ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡಗೆ ಗೋಬ್ಯಾಕ್ ಎಂದು ಕೂಗಿ ಕಾರ್ಯಕರ್ತರ ಆಕ್ರೋಶ

KannadaprabhaNewsNetwork | Published : Mar 5, 2024 1:39 AM

ಸಾರಾಂಶ

ಮಧುಗಿರಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ವಿರುದ್ಧ ಕೊರಟಗೆರೆ ತಾಲೂಕಿನ ಬಿಜೆಪಿ ಕಾರ್ಯಕರ್ತರು ಗೋಬ್ಯಾಕ್ ಎಂದು ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಮಧುಗಿರಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ವಿರುದ್ಧ ಕೊರಟಗೆರೆ ತಾಲೂಕಿನ ಬಿಜೆಪಿ ಕಾರ್ಯಕರ್ತರು ಗೋಬ್ಯಾಕ್ ಎಂದು ಕೂಗಿ ಪ್ರತಿಭಟನೆ ನಡೆಸಿದ್ದಾರೆ. ನಿಷ್ಠಾವಂತ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ, ಪಕ್ಷದ ಬಾವುಟವನ್ನು ಹಿಡಿಯದೆ ಇರುವವರಿಗೆ ಪಕ್ಷದ ಹುದ್ದೆ ನೀಡಿರುವುದನ್ನು ವಿರೋಧಿಸಿ ನೂರಾರು ಬಿಜೆಪಿ ಕಾರ್ಯಕರ್ತರ ಪಟ್ಟಣದ ಎಸ್‌ಎಸ್‌ಆರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪವನ್ ಕುಮಾರ್ ಮಾತನಾಡಿ, ತಾಲೂಕಿನ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಗಮನಕ್ಕೆ ತರದೇ ಚಿತ್ರದುರ್ಗ ಜಿಲ್ಲೆಯವರನ್ನು ನಮ್ಮ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಒಂದು ದಿನವೂ ಬಿಜೆಪಿ ಬಾವುಟ ಹಿಡಿಯದೆ ಇರುವವರನ್ನು ತಾಲೂಕು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಈ ವಿಷಯ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇವೆ ಎಂಬ ಉದ್ದೇಶದಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.

ಈ ಸಲ ಲೋಕಾಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲ್ಲಿಸುವುದು ನಮ್ಮ ಉದ್ದೇಶವಾಗಿದೆ. ಆದರೆ ನಮ್ಮ ರಾಜ್ಯಾಧ್ಯಕ್ಷರು ಲೋಕಾಸಭಾ ಚುನಾವಣೆ ಮುಗಿವರೆಗೂ ಯಾವುದೇ ಬದಲಾವಣೆ ಮಾಡಬಾರದು ಅಂತ ಹೇಳಿದರೂ ರಾತ್ರೋರಾತ್ರಿ ತಾಲೂಕು ಮಂಡಲದ ಪದಾಧಿಕಾರಿಗಳ ಆಯ್ಕೆ ಮಾಡಿರುವುದು ಬೇಸರ ತಂದಿದೆ. ನಾವು ಯಾವದೇ ಕಾರಣಕ್ಕೂ ಅವರ ಜೊತೆ ಹೋಗಲ್ಲ. ನಾವು ಸಾಮಾನ್ಯ ಕಾರ್ಯಕರ್ತರಂತೆ ನರೇಂದ್ರ ಮೋದಿಯವರ ಕೈಬಲ ಪಡಿಸುತ್ತೇವೆ ಎಂದರು.

ಬಿಜೆಪಿ ಹಿರಿಯ ಮುಖಂಡರಾದ ಸುಶೀಲಮ್ಮ ಮಾತನಾಡಿ, ಸಾಕಷ್ಟು ವರ್ಷದಿಂದ ಬಿಜೆಪಿ ಸಂಘಟನೆ ಮಾಡಿಕೊಂಡು ಬರುತ್ತಿದ್ದೇವೆ. ಸಂಘಟನೆ ಮಾಡಿದ ಪದಾಧಿಕಾರಿಗಳ ಸಲಹೆ ಪಡೆಯದೇ ಏಕಾಏಕಿ ಪದಾಧಿಕಾರಿಗಳ ಆಯ್ಕೆ ಮಾಡಿರುವುದು ಬೇಸರ ತಂದಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಗುರುದತ್, ಆಟೋಗೋಪಿ, ನಟರಾಜು, ದಯಾನಂದ್, ಕೆಂಗ ರವಿಕುಮಾರ್, ಜಗನಾಥ್, ರಮೇಶ್, ಪ್ರಸನ್ನಕುಮಾರ್ ರಾಜೇಂದ್ರ, ಲೋಕೇಶ್, ಪುಟ್ಟರಾಜು, ಸಿದ್ದರಾಜು, ಮಲ್ಲೇಶ್, ರಂಜೀತ್, ಹೊಳವನಹಳ್ಳಿ ಗಿರೀಶ್, ನಾಗರಾಜು, ರಾಜಣ್ಣ, ನಂಜುಂಡಯ್ಯ. ರಂಗನಾಥ್, ಕಿರಣ್, ಪುನೀತ್, ಸೇರಿದಂತೆ ಇತರರು ಇದ್ದರು.

Share this article