ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರನ್ನು ಗುರುತಿಸಿ: ಶ್ರೀರಾಮ್ ಅಚಂತ್

KannadaprabhaNewsNetwork |  
Published : May 23, 2024, 01:01 AM IST
೨೨ಎಚ್‌ವಿಆರ್2 | Kannada Prabha

ಸಾರಾಂಶ

ಹಾವೇರಿ ನಗರದ ಶ್ರೀ ಅಕಾಡೆಮಿ ಎಜುಕೇಷನಲ್ ಟ್ರಸ್ಟ್ ಮತ್ತು ಶ್ರೀ ಅಕಾಡೆಮಿಯ ಪರಿವರ್ತನಾ ಪಿಯು ಕಾಲೇಜು ವತಿಯಿಂದ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಹಾವೇರಿ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸಾಮಾಜಿಕ ಸೇವೆಗೆ ಗೌರವ ಸಲ್ಲಿಸಲು ನಮ್ಮ ಸಂಸ್ಥೆಗೆ ಅವಕಾಶ ಒದಗಿ ಬಂದಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀ ಅಕಾಡೆಮಿಯ ಪರಿವರ್ತನಾ ಪಿಯು ಕಾಲೇಜಿನ ಅಧ್ಯಕ್ಷ, ಸಿಇಒ ಶ್ರೀರಾಮ್ ಅಚಂತ್ ಹೇಳಿದರು.

ನಗರದ ಶ್ರೀ ಅಕಾಡೆಮಿ ಎಜುಕೇಷನಲ್ ಟ್ರಸ್ಟ್ ಮತ್ತು ಶ್ರೀ ಅಕಾಡೆಮಿಯ ಪರಿವರ್ತನಾ ಪಿಯು ಕಾಲೇಜು ವತಿಯಿಂದ ಏರ್ಪಡಿಸಿದ್ದ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ತಮ್ಮ ಜೀವನದಲ್ಲಿ ಒಂದು ಉತ್ತಮ ದಿನವಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ ಮತ್ತು ವಿವಿಧ ಕ್ಷೇತ್ರಗಳ ೩೫೦ ಜನರನ್ನು ಖಾಸಗಿ ಆಡಳಿತ ಮಂಡಳಿಯಿಂದ ಸನ್ಮಾನಿಸುತ್ತಿರುವುದು ಇದೇ ಮೊದಲು. ಈ ಗೌರವದ ಉದ್ದೇಶವು ಅವರ ಸಮಾಜ ಸೇವೆಗೆ ಬೆಂಬಲ-ಮೆಚ್ಚುಗೆ ಮತ್ತು ಸಮಾಜಕ್ಕಾಗಿ ಅವರ ಸೇವೆಗೆ ಸಮರ್ಪಿತ ಬದ್ಧತೆಯಾಗಿದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಪಾಲಕರು ಕಾಲೇಜು ಶುಲ್ಕವನ್ನು ಪಾವತಿಸಲು ಪರದಾಡುವಂತಾಗಿದೆ. ಆದ್ದರಿಂದ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡಲು ನಮ್ಮ ಸಂಸ್ಥೆ ಮುಂದೆ ಬಂದಿದ್ದು, ನೀಟ್ ಮತ್ತು ಕೆ-ಸೆಟ್ ಕೋಚಿಂಗ್ ಸೇರಿದಂತೆ ಕಾಲೇಜಿನ ಶಿಕ್ಷಣವನ್ನು ಗುಣಮಟ್ಟದಿಂದ ನೀಡಲಾಗುತ್ತಿದೆ. ನಮ್ಮಲ್ಲಿ ಓದಿದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ, ಮೊತ್ತವನ್ನು ವಾಪಸ್ ನೀಡುವುದಾಗಿ ಘೋಷಿಸಿದ ಅವರು, ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದರೆ ಯಾವ ವಿದ್ಯಾರ್ಥಿಯೂ ಅನುತ್ತೀರ್ಣರಾಗಲು ಸಾಧ್ಯವಿಲ್ಲ ಎಂದರು.

ಶಿಗ್ಗಾಂವಿ ಕೆಎಸ್‌ಆರ್‌ಪಿ ೧೦ನೇ ಬೆಟಾಲಿಯನ್ ಕಮಾಂಡೆಂಟ್ ಸುಂದರರಾಜು ಅವರು ಶಿಕ್ಷಣದ ಸಾಧಕ-ಬಾಧಕಗಳ ಕುರಿತು ಮಾತನಾಡಿ, ಸಮಾಜ ಸೇವಾ ಕಾರ್ಯದಲ್ಲಿ ತೊಡಗಿರುವವರನ್ನು ಗುರುತಿಸಿ ಸನ್ಮಾನಿಸುತ್ತಿರುವ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ ಎಂದರು.

ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ.ಸಿ. ಮಾತನಾಡಿ, ಶಿಕ್ಷಣವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಕ್ಕಳಿಗೂ ಭಾವನೆಗಳಿದ್ದು, ಅವುಗಳನ್ನು ನಿಭಾಯಿಸುವ ಹೃದಯವಂತ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ. ಉಜ್ವಲ ಭವಿಷ್ಯಕ್ಕಾಗಿ ತಮ್ಮ ಮಕ್ಕಳನ್ನು ಈ ಕಾಲೇಜಿಗೆ ಸೇರಿಸುವಂತೆ ಪೋಷಕರಲ್ಲಿ ಮನವಿ ಮಾಡಿದರು.

ಸಂಸ್ಥೆ ವತಿಯಿಂದ ೩೫೦ ಸಾಮಾಜಿಕ ಕಾರ್ಯಕರ್ತರನ್ನು ಗೌರವಿಸಲಾಯಿತು. ಇದೇ ವೇಳೆ ಸಂಸ್ಥೆಯಲ್ಲಿ ಜೂ. ೧೦ರಿಂದ ಪ್ರಾರಂಭವಾಗುವ ದೀರ್ಘಾವಧಿಯ ನೀಟ್ ಕೋಚಿಂಗ್‌ನ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಅಕಾಡೆಮಿಯ ಪರಿವರ್ತನಾ ಪಿಯು ಕಾಲೇಜಿನ ನಿರ್ದೇಶಕ ಸಂತೋಷ ನವಲೆ, ಕಾರ್ಯದರ್ಶಿ ಮತ್ತು ಪ್ರಾಂಶುಪಾಲರಾದ ಅರ್ಚನಾ ನವಲೆ, ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ