ಡಿಕೆಶಿಗೆ ತಾಕತ್ತು, ಪೌರುಷ ಇದ್ದರೆ ಬೈರಮಂಗಲ ವೃತ್ತಕ್ಕೆ ಬರಲಿ

KannadaprabhaNewsNetwork |  
Published : May 24, 2026, 01:15 AM IST
23ಕೆಆರ್ ಎಂಎನ್ 1.ಜೆಪಿಜಿಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್‌ಶಿಪ್‌ ) ಯೋಜನೆ ವಿಚಾರವಾಗಿ ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಾಕತ್ತು, ಪೌರುಷ ಇದ್ದರೆ ಬಿಡದಿಯ ಬೈರಮಂಗಲ ವೃತ್ತಕ್ಕೆ ಬರಲಿ ನೋಡೋಣ ಎಂದು ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್‌ಶಿಪ್‌ ) ಯೋಜನೆ ವಿಚಾರವಾಗಿ ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಾಕತ್ತು, ಪೌರುಷ ಇದ್ದರೆ ಬಿಡದಿಯ ಬೈರಮಂಗಲ ವೃತ್ತಕ್ಕೆ ಬರಲಿ ನೋಡೋಣ ಎಂದು ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಪಂಥಾಹ್ವಾನ ನೀಡಿ ಚರ್ಚೆ ಮಾಡುವುದು ಬೇಡ. ಧೈರ್ಯವಿದ್ದರೆ ನಿಮ್ಮ ಅಧಿಕಾರ ದರ್ಪವನ್ನು ಬೈರಮಂಗಲ ವೃತ್ತದಲ್ಲಿ 435 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರೊಂದಿಗೆ ಚರ್ಚೆ ಮಾಡಿ ತೋರಿಸಿ ಎಂದು ಹೇಳಿದರು.

ಈ ಯೋಜನೆ ಕುಮಾರಸ್ವಾಮಿ ಕೂಸು. ಆ ಕೂಸಿಗೆ ಹಾಲುಣಿಸಿ ಪೋಷಣೆ ಮಾಡುತ್ತೇವೆ ಎನ್ನುತ್ತಿರುವ ಡಿ.ಕೆ.ಶಿವಕುಮಾರ್ ಸಾಹೆಬರಿಗೆ ಪಿತ್ರಾರ್ಜಿತ ಆಸ್ತಿ ರಕ್ಷಿಸಿಕೊಂಡು ಕೃಷಿ ಮಾಡುತ್ತಿರುವ ನಿಜವಾದ ರೈತರ ಕೂಗು ಕೇಳಿಸುತ್ತಿಲ್ಲ. ಅಷ್ಟಕ್ಕೂ ಇಲ್ಲಿವರೆಗೆ ಬೈರಮಂಗಲ ವೃತ್ತಕ್ಕೆ ಭೇಟಿ ನೀಡುವ ಧೈರ್ಯ ಮಾಡಿಲ್ಲ ಏಕೆಂದು ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

ಚರ್ಚೆ ಮಾಡುವ ನೆಪದಲ್ಲಿ ಡಿ.ಕೆ.ಶಿವಕುಮಾರ್ ಅವರು ನಿಜವಾದ 10-15 ಮಂದಿ ರೈತರನ್ನು ಮಾತ್ರ ಕರೆಸಿಕೊಂಡು ದಕ್ಷ ಐಎಎಸ್ ಅಧಿಕಾರಿಗಳಿಂದ ವಸ್ತುಸ್ಥಿತಿ ಪರಿಶೀಲನೆ ನಡೆಸಿ ವರಿದಿ ತರಿಸಿಕೊಳ್ಳುವುದಾಗಿ ಭರವಸೆ ನೀಡಿ ಕಳುಹಿಸಿದ್ದರು. ಅದರ ಮರು ದಿನವೇ ತಮ್ಮ ಪಟಾಲಂನ್ನು ಕರೆಸಿಕೊಂಡು ಅವರೆಲ್ಲರು ಯೋಜನೆ ಪರವಾಗಿದ್ದಾರೆಂದು ಜೈಕಾರ ಹಾಕಿಸಿಕೊಂಡು ದಾಖಲೆಗಾಗಿ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.

ಬೈರಮಂಗಲ ವೃತ್ತಕ್ಕೆ ಕುಮಾರಸ್ವಾಮಿ, ಆರ್.ಅಶೋಕ್, ಅಶ್ವತ್ ನಾರಾಯಣ, ಡಾ.ಮಂಜುನಾಥ್, ನಿಖಿಲ್ ಕುಮಾರಸ್ವಾಮಿ ಅವರೆಲ್ಲರು ಬಂದು ಹೋಗಿದ್ದಾರೆ. ರೈತಸಂಘ, ಕನ್ನಡಪರ ಸಂಘಟನೆಗಳು, ಚಿಂತಕರು, ಪ್ರಜ್ಞಾವಂತರು, ಬುದ್ಧಿಜೀವಿಗಳು ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಅವರೆಲ್ಲರಿಗಿಂತ ನೀವು ದೊಡ್ಡವರಲ್ಲ. ನಿಮ್ಮ ದಂಡು ದಾಳಿಯೊಂದಿಗೆ ಬೈರಮಂಗಲ ವೃತ್ತಕ್ಕೆ ಬನ್ನಿ ಎಂದು ಸವಾಲು ಹಾಕಿದರು.

ರೈತರ ಎದೆ ಮೇಲೆ ಮರಣ ಶಾಸನ:

ಬಿಡದಿ ಟೌನ್‌ಶಿಪ್ ಯೋಜನೆ ಹೆಸರಿನಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಕಂದಾಯ ಗ್ರಾಮಗಳ ಫಲವತ್ತಾದ ಭೂಮಿಯನ್ನು ಲಪಟಾಯಿಸಿ ರೈತರ ಎದೆ ಮೇಲೆ ಮರಣ ಶಾಸನ ಬರೆಯಲು ಹೊರಟಿದ್ದಾರೆ. ರೈತರ ಬದುಕಿನಲ್ಲಿ ಚೆಲ್ಲಾಟವಾಡಲು ನಾವು ಎಂದಿಗೂ ಅವಕಾಶ ನೀಡುವುದಿಲ್ಲ. ರೈತರ ಪಾಲಿಗೆ ನಾವು ಉಸಿರಾಗಿ ನಿಲ್ಲುತ್ತೇವೆ ಎಂದು ಧೈರ್ಯ ತುಂಬಿದರು.

ಕುಮಾರಸ್ವಾಮಿಯವರು ಘೋಷಣೆ ಮಾಡಿದ್ದ ಯೋಜನೆಗೂ ಮತ್ತು ಈಗಿನ ಯೋಜನೆಗೂ ಸಾಕಷ್ಟು ವ್ಯತ್ಯಾಸವಿದೆ. ಈ ಬಗ್ಗೆ ಚರ್ಚೆಗೆ ಕರೆದರೆ ಯಾರೂ ಬರುತ್ತಿಲ್ಲ. ಅಷ್ಟಕ್ಕೂ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೋಟಿಫಿಕೇಶನ್ ಆಗಿಯೇ ಇಲ್ಲ. ಇದರ ಬಗ್ಗೆ ನಾನು ಶಾಸಕನಾಗಿದ್ದಾಗ ಕೇಳಿದ ಪ್ರಶ್ನೆಗೆ ಸಚಿವ ಜಿ.ಪರಮೇಶ್ವರ್ ಬೆಳಗಾವಿ ಅಧಿವೇಶನದಲ್ಲಿ ಅಧಿಸೂಚನೆ ಆಗಿಲ್ಲವೆಂದು ಉತ್ತರಿಸಿದ್ದರು. ಈ ದಾಖಲೆಗಳು ಸುಳ್ಳಾ ಎಂದು ಪ್ರಶ್ನೆ ಮಾಡಿದರು.

ಡಿಕೆಶಿ - ಎಚ್ ಸಿಬಿ ತಲೆ ಮೇಲೆ ಬಂಡೆ ಎಳೆಯುತ್ತಾರೆ:

ಈಗ ಯೋಜನೆ ಪರವಾಗಿ ನಿಂತಿರುವ ರೈತರೇ ಹುಷಾರಾಗಿರಿ. ಡಿ.ಕೆ.ಶಿವಕುಮಾರ್ ಮತ್ತು ಎಚ್.ಸಿ.ಬಾಲಕೃಷ್ಣರವರ ಗಿಲೀಟ್ ಮಾತುಗಳಿಗೆ ಮರಳಾದರೆ ನಿಮ್ಮ ತಲೆ ಮೇಲೆ ಬಂಡೆ ಎಳೆಯುತ್ತಾರೆ. ಈಗ ಕಿಲಕಿಲ ಎಂದು ಖುಷಿಯಲ್ಲಿರುವ ರೈತರು ಪಶ್ಚಾತ್ತಾಪ ಪಡುವ ದಿನಗಳು ದೂರ ಉಳಿದಿಲ್ಲ ಎಂದು ಎಚ್ಚರಿಸಿದರು.

ಪ್ರಾಥಮಿಕ ಅಧಿಸೂಚನೆ ಒಮ್ಮೆಲೆ ಹೊರಡಿಸಿದವರು ಈಗೇಕೆ ಪ್ರತಿ ಮೂರು ಗ್ರಾಮಗಳಂತೆ ಪ್ರತ್ಯೇಕ ಅಂತಿಮ ಅಧಿಸೂಚನೆ ಹೊರಡಿಸುತ್ತಿದ್ದಾರೆ. ಬಹುಪಾಲು ರೈತರು ಯೋಜನೆ ಪರವಾಗಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ಅವರದ್ದಾಗಿದೆ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ. ಅಲ್ಲದೆ, ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ ನಡೆಸಲಿದೆ ಎಂದು ಹೇಳಿದರು.

ಬೇನಾಮಿ ಹೆಸರಿನಲ್ಲಿ ಆಸ್ತಿ:

ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಟರಾಜ್ ಪತ್ನಿ ಹಾಗೂ ಯೋಜನೆ ಪರವಾಗಿರುವ ರೈತ ಮುಖಂಡರು ಬೇನಾಮಿ ಹೆಸರಿನಲ್ಲಿ ಜಮೀನನ್ನು ನೋಂದಣಿ ಮಾಡಿಸಿದ್ದಾರೆ. ಬನ್ನಿಗಿರಿ ಸರ್ವೆ ನಂಬರ್ 135-1ರಲ್ಲಿ ವಾಸ್ತವವಾಗಿ ಜಮೀನೇ ಇಲ್ಲ. ಆದರೂ ಪಟೇಲ್ ನಾಗೇಗೌಡರ ಹೆಸರಿನ ಖಾತೆಯಲ್ಲಿ 12 ಎಕರೆ ಜಮೀನು ಕೂರಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇನೆ ಎಂದು ಎ.ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಪುಟ್ಟಣ್ಣ, ಅಂಜನಾಪುರ ವಾಸು, ಬೋರೇಗೌಡ, ಮಂಜುನಾಥ್ ಇತರರಿದ್ದರು.

ಬಾಕ್ಸ್ ..............

ನಿಖಿಲ್ ಮತ್ತು ನಾನು ರಿಯಾಲಿಟಿ ಚೆಕ್ ಮಾಡ್ತೇವೆ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ ) ಯೋಜನೆಗೆ ಎಷ್ಟು ಮಂದಿ ರೈತರು ಪರ ಮತ್ತು ವಿರುದ್ಧವಾಗಿದ್ದಾರೆ ಎಂಬುದನ್ನು ನಾನು ಮತ್ತು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಂದಿನ ವಾರದಲ್ಲಿಯೇ ರಿಯಾಲಿಟಿ ಚೆಕ್ ಮಾಡುತ್ತೇವೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಹೋಬಳಿಯ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲಿ ಪ್ರತಿಯೊಂದು ಮನೆಗೂ ಹೋಗಿ ಟೌನ್ ಶಿಪ್ ಯೋಜನೆ ಕುರಿತು ರೈತರ ಪರ ಮತ್ತು ವಿರೋಧದ ಅಭಿಪ್ರಾಯವನ್ನು ಖುದ್ಧಾಗಿ ಸಂಗ್ರಹಿಸುತ್ತೇವೆ. ಈಗಾಗಲೇ ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಸರ್ಕಾರ ಉತ್ತರ ಕೊಡದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

23ಕೆಆರ್ ಎಂಎನ್ 1.ಜೆಪಿಜಿ

ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆಗೆ ಬೆಂಕಿ : ಲಕ್ಷಾಂತಕ ರು ನಷ್ಟ
50 ಮಿಲಿಯನ್ ಸಸಿಗಳ ನೆಡುವ ಅಭಿಯಾನ