'ಬಿಜೆಪಿಯೇತರ ಸರ್ಕಾರದ ರಾಜ್ಯಗಳಲ್ಲಿ ಪಾಕಿಸ್ತಾನಿಯರನ್ನು ಗುರುತಿಸಿ ಹೊರ ಹಾಕಿ'

KannadaprabhaNewsNetwork |  
Published : May 06, 2025, 12:15 AM ISTUpdated : May 06, 2025, 01:15 PM IST
3 | Kannada Prabha

ಸಾರಾಂಶ

 ಪ್ರಧಾನಿ ಮೋದಿಯವರು ಉಗ್ರರನ್ನು ಸದೆಬಡಿಯುವ ಕೆಲಸ ಮಾಡುತ್ತಿದ್ದು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತಿದ್ದಾರೆ  .

 ಮೈಸೂರು :  ಮೈಸೂರಿನಲ್ಲಿರುವ ಪಾಕಿಸ್ತಾನೀಯರನ್ನು ಗುರುತಿಸಿ ಕೂಡಲೇ ಹೊರಹಾಕಬೇಕು ಎಂದು ನಗರ ಬಿಜೆಪಿ ಅಧ್ಯಕ್ಷ ಎಲ್‌. ನಾಗೇಂದ್ರ ಒತ್ತಾಯಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಲ್ಲಿ ಪಾಕಿಸ್ತಾನಿಯರನ್ನು ಪತ್ತೆಹಚ್ಚಿ ಹೊರಹಾಕುವ ಕೆಲಸ ಆಗುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. 

ಕಾಶ್ಮೀರದ ಪೆಹಲ್ಗಾಂನಲ್ಲಿ ಭಯೋತ್ಪಾದಕರು ಧರ್ಮ ಕೇಳಿ ಪ್ರವಾಸಿಗರನ್ನು ಧಾರುಣವಾಗಿ ಹತ್ಯೆ ಮಾಡಿದ್ದಾರೆ. ದೇಶದ ಜನ ಈ ಹತ್ಯಾಕಾಂಡವನ್ನು ಅರಗಿಸಿಕೊಳ್ಳಲೂ ಸಾಧ್ಯವಿಲ್ಲ. ಪ್ರಧಾನಿ ಮೋದಿಯವರು ಉಗ್ರರನ್ನು ಸದೆಬಡಿಯುವ ಕೆಲಸ ಮಾಡುತ್ತಿದ್ದು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನೀಯರನ್ನು ದೇಶದಿಂದ ಕಳುಹಿಸಲು ಎಲ್ಲಾ ರಾಜ್ಯಗಳಿಗೂ ಸೂಚಿಸಿದ್ದಾರೆ. ಆದರೆ, ಬಿಜೆಪಿಯೇತರ ಸರ್ಕಾರಗಳು ಈ ಕೆಲಸ ಮಾಡುತ್ತಿಲ್ಲ. ರಾಜ್ಯದ ವಿವಿಧೆಡೆಗಳಲ್ಲಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ಹೊರ ಹಾಕಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ವೀಸಾ ಅವಧಿ ಮುಗಿದಿದ್ದರೂ ಇಲ್ಲಿಯೇ ನೆಲೆಸಿರುವ ಪಾಕಿಸ್ತಾನಿಯರನ್ನು ಪತ್ತೆ ಹಚ್ಚುವ ಕೆಲಸ ಆಗಬೇಕು. ಈ ಸಂಬಂಧ ಪಾಕಿಸ್ತಾನಿಯರನ್ನು ಪತ್ತೆಹಚ್ಚಿ ಹೊರ ಹಾಕುವಂತೆ ಬಿಜೆಪಿ ಪ್ರಕೋಷ್ಠದ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತದೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ಪಾಕಿಸ್ತಾನಿಯರು ಇದ್ದರೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ ಎಂದು ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಸುಪಾರಿ ಸರ್ಕಾರ ಇರುವುದರಿಂದಾಗಿ ರಾಜ್ಯದಲ್ಲಿ ಸುಪಾರಿ ಹತ್ಯೆಗಳು ಹೆಚ್ಚಾಗುತ್ತಿವೆ. ಗೃಹ ಇಲಾಖೆ ಸತ್ತಿದೆ. ಸಮಾಜಘಾತುಕರು ಏನು ಮಾಡಿದರೂ ಬಚಾವಾಗಬಹುದು ಎಂದು ನಂಬಿಕೆ ಹೆಚ್ಚಾಗಿದೆ. ಪೊಲೀಸ್ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅವರು ಕಿಡಿ ಕಾರಿದರು.ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಭಾರತದಲ್ಲಿ ಉಳಿದುಕೊಂಡಿರುವ ಪಾಕಿಸ್ತಾನಿಯರನ್ನು ಹಿಂದಕ್ಕೆ ಕಳುಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

 ಕರ್ನಾಟಕದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಹೊರಹಾಕಲು ರಾಜ್ಯ ಸರ್ಕಾರ ಮುಂದಾಗಬೇಕು. ವಿಧಾನಮಂಡಲದ ಅಧಿವೇಶನದಲ್ಲೂ ಶಾಸಕ ಮಾನಪ್ಪ ವಜ್ಜಲ್ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶದ ಪ್ರಜೆಗಳ ಮಾಹಿತಿ ನೀಡುವಂತೆ ಕೇಳಿದ್ದರೂ, ಸರ್ಕಾರ ಈವರೆಗೂ ಸೂಕ್ತ ಉತ್ತರ ನೀಡಿಲ್ಲ ಎಂದರು

.ರಾಜ್ಯದಾದ್ಯಂತ ಸುಮಾರು 20 ಸಾವಿರ ಮಂದಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಜೆಗಳು ನೆಲೆಸಿರುವ ಸಾಧ್ಯತೆ ಇದೆ. ಇವರನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ರಘು, ಗಿರಿಧರ್, ಮಹೇಶ್‌, ಕಾರ್ಯದರ್ಶಿ ಮೋನಿಕಾ, ಜಿಲ್ಲಾ ವಕ್ತಾರ ದಯಾನಂದ್ ಪಟೇಲ್, ನಗರ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಸಂಚಾಲಕ ಬಿ.ಎಂ. ಸಂತೋಷ್ ಕುಮಾರ್, ಎಸ್ಸಿ ಮೋರ್ಚಾ ಅಧ್ಯಕ್ಷ ಶೈಲೇಂದ್ರ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರಿಯಪ್ಪ, ಸ್ವಾಮಿ, ಮಂಡಲ ಅಧ್ಯಕ್ಷ ದಿನೇಶ್ ಗೌಡ, ಪೈ.ಟಿ. ರವಿ, ರಾಕೇಶ್ ಭಟ್ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ