ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಮೂನೆ 50 ಅಡಿ ಈ ಹಿಂದೆ ಅಕ್ರಮ- ಸಕ್ರಮಕ್ಕೆ ಸಲ್ಲಿಸಿರುವ ನೂರಾರು ರೈತರ ಅರ್ಜಿಗಳನ್ನು ತಾಲೂಕು ದರಕಾಸು ಸಮಿತಿ ಸದಸ್ಯರು ಸ್ವೀಕರಿಸಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಹೊರ ಆವರಣದಲ್ಲಿ ತಾಲೂಕು ದರಕಾಸು ಸಮಿತಿ ಸದಸ್ಯ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಟೇಬಲ್ ಹಾಕಿಕೊಂಡು ಕುಳಿತ ದರಕಾಸು ಸಮಿತಿ ಸದಸ್ಯರು ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ ನಿರಂತರವಾಗಿ ನಮೂನೆ 50 ಅಡಿ ಅರ್ಜಿ ಸಲ್ಲಿಸಿ ತಾವು ಉಳುಮೆ ಮಾಡುತ್ತಿರುವ ಭೂಮಿ ಸಕ್ರಮಾತಿಯಿಂದ ವಂಚಿತರಾಗಿರುವ ನೂರಾರು ರೈತರ ಅರ್ಜಿ ಸ್ವೀಕರಿಸಿದರು.
ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯನ್ನು ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಭೂ ಸ್ವಾಧೀನದಲ್ಲಿರುವ ರೈತರ ಅನುಕೂಲಕ್ಕಾಗಿ ಸರ್ಕಾರ 1992 ರಲ್ಲಿ ಅಕ್ರಮ ಸಕ್ರಮಕ್ಕಾಗಿ ನಮೂನೆ 50 ಅಡಿ ಅರ್ಜಿ ಆಹ್ವಾನಿಸಿತ್ತು. ಅದರಂತೆ ತಾಲೂಕಿನ ಸಾವಿರಾರು ರೈತರು ತಾವು ಸ್ವಾಧೀನದಲ್ಲಿರುವ ಸರ್ಕಾರಿ ಭೂಮಿ ಸಕ್ರಮಾತಿಗಾಗಿ ಅಕ್ರಮ-ಸಕ್ರಮ ಸಮಿತಿ (ದರಕಾಸು ಸಮಿತಿ) ಮುಂದೆ ಅರ್ಜಿ ಸಲ್ಲಿಸಿದ್ದರು.ನಿಗಧಿತ ಸಮಯದಲ್ಲಿ ದರಕಾಸು ಸಮಿತಿ ಮುಂದೆ ಇದ್ದ ಅರ್ಜಿಗಳು ವಿಲೇ ಆಗಿರಲ್ಲಿಲ್ಲ. ಸರ್ಕಾರದ ಅಕ್ರಮ-ಸಕ್ರಮ ಸಮಿತಿ ಮುಂದೆ ನಮೂನೆ 50, 53 ಮತ್ತು 57 ರ ಅರ್ಜಿಗಳು ಪರಿಶೀಲನೆಗೆ ಬರಬೇಕಾಗಿತ್ತು. ಆದರೆ, ಈ ಹಿಂದೆ ತಾಲೂಕಿನ ತಹಸೀಲ್ದಾರ್ ಆಗಿದ್ದ ಒಬ್ಬರು ನಮೂನೆ 50ರ ಅಡಿಯಲ್ಲಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದ ಎಲಾ ರೈತರ ಅರ್ಜಿಗಳನ್ನು ವಿಲೇ ಮಾಡಿದ್ದು, ನಮೂನೆ 50ರ ಯಾವುದೇ ಅರ್ಜಿಗಳು ಬಾಕಿಯಿಲ್ಲ ಎಂದು ತಪ್ಪು ವರದಿ ಮಾಡಿದ್ದಾರೆ.
ಇದರ ಪರಿಣಾಮ ನಮೂನೆ 50ರ ಅಡಿಯಲ್ಲಿ ಸಲ್ಲಿಕೆಯಾದ ರೈತರ ಯಾವುದೇ ಅರ್ಜಿಗಳನ್ನು ಅಕ್ರಮ-ಸಕ್ರಮ ಸಮಿತಿ ಮುಂದೆ ತರಲಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ರಾಸುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳವನ್ನು ಮೀಸಲಿಡಬೇಕೆಂಬ ಸುಪ್ರಿಂ ಕೋರ್ಟ್ ಆದೇಶದಿಂದ ನಮೂನೆ 53 ಮತ್ತು 57 ರ ಅರ್ಜಿಗಳ ವಿಲೇ ಮಾಡುವಿಕೆಗೂ ಅಡಚಣೆಯಾಗಿದೆ.ಹಿಂದಿನ ತಹಸೀಲ್ದಾರ್ ತಪ್ಪು ವರದಿಯಿಂದ ನಮೂನೆ 50ರ ಅಡಿ ಅಕ್ರಮ-ಸಕ್ರಮಕ್ಕೆ ಅರ್ಜಿ ಹಾಕಿರುವ ರೈತರು ವಂಚಿತರಾಗಿದ್ದು, ಇದನ್ನು ಮನಗಂಡ ಸಮಿತಿ ಸದಸ್ಯರಾದ ಬಿ.ಎಲ್.ದೇವರಾಜು, ಬಸ್ತಿ ರಂಗಪ್ಪ ಮತ್ತು ಕೋಮಲ ರಾಯಪ್ಪಗೌಡ ಅವರು ತಹಸೀಲ್ದಾರರ ತಪ್ಪು ವರದಿಯಿಂದ ಅನ್ಯಾಯಕ್ಕೊಳಗಾದವರ ನೆರವಿಗೆ ಮುಂದಾಗುವುದಾಗಿ ತಿಳಿಸಿದ್ದರು. ಅದರಂತೆ ಇಂದು ತಾಲೂಕು ಆಡಳಿತ ಸೌಧದ ಮುಂದೆ ಅರ್ಜಿ ಸ್ವೀಕಾರ ಆರಂಭಿಸಿದರು.
ಇಂದು ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಹಿಂದಿನ ತಹಸೀಲ್ದಾರರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲು ಒತ್ತಾಯಿಸಲಾಗುವುದೆಂದು ಬಿ.ಎಲ್.ದೇವರಾಜು ತಿಳಿಸಿದರು.ಈ ವೇಳೆ ಸಮಿತಿ ಸದಸ್ಯರಾದ ಬಸ್ತಿ ರಂಗಪ್ಪ ಮತ್ತು ಸದಸ್ಯೆ ಕೋಮಲ ಅವರ ಪತಿ ಗುಡುಗನಹಳ್ಳಿ ರಾಯಪ್ಪ ಇದ್ದರು.