ಕನ್ನಡಪ್ರಭ ವಾರ್ತೆ ನವದೆಹಲಿ
ದೆಹಲಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, ದೆಹಲಿಗೆ ಬಂದ ಮೇಲೆ ನಾನು ಎಲ್ಲರನ್ನು ಭೇಟಿ ಮಾಡುತ್ತೇನೆ. ನೀವು (ಮಾಧ್ಯಮಗಳು), ಡಿಕೆಶಿ ದೆಹಲಿಗೆ ಹೋದರೂ ನಾಯಕರು ಸಮಯ ನೀಡಿಲ್ಲ, ಕಾಯುತ್ತಾ ಕೂತಿದ್ದಾರೆ ಎಂದು ವರದಿ ಮಾಡುತ್ತೀರಲ್ಲಾ, ಹಾಗೇ ಕಾಯುತ್ತಾ ಕೂತಿರುವೆ. ದೆಹಲಿಯಲ್ಲಿ ನಾನು ಯಾರನ್ನು ಭೇಟಿ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದರು.
ಪುಣೆಯಲ್ಲಿರುವ ನನ್ನ ಸ್ನೇಹಿತರ ಮನೆಯ ಮದುವೆ ಕಾರ್ಯಕ್ರಮವಿತ್ತು. ಹೀಗಾಗಿ, ದೆಹಲಿಗೆ ಬಂದಿದ್ದೆ. ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿದ್ದೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮವಿದೆ ಎಂದು ಹೇಳಿದರು.ಅಸ್ಸಾಂ ಚುನಾವಣೆಗೆ 43 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಕೇಳಿದಾಗ, 43 ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಮಂಗಳವಾರ ಮತ್ತೊಂದು ಸ್ಕ್ರೀನಿಂಗ್ ಸಮಿತಿ ಸಭೆ ಇದೆ. ಆ ಸಮಿತಿಯಲ್ಲಿ ನಾನು ಇಲ್ಲ ಎಂದು ತಿಳಿಸಿದರು.ಡಿಕೆ ಬೆಂಗ್ಳೂರಿಗೆ ರಿಟರ್ನ್ ರದ್ದು, ರಾಜಕೀಯ ಕೌತುಕ:ಖಾಸಗಿ ಕಾರ್ಯಕ್ರಮ ನಿಮಿತ್ತ ದೆಹಲಿಗೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಬೆಳಗ್ಗೆ 8 ಗಂಟೆಯ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಮರಳಬೇಕಿತ್ತು. ಆದರೆ, ಬೆಳಗ್ಗೆಯ ಪ್ರಯಾಣವನ್ನು ಅವರು ದಿಢೀರ್ ಆಗಿ ರದ್ದುಗೊಳಿಸಿ, ದೆಹಲಿಯಲ್ಲೇ ಉಳಿದರು. ಹೀಗಾಗಿ, ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರಿಂದ ಅವರು ಸ್ಪಷ್ಟತೆ ಬಯಸಿ ದೆಹಲಿಯಲ್ಲೇ ಉಳಿದರಾ ಎಂಬ ಕುತೂಹಲ ಮೂಡಿತು. ಈ ಮಧ್ಯೆ, ದೆಹಲಿಯಲ್ಲಿ ಅವರು ಸೋಮವಾರ ಕಲ್ಕಾಜಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.