ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ ಕೆಲಸ ಮಾಡ್ತೇನೆ

KannadaprabhaNewsNetwork | Published : Aug 2, 2024 12:58 AM

ಸಾರಾಂಶ

ಆರೋಗ್ಯದ ದೃಷ್ಟಿಯಿಂದಲೂ ಜಿಲ್ಲೆಯಲ್ಲಿ ಇನ್ನೂ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಕಿಮ್ಸ್‌ ಹೊರತುಪಡಿಸಿ ಉಳಿದೆಲ್ಲ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಬೇಕಿದೆ. ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾನ್, ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳು ಬೇಕು.

ಧಾರವಾಡ:

ಶಿಕ್ಷಣ, ಆರೋಗ್ಯ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುತ್ತೇನೆ. ಎದುರಾಗುವ ಎಲ್ಲ ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಿಕೊಂಡು ಸೇವೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಧಾರವಾಡ ಜರ್ನಲಿಸ್ಟ್‌ ಗಿಲ್ಡ್‌ ಗುರುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಮ್ಮಿಕೊಂಡಿರುವ ಯೋಜನೆಗಳು ಹಾಗೂ ಕನಸುಗಳ ಬಗ್ಗೆ ಜಿಲ್ಲಾಧಿಕಾರಿ ವಿಸ್ಕೃತವಾಗಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಉತ್ತಮ ಶಿಕ್ಷಣ ಪಡೆದಿರುವ ಹಿನ್ನೆಲೆಯಲ್ಲಿಯೇ ನಾನು ಐಎಎಸ್‌ ಅಧಿಕಾರಿಯಾಗಿದ್ದೇನೆ. ಧಾರವಾಡ ಮೊದಲೇ ವಿದ್ಯಾಕಾಶಿ ಹೆಸರು ಹೊಂದಿದ್ದು, ತಮಗೆ ದೊರೆತಿರುವ ಈ ಹಿಂದಿನ ಅನುಭವ ಬಳಸಿಕೊಂಡು ಇಡೀ ರಾಜ್ಯಕ್ಕೆ ಧಾರವಾಡ ಶಿಕ್ಷಣಕ್ಕೆ ಮೊದಲ ಸ್ಥಾನದಲ್ಲಿ ನಿಲ್ಲುವ ರೀತಿ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ. ವಿದ್ಯಾಕಾಶಿ ಹೆಸರಿನ ಧಾರವಾಡ ಎಸ್ಸೆಸ್ಸೆಲ್ಸಿಯಲ್ಲಿ 22ನೇ ಸ್ಥಾನದಲ್ಲಿರುವುದು ನೋವು ತಂದಿದೆ. ಹೀಗಾಗಿ ಮಿಶನ್‌ ವಿದ್ಯಾಕಾಶಿ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಯೋಜನೆ ಜಾರಿಯಲ್ಲಿವೆ. ಶಿಕ್ಷಕರು, ಪಾಲಕರು ಈ ಪ್ರಯತ್ನಗಳಿಗೆ ಸಹಕರಿಸಬೇಕೆಂದರು.

ಆರೋಗ್ಯದ ದೃಷ್ಟಿಯಿಂದಲೂ ಜಿಲ್ಲೆಯಲ್ಲಿ ಇನ್ನೂ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಕಿಮ್ಸ್‌ ಹೊರತುಪಡಿಸಿ ಉಳಿದೆಲ್ಲ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಬೇಕಿದೆ. ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾನ್, ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳು ಬೇಕು. ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಅವು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಪರಿವರ್ತನೆಯಾಗಬೇಕು. ಅವಳಿ ನಗರದಲ್ಲಿ ಪ್ರಾದೇಶಿಕ ಕ್ಯಾನ್ಸರ್‌ ಸಂಸ್ಥೆ, ಮಕ್ಕಳ ಆರೈಕೆ ಕೇಂದ್ರ, ನರ ರೋಗ ಶಸ್ತ್ರಚಿಕಿತ್ಸೆ ಸೌಲಭ್ಯಗಳು ಬಡ ಜನರಿಗೆ ಸಿಗುವಂತೆ ಯೋಜನೆ ರೂಪಿಸಲಾಗುತ್ತಿದೆ. ಇದರೊಂದಿಗೆ ಬಾಲ್ಯವಿವಾಹ ತಡೆಯುವುದು, ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಮೂಲಕ ಸುಂದರ ಸಮಾಜದ ಕನಸು ಇದೆ ಎಂದರು.

ಕೆಲಗೇರಿ ಕೆರೆಯನ್ನು ಮಾದರಿ ಕೆರೆಯಾಗಿ ಪರಿವರ್ತಿಸಲು ಕೃಷಿ ವಿವಿ, ಪಾಲಿಕೆ ಹಾಗೂ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ. ಕೆರೆ ನೀರು ಶುದ್ಧೀಕರಿಸಿ, ಕೆರೆ ರಕ್ಷಿಸಿ ಅದರ ಸೌಂದರ್ಯ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತಿದೆ. ನಮ್ಮೂರು, ನಮ್ಮ ಕೆರೆ ಎಂಬ ಯೋಜನೆ ಜಾರಿ ಮಾಡಿ ಜಿಲ್ಲೆಯ 146 ಗ್ರಾಪಂದ 326 ಗ್ರಾಮಗಳ ಕೆರೆಗಳ ಅಭಿವೃದ್ಧಿ ಮಾಡಲಾಗುವುದು. ಬರಗಾಲದ ವೇಳೆ ರೈತರಿಗೆ ಕೃಷಿಗೆ ಹಾಗೂ ಕುಡಿಯಲು ನೀರು ಬಳಕೆಯಾಗುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದ ದಿವ್ಯಪ್ರಭು, ಬಿಆರ್‌ಟಿಎಸ್‌ ಸಮಸ್ಯೆ, ಸರ್ಕಾರದ ಜಮೀನು ಅತಿಕ್ರಮಣ ಸಮಸ್ಯೆ, ಧಾರವಾಡ-ಹುಬ್ಬಳ್ಳಿಯಲ್ಲಿ ಆಗುತ್ತಿರುವ ಪಾರ್ಕಿಂಗ್‌ ಸಮಸ್ಯೆ, ಬೀದಿಬದಿ ವ್ಯಾಪಾರಸ್ಥರ ಸಮಸ್ಯೆ, ವಿದ್ಯಾರ್ಥಿಗಳಿಗೆ ಇರುವ ಹಾಸ್ಟೆಲ್‌ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಧಾರವಾಡ ಜರ್ನಲಿಸ್ಟ್‌ ಗಿಲ್ಡ್‌ ಅಧ್ಯಕ್ಷ ಡಾ. ಬಸವರಾಜ ಹೊಂಗಲ, ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ ಹಾಗೂ ಸದಸ್ಯರು ಇದ್ದರು. ಕೋಚಿಂಗ್‌ ಇಲ್ಲದೇ ಐಎಎಸ್‌..

ಧಾರವಾಡದಲ್ಲಿ ನಾಯಿಕೊಡೆಗಳಂತೆ ಬೆಳೆದಿರುವ ಪಿಯು ಕಾಲೇಜುಗಳು, ನೀಟ್‌, ಸಿಇಟಿ ಕೋಚಿಂಗ್‌ ತರಬೇತಿ ಸಂಸ್ಥೆಗಳು, ಪಿಜಿಗಳ ಬಗ್ಗೆ ದೂರುಗಳು ಬಂದಿವೆ. ಕೆಲವು ಅನಧಿಕೃತವಾಗಿಯೂ ಕೋಚಿಂಗ್‌, ಪಿಜಿಗಳು ನಡೆಯುತ್ತಿವೆ. ಅಲ್ಲಿ ತೆಗೆದುಕೊಳ್ಳುತ್ತಿರುವ ಪ್ರವೇಶ ಶುಲ್ಕ, ನೀಡುತ್ತಿರುವ ತರಬೇತಿ ಗುಣಮಟ್ಟ, ಮಕ್ಕಳಿಗೆ ಯಾವುದೇ ರಕ್ಷಣೆ ಇಲ್ಲದೇ ಇರುವ ಬಗ್ಗೆ ದೂರು ಬಂದಿದ್ದು ಅವುಗಳನ್ನು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಜತೆಗೆ ಯಾವ ತರಬೇತಿ ಇಲ್ಲದೇ ತಾವು ಐಎಎಸ್‌ ಆಗಿದ್ದು, ವಿದ್ಯಾರ್ಥಿಗಳು ಸ್ವಯಂ ಕಲಿಕೆಯಲ್ಲಿ ಹೆಚ್ಚು ನಂಬಿಕೆ ಇಡಬೇಕೆಂದರು.

Share this article