ಬೆಳೆ ಪರಿಹಾರ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

KannadaprabhaNewsNetwork |  
Published : Nov 28, 2025, 03:15 AM IST
ರೈತರಿಗೆ ಬೆಳೆ ಪರಿಹಾರ ಸೇರಿ ಇತರೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ಪಟ್ಟಣದಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಗುರುವಾರ  ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ(ನಡಹಳ್ಳಿ), ಮುಖಂಡರಾದ ಮುನ್ನಾಧಣಿ ನಾಡಗೌಡ, ಕೆಂಚಪ್ಪ ಬಿರಾದಾರ, ಸಂಗಮ್ಮ ದೇವರಳ್ಳಿ, ಸಿದ್ದರಾಜ ಹೊಳಿ ಇತರರಿದ್ದರು. | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ರೈತ, ಜನ ವಿರೋಧಿ ಸರ್ಕಾರವಾಗಿದೆ. ಉತ್ತಮ ಜನಪರ ಯೋಜನೆಗಳನ್ನು ಜಾರಿಗೆ ತರದೇ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ (ನಡಹಳ್ಳಿ) ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ರಾಜ್ಯ ಕಾಂಗ್ರೆಸ್ ಸರ್ಕಾರ ರೈತ, ಜನ ವಿರೋಧಿ ಸರ್ಕಾರವಾಗಿದೆ. ಉತ್ತಮ ಜನಪರ ಯೋಜನೆಗಳನ್ನು ಜಾರಿಗೆ ತರದೇ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ (ನಡಹಳ್ಳಿ) ಆರೋಪಿಸಿದರು.

ತಾಲೂಕು ಬಿಜೆಪಿ ಮಂಡಲ ಹಾಗೂ ರಾಜ್ಯ ರೈತ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಗುರುವಾರ ರೈತರಿಗೆ ಬೆಳೆ ಪರಿಹಾರ ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ರೈತರ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವ್ಯಾಪಕ ಮಳೆ ಸುರಿದ ಪರಿಣಾಮ ಈ ಬಾರಿ ಬೆಳೆ ಸಂಪೂರ್ಣ ನಾಶಗೊಂಡು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. 52 ದಿನಗಳೂ ಗತಿಸಿದರೂ ಈ ಸರ್ಕಾರ ಒಂದು ನಯಾಪೈಸೆ ಹಣವನ್ನು ರೈತರಿಗೆ ನೀಡದೆ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ಕಿಂಚಿತ್ತು ಯೋಚಿಸದೆ ಎಂಟು ಜನ ಸಚಿವರು ಎಲ್ಲಿದ್ದಾರೋ ಏನೋ, ಇವರನ್ನು ಜನರೇ ಹುಡುಕಿಕೊಡಬೇಕಿದೆ. ಇಷ್ಟೊಂದು ದುರಾಡಳಿತ ಸರ್ಕಾರ ನಾವೆಂದು ಕಂಡಿಲ್ಲ ಎಂದು ಹರಿಹಾಯ್ದರು.

ರಾಜ್ಯ ಸರ್ಕಾರ ಕೂಡಲೇ ಹೆಕ್ಟೇರ್‌ಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕು. ಇಲ್ಲವಾದರೆ ಡಿ.8ರಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶದಲ್ಲಿ ವಿಧಾನಸೌಧಕ್ಕೆ ರೈತರು ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈಗಾಗಲೇ ತೊಗರಿ, ಹತ್ತಿ, ಮೆಕ್ಕೆಜೋಳ, ಉಳಾಗಡ್ಡೆ ಬೆಳೆಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಲ್ಲಿ ಖರೀದಿಸಲು ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಖರೀದಿ ಕೇಂದ್ರ ತೆರೆಯಬೇಕು. ಅತೀ ವೃಷ್ಟಿಯಿಂದ ಹಾನಿಗೊಳಗಾದ ಪ್ರತಿ ಹೆಕ್ಟೇರ್‌ ಭೂಮಿಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಪ್ರಕಾರ ರಾಜ್ಯ ಸರ್ಕಾರದ ಖಜಾನೆಯಿಂದ ಕನಿಷ್ಠ ₹20 ಸಾವಿರ ಹೆಚ್ಚುವರಿಯಾಗಿ ಮತ್ತು ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಬಾಳೆ, ದಾಳಿಂಬೆ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಪ್ರತಿ ಹೆಕ್ಟೇರ್‌ ಭೂಮಿಗೆ ಕನಿಷ್ಠ ₹50 ಸಾವಿರ ಹೆಚ್ಚುವರಿಯಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡು ಅರ್ಧಕ್ಕೆ ನಿಂತ ಕೆರೆ ತುಂಬುವ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಗೆ ರಾಜ್ಯ ಸರ್ಕಾರದಿಂದ ವಾರ್ಷಿಕವಾಗಿ ರೈತರಿಗೆ ನೀಡುತ್ತಿದ್ದ ₹4 ಸಾವಿರ ಯೋಜನೆ ಪುನಃ ಜಾರಿಗೊಳಿಸಬೇಕು ಜೊತೆಗೆ ಕನಿಷ್ಠ ದರದಲ್ಲಿ (₹20 ಸಾವಿರ ಠೇವಣಿ) ಬೋರ್‌ವೆಲ್‌ಗಳಿಗೆ ವಿದ್ಯುತ್‌ ಟ್ರಾನ್ಸ್‌ಫಾರ್ಮ್‌ರ, ಉಪಕರಣಗಾದ ಕಂಬ, ತಂತಿ ಸೌಲಭ್ಯ ನೀಡುವ ಯೋಜನೆ ಪುನಃ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಹಕಾರಿ ಬ್ಯಾಂಕ್‌ಗಳಿಂದ ₹10 ಲಕ್ಷದವರೆಗೆ ಸಾಲ, ಚಿಮ್ಮಲಗಿ, ಮುಳವಾಡ ಏತ ನೀರಾವರಿ ಯೋಜನೆಗೆ ಮುಖ್ಯ ಕಾಲುವೆ, ಉಪ ಕಾಲುವೆಗಳ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವ ರೈತರ ಭೂಮಿಗೆ ನೀಡಬೇಕಾದ ಪರಿಹಾರವನ್ನು ಶೀಘ್ರವಾಗಿ ನೀಡುವುದು. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಚಿಮ್ಮಲಗಿ ಮತ್ತು ಮುಳವಾಡ ಹಾಗೂ ನಾಗರಬೆಟ್ಟ ಏತನೀರಾವರಿ ಯೋಜನೆಯ ಈ ಕೂಡಲೇ ಪ್ರಾರಂಭಿಸಿ ರೈತ ಬದುಕು ಹಸನಾಗುವಂತೆ ಮಾಡಬೇಕು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯವಿರುವ 23 ಎಕರೆ ಜಮೀನಿನಲ್ಲಿ ಶ್ವೇತಾಗಾರ, ಉಗ್ರಾಣ, ಶೇಖರಣೆ ಮತ್ತು ರೈತರಿಗೆ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು. ರಾಜ್ಯ ಸರ್ಕಾರ ತಿರ್ಮಾನಿಸಿದಂತೆ ಪ್ರತಿ ಟನ್‌ ಕಬ್ಬಿಗೆ ₹3300 ನೀಡಬೇಕೆಂದರು.

ಮುಖಂಡರಾದ ಮುನ್ನಾಧಣಿ ನಾಡಗೌಡ, ಕೆಂಚಪ್ಪ ಬಿರಾದಾರ, ಸಂಗಮ್ಮ ದೇವರಳ್ಳಿ, ಸಿದ್ದರಾಜ ಹೊಳಿ ಇತರರು ಮಾತನಾಡಿದರು. ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಶಿರಸ್ತೇದಾರ್‌ ಜಿ.ಎನ್‌ಕಟ್ಟಿ ಮನವಿ ಪತ್ರ ಸ್ವೀಕರಿಸಿದರು.

ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲೂಕು ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಅಮರಪ್ಪಗೌಡ ಪಾಟೀಲ, ಸಿದ್ರಾಮಪ್ಪ ಹಂಪನಗೌಡರ, ಚನ್ನಪ್ಪಗೌಡ ಹಂಪನಗೌಡರ, ಬಸವರಾಜ ಮಂಗಳೂರ, ರೇವಣಸಿಸದ್ದಪ್ಪ ನಾಗರಬೆಟ್ಟ, ನಧೀಮ ಕಡು, ಶಿವಾನಂದ ಮಾದೋರನಳ್ಳಿ, ಎಸ್.ಎ ಪಾಟೀಲ, ಸಾಹೇಬಗೌಡ ಬಿರಾದಾರ, ಗುರುಸಂಗಪ್ಪ ತಂಗಡಗಿ, ರವಿಂದ್ರ ಬಿರಾದಾರ, ಮಂಜುನಾಥ ಗುರುವಿ, ಶಿದ್ರಾಮಯ್ಯ ಗುರುವಿನ, ಸಂಜು ಬಾಗೇವಾಡಿ, ಪುನೀತ್ ಹಿಪ್ಪರಗಿ, ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಲ್ಡರ್‌ ಮನೇಲಿ 18 ಕೋಟಿ ಮೌಲ್ಯದಚಿನ್ನ ಕದ್ದವರ ಪತ್ತೆಗೆ 3 ವಿಶೇಷ ತಂಡ
ಅಮೆರಿಕ ಪ್ರಜೆ ಮನೇಲಿ ಚಿನ್ನಾಭರಣಕಳವು ಮಾಡಿದ್ದ ಕೆಲಸಗಾರನ ಸೆರೆ