಾಪಿಸಿದೆ. ಇದರ ಮಾದರಿಯಲ್ಲೇ ತಾಲೂಕಿನ ರಾಮನಾಥಪುರ ಹೋಬಳಿಯ ಕೇರಳಾಪುರ ಸಮೀಪದ ಹೊನ್ನೇನಹಳ್ಳಿಯಲ್ಲಿ ಮಕ್ಕಳ ಮನೆ ಮಾದರಿಯಲ್ಲೇ ಅಂಗನವಾಡಿ ಕಲಿಕಾ ಕೇಂದ್ರವನ್ನು ಶಾಸಕರಾದ ಎ ಮಂಜು ಉದ್ಘಾಟಿಸಿದರು.ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅರಕಲಗೂಡು ತಾಲೂಕಿನಲ್ಲಿ ಇದು 18ನೇ ಮಕ್ಕಳಮನೆಯಾಗಿದ್ದು, ಸುಮಾರು 450ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ರೈತರ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಬೇಕಾದರೆ ರೈತರಿಗೆ ಸುಮಾರು 40,000ಕ್ಕೂ ಹೆಚ್ಚು ಹಣ ಖರ್ಚಾಗಲಿದ್ದು, ಈ ನಮ್ಮ ಮಕ್ಕಳ ಮನೆಯಿಂದ ಗ್ರಾಮೀಣ ಭಾಗದ ರೈತರಿಗೆ ಸುಮಾರು 1.5 ಕೋಟಿಗೂ ಹೆಚ್ಚು ಮೊತ್ತದ ಸಾಲದ ಹೊರೆಯನ್ನು ಕಡಿಮೆ ಮಾಡಿ ಸಂಘ ಸಂಸ್ಥೆಗಳಿಂದ ಸಾಲ ಪಡೆದು ಖಾಸಗಿ ಶಾಲೆಗೆ ಸೇರಿಸುವುದನ್ನು ತಪ್ಪಿಸಿ ಗ್ರಾಮೀಣ ಭಾಗದ ತಾಲೂಕಿನ ಜನತೆಗೆ ಶಾಸಕರ ಗ್ಯಾರಂಟಿ ಶಿಕ್ಷಣ ಮಕ್ಕಳ ಮನೆ ಕಾರ್ಯಕ್ರಮ ನೀಡುತ್ತಿರುವುದು ನನಗೆ ಅತ್ಯಂತ ಸಂತೋಷ ತಂದಿದೆ ಎಂದರು.
ಉತ್ತಮ ಶಿಕ್ಷಣ ನೀಡುವ ಸಲುವಾಗಿ ನವೆಂಬರ್ 1, 2023ರಲ್ಲಿ ಈ ಮಕ್ಕಳ ಮನೆ ಯೋಜನೆಯನ್ನು ಆರಂಭಿಸಲಾಗಿದ್ದು, ಹೊನ್ನೇನಹಳ್ಳಿ ಗ್ರಾಮದ ಹಿರಿಯ ವಿದ್ಯಾರ್ಥಿ ಡಾ.ಅಶೋಕ್ ಹನ್ಯಾಳು ಅವರ ನೇತೃತ್ವದ ಈ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಮಕ್ಕಳ ಮನೆ ತಂಡದ ಎಲ್ಲಾ ಸದಸ್ಯರಿಗೂ ಹಾಗೂ ಹೊನ್ನೇನಳ್ಳಿ ಗ್ರಾಮದ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮಕ್ಕಳ ಮನೆಗೆ ನೀಡುತ್ತಿರುವ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಇಲಾಖೆಯ ವತಿಯಿಂದ ಅಂಗನವಾಡಿ ಕಲಿಕಾ ಕೇಂದ್ರಕ್ಕೆ ಒಂದು ಸ್ಮಾರ್ಟ್ ಟಿವಿಯನ್ನು ಹಸ್ತಾಂತರಿಸಿದರು.ಐಟಿಸಿ ಕಂಪನಿಯ ಸಿಎಸ್‌ಆರ್ ವತಿಯಿಂದ ನಿರ್ಮಾಣವಾಗುತ್ತಿರುವ ಸುಮಾರು 6 ಲಕ್ಷ ರು. ವೆಚ್ಚದ ಹೈಟೆಕ್ ಶೌಚಾಲಯದ ಗುದ್ದಲಿ ಪೂಜೆ ನೆರವೇರಿಸಿ, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಗ್ರಾಮಸ್ಥರೆಲ್ಲರೂ ಸೇರಿ ಕಾಮಗಾರಿ ಮೊತ್ತದ 5% ಮೊತ್ತವನ್ನು ಐಟಿಸಿಗೆ ದೇಣಿಗೆ ನೀಡಿ ಶಾಲೆಗೆ ಶ್ರಮಿಸುತ್ತಿರುವ ಈ ಕಾರ್ಯ ತಾಲೂಕಿನಲ್ಲೇ ಮಾದರಿಯಾಗುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಗಂಗಾಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ತಾಲೂಕು ಪಂಚಾಯಿತಿ ವತಿಯಿಂದ ಪ್ರಕಾಶ್ , ಶೇಖರ್, ಧರ್ಮೇಂದ್ರ. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸಂತೋಷ್ ಗೌಡ್ರು, ಗ್ರಾಮ ಪಂಚಾಯಿತಿ ಪಿಡಿಒ ಪ್ರತಾಪ್ ಹಾಗೂ ಲೋಕೇಶ್, ಆನಂದ್ ಗ್ರಾಪಂ ಸದಸ್ಯರಾದ ಕೃಷ್ಣೇಗೌಡ, ಗ್ರಾಮದ ಜನಾರ್ದನ್, ಪ್ರಕಾಶ್, ಧರ್ಮೇಗೌಡ ನಾಗೇಗೌಡ, ಶಿವಣ್ಣ, ಯೋಗೇಶ್, ಮಹೇಶ್ ಹಾಗೂ ಶಿಕ್ಷಣ ಸಂಯೋಜಕರಾದ ಸದಾಶಿವಪ್ಪ ಶಿಕ್ಷಕರಾದ ಯೋಗೇಶ್, ಸಂತೋಷ್ ಹನ್ಯಾಳು, ಕೇರಳಾಪುರ ಕ್ಲಸ್ಟರ್ ಅಂಗನವಾಡಿ ಕಾರ್ಯಕರ್ತೆಯರು, ಇಂದಿರಾ ಗಾಂಧಿ ವಸತಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.