ಕೊಪ್ಪಳ: ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿ ಅಡಗಿದ್ದು, ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಕನಿಷ್ಠ ಅಂಕಗಳ ಸಮೀಪಕ್ಕೆ ಬಂದು ಅನುತ್ತೀರ್ಣರಾಗಿರುವ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸುವ ಮೂಲಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮ ವಹಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳಿಗೆ ಇನ್ನೂ ಒಂದು ತಿಂಗಳು ಮಾತ್ರ ಬಾಕಿಯಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ವಿಶೇಷ ಗಮನ ಹರಿಸಬೇಕು.ಈ ಅವಧಿ ಮಕ್ಕಳಿಗಾಗಿಯೇ ಮೀಸಲಿಡಬೇಕು. ಮಕ್ಕಳಿಗೆ ಪರೀಕ್ಷೆಗೆ ತೇರ್ಗಡೆಗೆ ಅನುಕೂಲವಾಗುವಂತಹ ಸಾಮಾನ್ಯ ಜ್ಞಾನ ಹೇಳಿಕೊಡಬೇಕು. ವಿಶೇಷ ತರಗತಿಗಳ ಮೂಲಕ ಕಲಿಕಾ ಗುಣಮಟ್ಟದ ಹೆಚ್ಚಳಕ್ಕೆ ಕ್ರಮವಹಿಸಬೇಕು. ಶಿಕ್ಷಕರು ಪ್ರಾಮಾಣಿಕ ಪ್ರಯತ್ನ, ಚಿಂತನೆಗಳಿಂದ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ಮಕ್ಕಳು ತಮ್ಮ ತಂದೆ-ತಾಯಿಗೆ ನೀಡುವ ಗೌರವಕ್ಕಿಂತಲೂ ಹೆಚ್ಚಾಗಿ ಗುರುಗಳಿಗೆ ಗೌರವ ನೀಡುತ್ತಾರೆ. ಜೀವ ಉಳಿಸುವ ಶಕ್ತಿ ವೈದ್ಯರ ಕೈಯಲ್ಲಿದ್ದರೆ, ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಗುರುಗಳಲ್ಲಿದೆ. ಈ ನಿಟ್ಟಿನಲ್ಲಿ ತಾವುಗಳು ವಿದ್ಯಾರ್ಥಿಗಳಿಗೆ ತಮ್ಮ ಮಕ್ಕಳಂತೆ ವಿಶೇಷ ಕಾಳಜಿ ವಹಿಸಬೇಕು. ಭವಿಷ್ಯದಲ್ಲಿ ಮಕ್ಕಳು ಉನ್ನತ ಮಟ್ಟದಲ್ಲಿ ಬೆಳೆದಾಗ, ಆ ಕೀರ್ತಿ ನಿಮಗೆ ಸಲ್ಲುತ್ತದೆ.ಶೇ.100 ರಷ್ಟು ಫಲಿತಾಂಶ ಬರುವ ಶಾಲೆಗೆ ಬಹುಮಾನ ನೀಡಿ ಆ ಶಾಲೆಯ ಮುಖ್ಯೋಪಾಧ್ಯಯರಿಗೆ ಮತ್ತು ಉತ್ತಮ ಸ್ಥಾನ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಬಹಳ ಮುಖ್ಯ, ವಿದ್ಯಾರ್ಥಿಗಳು ಜೀವನದ ತಿರುವು ಇದಾಗಿದೆ. ಒಂದನೇ ಮತ್ತು ಎರಡನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರನ್ನು ಉತ್ತೀರ್ಣ ಮಾಡಲು ಹೆಚ್ಚಿನ ಕ್ರಮ ವಹಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ.ಆದಷ್ಟ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಯನ ಮತ್ತು ಬೋಧನೆ ಮಾಡಿ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಬೇಕು ಎಂದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಮಾತಾನಾಡಿ, ವಿದ್ಯಾರ್ಥಿಗಳು ಯಾವ ವಿಷಯ ಕಷ್ಟ ಅಂತ ಹೇಳುತಾರೆ, ಅಂತಹ ವಿಷಯ ಮತ್ತೆ ಮತ್ತೆ ಅವರಿಗೆ ಹೇಳಿ ಕೊಡಿ. ಜಿಲ್ಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಕ್ರಮವಹಿಸಿ. ಪೂರ್ವ ಸಿದ್ಧತಾ ಪರೀಕ್ಷೆಗೆ ಯಾವೊಬ್ಬ ವಿದ್ಯಾರ್ಥಿ ಕೂಡ ಗೈರು ಹಾಜರಿಯಲ್ಲಿ ಇರದಂತೆ ಸಹ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಷಯ ಪರಿವೀಕ್ಷಕರು, ವಿವಿಧ ಪ್ರೌಢ ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.