ತೆರೆಮರೆಯ ಕಲಾವಿದರ ಗುರುತಿಸಿ ಪರಿಚಯಿಸಿ

KannadaprabhaNewsNetwork |  
Published : Nov 14, 2026, 02:15 AM IST
ಪ್ರಸಿದ್ಧ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ರಮ್ಯಾ ದಂಪತಿ, ಸ್ತ್ರೀ ವೇಷಧಾರಿ ಸದಾಶಿವ ಭಟ್ಟ ಮಲವಳ್ಳಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕಲಾವಿದರಿಗೆ, ಕಲಾಭಿಮಾನಿಗಳು ನೀಡುವ ಸನ್ಮಾನದಲ್ಲಿ ಅಭಿಮಾನ, ಪ್ರೀತಿ, ಪ್ರೋತ್ಸಾಹ, ಕಲಾಮಾತೆಯ ಆಶೀರ್ವಾದವೂ ಸೇರಿರುತ್ತದೆ.

ಯಲ್ಲಾಪುರ: ಪರಿಪೂರ್ಣವಾದ ಕಲೆಯಾದ ಯಕ್ಷಗಾನದ ಪ್ರದರ್ಶನ ದೇವತಾರಾಧನೆ ಇದ್ದಂತೆ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ತಾಲೂಕಿನ ಮಾಗೋಡ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಗಣಪತಿ ಭಕ್ತವೃಂದವರಿಂದ ಕಾರ್ತಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸಿದ್ಧ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ರಮ್ಯಾ ದಂಪತಿ, ಸ್ತ್ರೀ ವೇಷಧಾರಿ ಸದಾಶಿವ ಭಟ್ಟ ಮಲವಳ್ಳಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ರಾಮಕೃಷ್ಣ ಹೆಗಡೆ ಹಿಲ್ಲೂರು ಮಾತನಾಡಿ, ಕಲಾವಿದರಿಗೆ, ಕಲಾಭಿಮಾನಿಗಳು ನೀಡುವ ಸನ್ಮಾನದಲ್ಲಿ ಅಭಿಮಾನ, ಪ್ರೀತಿ, ಪ್ರೋತ್ಸಾಹ, ಕಲಾಮಾತೆಯ ಆಶೀರ್ವಾದವೂ ಸೇರಿರುತ್ತದೆ. ಪ್ರಜ್ಞಾವಂತ ಕಲಾಭಿಮಾನಿಗಳು, ಸಂಘಟಕರು, ಕಲಾವಿದರಿಂದ ಕೂಡಿದ ಈ ಭಾಗದಲ್ಲಿ ದೊರಕಿರುವ ಸನ್ಮಾನ ಸಂತಸ ತಂದಿದೆ ಎಂದರು.

ಸದಾಶಿವ ಭಟ್ಟ ಮಲವಳ್ಳಿ ಮಾತನಾಡಿ, ಪ್ರಸಿದ್ಧ ಕಲಾವಿದರನ್ನು ಸನ್ಮಾನಿಸುವ ಕ್ರಮ ವಿಶೇಷವಲ್ಲ. ಆದರೆ ಎಲೆಮರೆಯ ಕಾಯಿಯಂತೆ ಕಲಾಸೇವೆಯಲ್ಲಿ ತೊಡಗಿದವರನ್ನೂ ಗುರುತಿಸಿ ಸನ್ಮಾನಿಸುವ ಪರಿಪಾಠ ಮಾದರಿಯಾಗಿದೆ. ಕಲಾವಿದ, ಸಂಘಟಕ ಹಾಗೂ ಪ್ರೇಕ್ಷಕರ ಒಗ್ಗೂಡುವಿಕೆಯ ಪ್ರಯತ್ನದಿಂದ ಮಾತ್ರ ಯಕ್ಷಗಾನದ ಉಳಿವು ಸಾಧ್ಯ ಎಂದರು.

ಹಿರಿಯ ವೈದಿಕ, ಅರ್ಥಧಾರಿ ವೇ. ನಾರಾಯಣ ಭಟ್ಟ ಮೊಟ್ಟೆಗದ್ದೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ಆರ್.ಎಸ್. ಭಟ್ಟ, ರಾಮಕೃಷ್ಣ ಭಟ್ಟ ಮಾಗೋಡ ಮಾತನಾಡಿದರು. ವಿದ್ಯಾ ಭಟ್ಟ ಹಾಗೂ ಡಾ. ಶಿವರಾಮ ಭಟ್ಟ ಹಶಿನಮನೆ ಸನ್ಮಾನಿತರ ಕುರಿತು ಅಭಿನಂದನಾ ನುಡಿಗಳನ್ನಾಡಿದರು.

ಚಂದಗುಳಿ ದೇವಸ್ಥಾನದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ದೇವಸ್ಥಾನದ ಮೊಕ್ತೆಸರ ಗೋಪಾಲಕೃಷ್ಣ ಭಟ್ಡ, ಪ್ರಮುಖರಾದ ಟಿ.ವಿ. ಭಾಗ್ವತ, ಶಿವಾನಂದ ನಾಯ್ಕ, ಮಹಾಬಲೇಶ್ವರ ಹೆಗಡೆ, ವೆಂಕಟರಮಣ ಭಾಗ್ವತ ಇತರರಿದ್ದರು.

ನರಸಿಂಹ ಭಟ್ಟ ಕುಂಕಿಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಜೋಶಿ ನಿರ್ವಹಿಸಿ, ವಂದಿಸಿದರು. ನಂತರ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಂಡ ಪಾಂಚಜನ್ಯ ಹಾಗೂ ದ್ರೌಪದಿ ಪ್ರತಾಪ ಯಕ್ಷಗಾನ ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ