ಸಾಹಿತ್ಯ ಸಂಸ್ಕೃತಿ ಅನುಸಂಧಾನ’ ಶೀರ್ಷಿಕೆಯಡಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ಶಿವಮೊಗ್ಗಭಾಷೆ ನಶಿಸಿದರೆ ಒಂದು ಸಂಸ್ಕೃತಿಯೇ ನಾಶವಾದಂತೆ ಎಂದು ಬಂಜಾರ ಸಂಸ್ಕ್ರತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್.ಗೋವಿಂದಸ್ವಾಮಿ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯ, ಬೆಂಗಳೂರು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ’ಸಾಹಿತ್ಯ ಸಂಸ್ಕೃತಿ ಅನುಸಂಧಾನ’ ಶೀರ್ಷಿಕೆಯಡಿಯ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಂಜಾರ ಸಮುದಾಯದಲ್ಲಿ ಸಂಶೋಧನೆಗಳು, ಬರಹಗಾರರು ವಿರಳವಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಮುದಾಯ ಈಗ ತಾನೆ ಕಣ್ಣು ತೆರೆಯುತ್ತಿದೆ. ಇದು ಬದಲಾಗಬೇಕು. ಕಟ್ ಅಂಡ್ ಪೇಸ್ಟ್ ಸಾಹಿತ್ಯ ಸಂಸ್ಕೃತಿಯಲ್ಲಿ ನಾವಿದ್ದೇವೆ. ಬಂಜಾರ ಸಮುದಾಯದ ಮೂಲದ ಕುರಿತ ಸಂಶೋಧನೆ ಆಗಬೇಕಿದೆ. ಇದಕ್ಕೆ ಸೂಕ್ತವಾದ ಉತ್ತರ ಲಭಿಸಿಲ್ಲ. ಬಂಜಾರ ಸಮುದಾಯದ ಅನೇಕ ಪ್ರಥಮಗಳಿವೆ. ಆದರೆ, ಬ್ರಿಟೀಷರು ದಬ್ಬಾಳಿಕೆಯಿಂದ ಸಮುದಾಯ ನಲುಗಿ ಹೋಗಿದೆ. ಅನೇಕ ಕಾನೂನುಗಳನ್ನು ತಂದು ಸಮುದಾಯ ಮೂಲೆ ಗುಂಪಾಗಿದೆ ಎಂದರು.ಒಂದು ನಾಟಕ ಪ್ರದರ್ಶನಗೊಂಡರು ಅದಕ್ಕೆ ಒಂದು ಉದ್ದೇಶ ಇರಬೇಕು. ಅದೇ ರೀತಿ ಸಾಹಿತ್ಯ ಎಂದಿಗೂ ಸಹ ಸತ್ಯವಾಗಿರಬೇಕು ಎಂದ ಅವರು, ಸಮುದಾಯದ ಸಂಸ್ಕೃತಿ, ಇತಿಹಾಸವನ್ನು ದಾಖಲಿಸಿ ಮುಂದಿನ ತಲೆಮಾರಿಗೆ ದಾಟಿಸಬೇಕು ಎಂದರು.ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಜಿ.ಪ್ರಶಾಂತ್ ನಾಯಕ್ ಮಾತನಾಡಿ, ಹೊಸ ತಲೆ ಮಾರಿನ ಜೊತೆಗೆ ಮಾತನಾಡಲು ಕುಳಿತರೆ ಏನು ಮಾತನಾಡಬೇಕು, ಏನನ್ನು ಹೇಳಿಕೊಡಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಇಲ್ಲಿ ಮೊಬೈಲ್ ಗೀಳಿಗೆ ಸಿಲುಕಿದ ಯುವ ಪೀಳಿಗೆ ದಾರಿ ತಪ್ಪುತ್ತಿದೆ. ಆದರೆ, ಯಾವುದೇ ಮಾಧ್ಯಮಗಳಿಲ್ಲದ ಕಾಲ ಘಟ್ಟದಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಬಂದ ಸಾಹಿತಿ ಲಲಿತಾ ನಾಯಕ್ ಹಾಗೂ ಸಣ್ಣರಾಮಣ್ಣನ್ನವರ ಕೃತಿಗಳು ಎಲ್ಲಾ ತಲೆ ಮಾರಿಗೂ ಮಾದರಿಯಾಗಿ ನಿಲ್ಲುತ್ತವೆ. ಆದ್ದರಿಂದ, ಯುವ ಜನರು ತಮ್ಮ ಅಸ್ಥಿತ್ವವನ್ನು ಕಂಡುಕೊಳ್ಳಬೇಕು. ಸಾಹಿತ್ಯ ಕೃಷಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯ ಸಂಚಾಲಕ ಕೆ.ಎಚ್.ಉತ್ತಮ್ ಮಾತನಾಡಿ, ಬಂಜಾರ ಸಮುದಾಯದವರು ಅಲೆಮಾರಿಗಳು. ಆದರೆ, ಬಂಜಾರ ಸಮುದಾಯವನ್ನು ಕ್ರಿಮಿನಲ್ ಟ್ರೈಬ್ ರೀತಿ ಕಂಡರು. ಆದರೆ, ಇದ್ಯಾವುದು ಸಹ ದಾಖಲೆಗಳಲ್ಲಿ ಇಲ್ಲ. ಆದ್ದರಿಂದ ಇದನ್ನು ದಾಖಲಿಸುವ ಬಗ್ಗೆ ಸಿದ್ಧತೆ ನಡೆಯುತ್ತಿದೆ ಎಂದರು.ಸಹ್ಯಾದ್ರಿ ಕಲಾ ಕಾಲೇಜು ಪ್ರಭಾರ ಪ್ರಾಚಾರ್ಯ ಪ್ರೊ.ಸಿರಾಜ್ ಅಹಮದ್ ಮಾತನಾಡಿದರು.ಹಿರಿಯ ಸಾಹಿತಿಗಳಾದ ಬಿ.ಟಿ.ಲಲಿತಾ ನಾಯಕ್, ಡಾ.ಸಣ್ಣರಾಮ. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ನಿರ್ದೇಶಕ ಶಿವಾನಂದ ಕೆಳಗಿನಮನಿ, ಬಾಪೂಜಿ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಅಣ್ಣಪ್ಪ ಮಳಿಮಠ ಇದ್ದರು.ಸಹ್ಯಾದ್ರಿ ಕಲಾ ಕಾಲೇಜು ಕನ್ನಡ ವಿಭಾಗ ಸಹ ಪ್ರಾಧ್ಯಾಪಕಿ ಎಂ.ಹಾಲಮ್ಮ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಮೋಹನ್ ಚಂದ್ರಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸಂಚಾಲಕ ಎಂ.ರವಿನಾಯ್ಕ್ ವಂದಿಸಿದರು.