ದೇಶದಲ್ಲಿ ಸಂವಿಧಾನಬದ್ಧ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಕಾರ್ಮಿಕರ ಹಕ್ಕುಗಳ ಕುರಿತು ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ ಎಂದು ಧರ್ಮೇಶ್ ಆರೋಪಿಸಿದರು. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡು ಸರ್ವಾಧಿಕಾರಿ ವ್ಯವಸ್ಥೆ ತಲೆದೋರಿದರೆ ಅದರ ಮೊದಲ ಪರಿಣಾಮ ಮಹಿಳೆಯರು ಹಾಗೂ ಕಾರ್ಮಿಕರ ಮೇಲಾಗಲಿದೆ. ಹೀಗಾಗಿ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸಂಘಟಿತ ಹೋರಾಟ ಅಗತ್ಯ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.ನಗರದ ಶ್ರಮ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸಿಐಟಿಯು ಹಾಸನ ತಾಲೂಕು ಸಮಿತಿಯ ೬ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಸಂವಿಧಾನಬದ್ಧ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಕಾರ್ಮಿಕರ ಹಕ್ಕುಗಳ ಕುರಿತು ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ ಎಂದು ಧರ್ಮೇಶ್ ಆರೋಪಿಸಿದರು. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ ಎಂದು ಹೇಳಿದರು.ಪ್ರಜಾಪ್ರಭುತ್ವದ ವ್ಯವಸ್ಥೆಯಿಂದ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆಯ ಅವಕಾಶಗಳು ಹೆಚ್ಚಿವೆ. ಪ್ರಜಾಸತ್ತಾತ್ಮಕ ಹಕ್ಕುಗಳು ದುರ್ಬಲಗೊಂಡರೆ ಮಹಿಳೆಯರು ಸೇರಿದಂತೆ ದುರ್ಬಲ ವರ್ಗಗಳ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಮಹಿಳೆಯರು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.ಕಾರ್ಮಿಕ ಸಂಹಿತೆಗಳ ವಿರುದ್ಧ ಆಕ್ಷೇಪ:
ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಸಂಘಟನೆಗಳ ಬಲ ಕುಗ್ಗಿದರೆ ಶ್ರಮಿಕ ವರ್ಗದ ಮೇಲೆ ಪರಿಣಾಮ ಬೀರುತ್ತದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಿತಾಸಕ್ತಿಗಳಿಗೆ ಧಕ್ಕೆಯಾಗಲಿವೆ ಎಂಬ ಆತಂಕವನ್ನು ಕಾರ್ಮಿಕ ಸಂಘಟನೆಗಳು ವ್ಯಕ್ತಪಡಿಸುತ್ತಿವೆ. ಅಂಗನವಾಡಿ ನೌಕರರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ ಎಂದು ಧರ್ಮೇಶ್ ಹೇಳಿದರು.ಅಂಗನವಾಡಿ ನೌಕರರನ್ನು ಕಾಯಂಗೊಳಿಸುವುದು, ಕನಿಷ್ಠ ವೇತನ ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳು ದೀರ್ಘಕಾಲದಿಂದ ಬಾಕಿ ಇವೆ. ಈ ಬೇಡಿಕೆಗಳ ಈಡೇರಿಕೆಗೆ ಗ್ರಾಮೀಣ ಮಟ್ಟದಲ್ಲೂ ಸಂಘಟನೆಯನ್ನು ಬಲಪಡಿಸಿ ರೈತರು, ಕಾರ್ಮಿಕರು, ದಲಿತರು ಹಾಗೂ ಮಹಿಳೆಯರ ಸಮಸ್ಯೆಗಳನ್ನು ಒಳಗೊಂಡ ಜನಪರ ಚಳವಳಿ ರೂಪಿಸಬೇಕು ಎಂದರು.ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಜಯಂತಿ, ಖಜಾಂಚಿ ಮೀನಾಕ್ಷಿ ಇದ್ದರು. ಮಧು ಬಿ.ಎಸ್. ಕಾರ್ಯಕ್ರಮ ನಿರ್ವಹಿಸಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ ಮಾತನಾಡಿ, ಅಂಗನವಾಡಿ ನೌಕರರಿಂದ ಮೂಲ ಕರ್ತವ್ಯದ ಜತೆಗೆ ವಿವಿಧ ಸಮೀಕ್ಷೆ ಹಾಗೂ ಇತರ ಇಲಾಖೆಗಳ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಆದರೆ ಅವರ ಸೇವೆಗೆ ಅನುಗುಣವಾದ ವೇತನ ಮತ್ತು ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಕನಿಷ್ಠ ವೇತನ ಜಾರಿಗೊಳಿಸದೆ, ಗ್ರಾಚ್ಯುಟಿ ಸೇರಿದಂತೆ ಹಲವು ಸೌಲಭ್ಯಗಳನ್ನು ತಡೆಹಿಡಿಯಲಾಗುತ್ತಿದೆ. ನೌಕರರನ್ನು ಖಾಯಂಗೊಳಿಸದೆ ದುಡಿಸಿಕೊಳ್ಳಲಾಗುತ್ತಿದೆ. ಅಂಗನವಾಡಿ ವ್ಯವಸ್ಥೆಯ ಭವಿಷ್ಯದ ಬಗ್ಗೆಯೂ ಆತಂಕವಿದೆ ಎಂದು ಅವರು ಹೇಳಿದರು. ನೌಕರರ ಬೇಡಿಕೆಗಳ ಈಡೇರಿಕೆಗೆ ಬಲಿಷ್ಠ ಸಂಘಟನೆಯ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಸಂಘಟಿತಗೊಳಿಸಬೇಕು ಎಂದು ಪುಷ್ಪ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.