ಕೇಂದ್ರದಲ್ಲಿ ಬಿಜೆಪಿ ಬಂದರೆ ಅಲ್ಪ ಸಂಖ್ಯಾತರ ಮೀಸಲಾತಿಗೆ ಧಕ್ಕೆ

KannadaprabhaNewsNetwork | Published : Apr 7, 2024 1:45 AM

ಸಾರಾಂಶ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸಿ ಬಡವರ, ಅಲ್ಪ ಸಂಖ್ಯಾತರ , ಹಿಂದುಳಿದವರ ಮೀಸಲಾತಿ ತೆಗೆಯುತ್ತಾರೆ ಎಂದು ಕೆಪಿಸಿಸಿ ಎಸ್.ಸಿ. ವಿಭಾಗದ ರಾಜ್ಯ ಸಮಿತಿ ಸದಸ್ಯ ಬಿ.ಎಸ್‌. ಸುಬ್ರಮಣ್ಯ ಎಚ್ಚರಿಕೆ ನೀಡಿದರು.

ಕೆಪಿಸಿಸಿ ಎಸ್.ಸಿ ವಿಭಾಗದ ರಾಜ್ಯ ಸಮಿತಿ ಸದಸ್ಯ ಬಿ.ಎಸ್‌.ಸುಬ್ರಮಣ್ಯ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸಿ ಬಡವರ, ಅಲ್ಪ ಸಂಖ್ಯಾತರ , ಹಿಂದುಳಿದವರ ಮೀಸಲಾತಿ ತೆಗೆಯುತ್ತಾರೆ ಎಂದು ಕೆಪಿಸಿಸಿ ಎಸ್.ಸಿ. ವಿಭಾಗದ ರಾಜ್ಯ ಸಮಿತಿ ಸದಸ್ಯ ಬಿ.ಎಸ್‌. ಸುಬ್ರಮಣ್ಯ ಎಚ್ಚರಿಕೆ ನೀಡಿದರು.

ಶನಿವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸುವ ಮಾತನಾಡಿದ್ದರು. ಕೇಂದ್ರದಲ್ಲಿ 400 ಸ್ಥಾನ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದರೆ ಈ ದೇಶದ ಶೂದ್ರರು, ಅಲ್ಪ ಸಂಖ್ಯಾತರ ಸ್ವಾತಂತ್ರಕ್ಕೆ ಧಕ್ಕೆ ಬರಲಿದೆ. ಅವರ ಮೀಸಲಾತಿ ಕಿತ್ತುಕೊಳ್ಳುತ್ತಾರೆ. ಮುಂದೆ ಬಿಜೆಪಿ ಪಕ್ಷದ ಅಜೆಂಡಾ ಸಹ ಅದೇ ಆಗಿತ್ತು. ಇದನ್ನು ಅನಂತಕುಮಾರ್ ಹೆಗಡೆ ಅವರ ಬಹಿರಂಗ ಪಡಿಸಿದರು ಎಂಬ ಕಾರಣಕ್ಕೇ ಅವರಿಗೆ ಲೋಕಸಭೆ ಚುನಾವಣೆ ಟಿಕೆಟ್‌ ನೀಡಲಿಲ್ಲ ಎಂದರು.

ಮೀಸಲಾತಿ ತೆಗೆದರೆ ದಲಿತರು, ಅಲ್ಪ ಸಂಖ್ಯಾತರು ಸೇರಿದಂತೆ ಎಲ್ಲಾ ಬಡವರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ದಲಿತರು ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಬಡವರಿಗಾಗಿ 5 ಗ್ಯಾರಂಟಿ ಘೋಷಣೆ ಮಾಡಿತ್ತು. ಕೊಟ್ಟ ಮಾತಿನಂತೆ ಅದನ್ನು ಈಡೇರಿಸಿದೆ. ಈ ಎಲ್ಲಾ ಯೋಜನೆಗಳನ್ನು ಮುಂದುವರಿಸಲು ಅನುಕೂಲವಾಗುವಂತೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಳೆದ 10 ವರ್ಷದಿಂದ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿರುವ ಶೋಭ ಕರಂದ್ಲಾಜೆ ಜನಪರ ಕೆಲಸ ಮಾಡಲಿಲ್ಲ. ಕಸ್ತೂರಿ ರಂಗನ್‌ ವರದಿ, ಹುಲಿ ಯೋಜನೆ, ಬಫರ್ ಯೋಜನೆ, ಒತ್ತುವರಿ ಸಮಸ್ಯೆಗಳ ಬಗ್ಗೆ ಸ್ಪಂದಿಸಲಿಲ್ಲ. ಇದರಿಂದ ಬಿಜೆಪಿ ಪಕ್ಷದವರೇ ಗೋ ಬ್ಯಾಕ್‌ ಶೋಭಕ್ಕ ಎಂದು ವಾಪಾಸು ಕಳಿಸಿದ್ದಾರೆ. ಆದರೆ, ಈ ಹಿಂದೆ ಇಲ್ಲಿನ ಸಂಸದರಾಗಿದ್ದ ಜಯಪ್ರಕಾಶ ಹೆಗಡೆ ಅವರು ಅಡಕೆ ಧಾರಣೆ 90 ಸಾವಿರ ರು. ಏರಲು ಕಾರಣರಾಗಿದ್ದರು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಹೆಚ್ಚು ಪರಿಹಾರ ನೀಡುವಂತೆ ಕೇಂದ್ರದ ಮೇಲೆ ಒತ್ತಡ ತಂದು ಯಶಸ್ವಿಯಾಗಿದ್ದರು. ವಿದ್ಯೆ, ವಿನಯ ಎರಡೂ ಇರುವ ಜಯಪ್ರಕಾಶ ಹೆಗ್ಡೆ ಅವರನ್ನು ಗೆಲ್ಲಿಸಬೇಕು. ವಿಧಾನ ಪರಿಷತ್‌ನ ವಿರೋದ ಪಕ್ಷದ ನಾಯಕರಾದ ಕೋಟಾ ಶ್ರೀನಿವಾಸ ಪೂಜಾರಿ ಅದೇ ಸ್ಥಾನದಲ್ಲಿ ಮುಂದುವರಿಯಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುನೀಲ್‌ ಕುಮಾರ್‌, ಕೆ.ಎ.ಅಬೂಬಕರ್‌, ಮಾಜಿ ಉಪಾಧ್ಯಕ್ಷ ತೆರಿಯನ್‌ ಇದ್ದರು.

Share this article