ಶರಣ ನುಲಿಯ ಚಂದಯ್ಯನವರ ೯೧೮ನೇ ಜಯಂತ್ಯುತ್ಸವ
ಹಿಂದುಳಿದಿರುವ ಕುಳುವ ಸಮಾಜದ ಏಳಿಗೆಗಾಗಿ ಪ್ರಮಾಣಿಕವಾಗಿ ಶ್ರಮಿಸುವೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ತಿಳಿಸಿದರು.
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಕೊರಮ, ಕೊರಚ ಹಾಗೂ ಕೊರವ ಸಮುದಾಯಗಳ ಒಕ್ಕೂಟವಾದ ಅಖಿಲ ಕರ್ನಾಟಕದ ಕುಳುವ ಮಹಾಸಂಘದ ತಾಲೂಕು ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶರಣ ನುಲಿಯ ಚಂದಯ್ಯನವರ ೯೧೮ನೇ ಜಯಂತ್ಯುತ್ವವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜ ಸೂಚಿಸುವವರನ್ನು ಸ್ವಾಮೀಜಿಯನ್ನಾಗಿ ಮಾಡಲು ಸಹಕರಿಸುವೆ:
ಐಎಎಸ್, ಐಪಿಎಸ್ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಸಮಾಜದ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಕೊಡಿಸಲಾಗುವುದು. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ಕೊಡಿಸುವ ಮೂಲಕ ಕೆಲಸವನ್ನು ಕೊಡಿಸಲು ಪ್ರಯಾಣಿಕವಾಗಿ ಪ್ರಯತ್ನಿಸುವೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಾತನಾಡಿ, ಈ ನೆಲದ ಮೂಲ ನಿವಾಸಿಗಳಿಗೆ ಶಾಶ್ವತ ನೆಲೆ ಇಲ್ಲ. ಅಲೆಮಾರಿಗಳಿಗೆ ನಿಜವಾದ ಸ್ವಾತಂತ್ರ್ಯ ದೊರಕಿದ್ದು ೧೯೫೨ರಲ್ಲಿ. ರಾಜ್ಯದಲ್ಲಿ ಅಲೆಮಾರಿಗಳಿಗೆ ಮೀಸಲಾತಿ ಅಗತ್ಯವಿದೆ. ಅವರಿಗೆ ಶಿಕ್ಷಣ, ಶಾಶ್ವತ ನೆಲೆ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಅವರ ಏಳ್ಗೆಗಾಗಿ ಶಾಶ್ವತ ಅಲೆಮಾರಿ ಆಯೋಗ ಸ್ಥಾಪನೆಯಾಗಬೇಕಿದೆ ಎಂದು ನುಡಿದರು.
ಸಾನ್ನಿಧ್ಯ ವಹಿಸಿದ್ದ ಪ್ರಭು ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ ಹಾಗೂ ಪಟ್ಟದ ಚಿನ್ಮಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಶರಣ ನುಲಿಯ ಚಂದಯ್ಯನವರ ಕಾಯಕ ಹಾಗು ದಾಸೋಹ ಸೇವೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಲಿಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ. ಲತಾ, ಕುಳುವ ಮಹಾಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಡಾ.ಕೆ. ಹನುಮಂತಪ್ಪ, ಖಜಾಂಚಿ ರಮಣಪ್ಪ ಭಜಂತ್ರಿ, ಜಿಲ್ಲಾಧ್ಯಕ್ಷ ಶಂಕರಬಂಡೆ ವೆಂಕಟೇಶ, ಉಪಾಧ್ಯಕ್ಷ ಕೆ. ಈರಣ್ಣ, ರಾಜ್ಯ ಸಮಿತಿ ಅಧಿಕ ಕಾರ್ಯದರ್ಶಿ ಡಾ.ಎಲ್. ಗಂಗಾಧರ, ತಾಲೂಕು ಸಮಿತಿ ಉಪಾಧ್ಯಕ್ಷರಾದ ಕೆ. ರಾಮಾಂಜಿನಿ, ಕೆ. ಪಂಪಾಪತಿ, ಪ್ರಧಾನ ಕಾರ್ಯದರ್ಶಿ ಕೆ. ಶೇಖಪ್ಪ, ಸಹ ಕಾರ್ಯದರ್ಶಿಗಳಾದ ಕೆ. ಜಂಬಯ್ಯ, ತೆಲಿಗೆ ಮಂಜಪ್ಪ, ಖಜಾಂಚಿಗಳಾದ ಕೆ. ಪರಸಪ್ಪ, ಕೆ. ಹುಲಿಗೆಪ್ಪ, ಸದಸ್ಯರಾದ ಕೆ. ನಾಗರಾಜ, ಕೆ. ಹುನುಮಂತ, ಕೆ. ರಾಮು, ಜಡೆಪ್ಪ, ಪಿ.ಕೆ. ನಾಗರಾಜ ಉಪಸ್ಥಿತರಿದ್ದರು.