ಕನ್ನಡಪ್ರಭ ವಾರ್ತೆ, ತುಮಕೂರು
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ತಹಸೀಲ್ದಾರ್, ಎಇಇ, ಇಒ ನಿಗಾವಹಿಸಬೇಕು. ಜಿಲ್ಲೆಗೆ ಕುಡಿಯುವ ನೀರಿನ ಪೂರೈಕೆ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳಿಗೆ ಸಂಬಂಧಿಸಿದಂತೆ ಇನ್ನೊಂದು ವಾರದೊಳಗಾಗಿ ತಮಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ಅವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬರ ನಿರ್ವಹಣೆಗೆ ಸಂಬಂಧಿಸಿದಂತೆ ಮೇಲುಸ್ತುವಾರಿಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿಗೆ ಹಾಗೂ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಆಯಾ ತಾಲೂಕಿನ ಶಾಸಕರ ನೇತೃತ್ವದ ಟಾರ್ಸ್ಕಫೋರ್ಸ್ ಸಮಿತಿ ಸಲ್ಲಿಸುವ ವರದಿಯನ್ನು ಇನ್ನು ಮುಂದೆ ನೇರವಾಗಿ ತಹಶೀಲ್ದಾರ್‌ಗಳು ಜಿಲ್ಲಾಧಿಕಾರಿಗಳ ಅನುಮೋದನೆಗೆ ಸಲ್ಲಿಸಬೇಕು. ತದ ನಂತರ ಟಾರ್ಸ್ಕಫೋರ್ಸ್ ಸಮಿತಿಯ ನಡಾವಳಿಯನುಸಾರ ಸಹಾಯಕ ಕಾರ್ಯಪಾಲಕ ಅಭಿಯಂತರರು ಅಂದಾಜು ಪಟ್ಟಿ ಸಿದ್ಧಪಡಿಸಿ ಗ್ರಾ.ಕು.ನೀ.ಮತ್ತು ನೈ.ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಪ್ರತಿ ತಾಲೂಕಿಗೆ ಈಗಾಗಲೇ 25 ಲಕ್ಷ ರು. ಬಿಡುಗಡೆಯಾಗಿದ್ದು, ಎಸ್.ಡಿ.ಆರ್.ಎಫ್. ಮೊತ್ತವೂ ಸೇರಿದಂತೆ ತಹಸೀಲ್ದಾರ್ ಖಾತೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಒಟ್ಟು ೫೦ಲಕ್ಷ ರು. ಲಭ್ಯವಿರುತ್ತದೆ. ಕುಡಿಯುವ ನೀರು ಹಾಗೂ ಬರ ನಿರ್ವಹಣೆಗೆ ಮತ್ತಷ್ಟು ಪ್ರಸ್ತಾವನೆಗಳು ಬಂದಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ವತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಊರಿನ ಯಾವುದಾದರೂ ಒಂದು ಭಾಗದಲ್ಲಿ ನೀರಿನ ತೊಟ್ಟಿಗಳನ್ನು ಕಟ್ಟಿ ಜಾನುವಾರುಗಳಿಗೆ ನೀರು ಪೂರೈಸುವಂತೆ ಸೂಚಿಸಿದ ಸಚಿವರು, ಅರಣ್ಯ ಇಲಾಖೆ ವತಿಯಿಂದ ವನ್ಯ ಜೀವಿಗಳಿಗೆ ಕುಡಿಯುವ ನೀರಿಗಾಗಿ ಚೆಕ್‌ಡ್ಯಾಂಗಳನ್ನು ನಿರ್ಮಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿನ ಕುಡಿಯುವ ನೀರಿನ ಬಗ್ಗೆ ಮಾಹಿತಿ ನೀಡಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯನಿರ್ವಾಹಕ ಅಭಿಯಂತರ ರವೀಶ್ ಅವರು, ಜಿಲ್ಲೆಯ 10 ತಾಲ್ಲೂಕುಗಳ ತುರ್ತು ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಸರ್ಕಾರವು ಜುಲೈ 2023 ರಲ್ಲಿ 100 ಲಕ್ಷ ರು.ಗಳನ್ನು ಮಂಜೂರು ಮಾಡಿರುತ್ತದೆ. ಸದರಿ ಅನುದಾನದಡಿ ಈಗಾಗಲೇ 36 ಜನವಸತಿಗಳಿಗೆ ಹೊಸ ಕೊಳವೆಬಾವಿ ಕೊರೆಯಲು ೯೬ ಲಕ್ಷಗಳಿಗೆ ಮಂಜೂರಾತಿ ನೀಡಲಾಗಿರುತ್ತದೆ ಮತ್ತು ಬರಪೀಡಿತ ತಾಲೂಕುಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಎಲ್ಲಾ 10 ತಾಲೂಕುಗಳಿಗೆ ತಲಾ ೨೫ಲಕ್ಷ ರು.ಗಳನ್ನು ಇಲ್ಲಿಯವರೆಗೆ ಮಂಜೂರು ಮಾಡಲಾಗಿರುತ್ತದೆ. ಇಲ್ಲಿವರೆಗೆ ಸಮಸ್ಯಾತ್ಮಕ 72 ಗ್ರಾಮಗಳಲ್ಲಿ ಒಟ್ಟು 48 ಹೊಸ ಕೊಳವೆಬಾವಿಗಳು, 6 ಜನವಸತಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, 14 ಜನವಸತಿಗಳಿಗೆ ಖಾಸಗಿ ಕೊಳವೆ ಬಾವಿಯಿಂದ ಮತ್ತು 2 ಜನವಸತಿಗಳಿಗೆ ಪಕ್ಕದ ಜನವಸತಿಗಳಿಂದ ನೀರಿನ ಸಮಸ್ಯೆ ಬಗೆಹರಿಸಲಾಗಿರುತ್ತದೆ ಎಂದು ವಿವರಿಸಿದರು.