ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ರವರ ಕನಸಿನ ಕೂಸಾಗಿದ್ದ ಪುರ ಯೋಜನೆಯನ್ನು ಸಂಪಿಗೆಯ ಗೌರಮ್ಮ ರುದ್ರಯ್ಯ ಮಕ್ಕಳ ಕಲ್ಯಾಣ ಟ್ರಸ್ಟ್ ತಮ್ಮ ಸಂಪಿಗೆ ಗ್ರಾಮದಲ್ಲಿ ಸಂಪಿಗೆ ಸ್ಮಾರ್ಟ್ ವಿಲೇಜ್ ಕಾಂಪ್ಲೆಕ್ಸ್ ನ್ನು ಲೋಕಾರ್ಪಾಣೆ ಮಾಡುವ ಮೂಲಕ ಅಬ್ದುಲ್ ಕಲಾಂ ರವರ ಕನಸನ್ನು ನನಸು ಮಾಡಿದ್ದಾರೆಂದು ಇಸ್ರೋದ ಮಾಜಿ ಅಧ್ಯಕ್ಷರೂ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆದ ಡಾ.ಎ.ಎಸ್.ಕಿರಣ್ ಕುಮಾರ್ ರವರು ಶ್ಲಾಘಿಸಿದರು. ತಾಲೂಕಿನ ಸಂಪಿಗೆ ಗ್ರಾಮದಲ್ಲಿ ಗೌರಮ್ಮ ರುದ್ರಯ್ಯ ಮಕ್ಕಳ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂಪಿಗೆ ಸ್ಮಾರ್ಟ್ ವಿಲೇಜ್ ಕಾಂಪ್ಲೆಕ್ಸ್ ನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪುಟಾಣಿ ಮಕ್ಕಳಿಗೆ ನಗರ ಪ್ರದೇಶದಲ್ಲಿ ಸಿಗುವ ಆಟೋಟ ಮತ್ತು ವಿದ್ಯಾರ್ಜನೆಗೆ ಪ್ರಾರಂಭದ ಹಂತದಲ್ಲೇ ಸಿಗಬಹುದಾದ ಸೌಲಭ್ಯಗಳು ಗ್ರಾಮಾಂತರ ಪ್ರದೇಶದಲ್ಲೂ ಸಿಗುವಂತಾಗಬೇಕೆಂಬ ಕನಸು ಅಬ್ದುಲ್ ಕಲಾಂ ರವರಿಗೆ ಇತ್ತು. ಈ ಕನಸನ್ನು ಗೌರಮ್ಮ ರುದ್ರಯ್ಯ ನವರ ಕುಟುಂಬ ನೆರವೇರಿಸಿದೆ. ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ಸ್ಮಾರ್ಟ್ ವಿಲೇಜ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದರು.ಸ್ಮಾರ್ಟ್ ವಿಲೇಜ್ ಕಾಂಪ್ಲೆಕ್ಸ್ ನ್ನು ಉದ್ಘಾಟಿಸಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾರ್ಯಕ್ರಮ ಶ್ಲಾಘನೀಯ. ಈ ಕಾರ್ಯಕ್ರಮ ಮಾಡಿ ಇತರರಿಗೆ ಮಾದರಿಯಾಗಿರುವ ರುದ್ರಯ್ಯ ಕುಟುಂಬಕ್ಕೆ ಭಾರತ ಸರ್ಕಾರದ ಪರವಾಗಿ ಗೌರವ ಸಲ್ಲಿಸುವುದಾಗಿ ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ತಾಲೂಕಿನ ಸಂಪಿಗೆಯಲ್ಲಿ ರುದ್ರಯ್ಯನವರ ಕುಟುಂಬ ನಿರ್ಮಾಣ ಮಾಡಿರುವ ಸ್ಮಾರ್ಟ್ ವಿಲೇಜ್ ಕಾಂಪ್ಲೆಕ್ಸ್ ವಿಶಿಷ್ಠವಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಗ್ರಾಮದ ಹಾಗೂ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಸಲವಾಗಿ ಮಾಡಿರುವ ಸೇವೆ ಅನನ್ಯ. ಇದರ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ಮಾರ್ಟ್ ವಿಲೇಜ್ ಕಾಂಪ್ಲೆಕ್ ನ ನಿರ್ಮಾತೃ ಸದಾನಂದ ಮೂರ್ತಿ, ಹಿರಿಯ ರಾಜಕಾರಣಿ ಚೌದ್ರಿ ಟಿ ರಂಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎಚ್. ಶಿವಲಿಂಗಮೂರ್ತಿ, ಉಪಾಧ್ಯಕ್ಷೆ ಶಮಂತಕುಮಾರಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸಂ.ಕೃ. ಶ್ರೀಧರ್, ಹಿರಿಯ ಪತ್ರಕರ್ತ ಎಸ್. ಆರ್. ಆರಾಧ್ಯ, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಮೇಶ್, ಸಂಪಿಗೆ ವಿನೋದ್, ಟ್ರಸ್ಟ್ ನ ಗೌರವಾಧ್ಯಕ್ಷ ಎಸ್.ಟಿ.ಮಲ್ಲಿಕಾರ್ಜುನ್ (ದೇವರಾಜು), ವಿಜಯ್, ಮತ್ತು ಸಂಗಮ್ ಇದ್ದರು. ಈ ಸಂದರ್ಭದಲ್ಲಿ ಇಸ್ರೋದ ಹಿರಿಯ ವಿಜ್ಞಾನಿ ಕಿರಣ್ ಕುಮಾರ್ ರವರು ಪುಟಾಣಿ ಮಕ್ಕಳೊಂದಿಗೆ ಚೆಸ್, ಟೇಬಲ್ ಟೆನ್ನಿಸ್, ಕೇರಂ ಸೇರಿದಂತೆ ಇನ್ನಿತರೆ ಆಟಗಳನ್ನು ಆಡಿದುದು ನೆರದಿದ್ದವರಿಗೆ ಮುದ ನೀಡಿತು. ಈ ಸಂಪಿಗೆ ಸ್ಮಾರ್ಟ್ ವಿಲೇಜ್ ಕಾಂಪ್ಲೆಕ್ಸ್ ನಲ್ಲಿ ಸಮುದಾಯ ಭವನ, ಪ್ರಾರ್ಥನೆ ಮತ್ತು ಪ್ರಸಾದ ಮಂದಿರ, ಒಳಾಂಗಣ ಮಕ್ಕಳ ಆಟ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ, ಆಧುನಿಕ ಅಡುಗೆ ಮತ್ತು ಭೋಜನಾಲಯ, ಮಕ್ಕಳ ಹೊರಾಂಗಣ ಆಟದ ಪ್ರದೇಶ, ಒಳಾಂಗಣ ಆಟದ ಸೌಲಭ್ಯಗಳು, ಹಸಿರು ಉದ್ಯಾನವನ, ಹೊರಾಂಗಣದಲ್ಲಿ ಜಿಮ್ ಸೌಲಭ್ಯ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸರ್ವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಕಾರ್ಯಕ್ರಮದ ನಿರೂಪಣೆಯನ್ನು ಷಣ್ಮುಖ ಹೊನ್ನಶೆಟ್ಟಪ್ಪ ನಿರ್ವಹಿಸಿದರು.